ಮನೆ ರಾಷ್ಟ್ರೀಯ ಟೀಂ ಇಂಡಿಯಾದಂತೆ ಒಂದಾಗಿ ಕೆಲಸ ಮಾಡೋಣ: ಪ್ರಧಾನಮಂತ್ರಿ ಮೋದಿ ರಾಜ್ಯ ಸರ್ಕಾರಗಳಿಗೆ ಕರೆ

ಟೀಂ ಇಂಡಿಯಾದಂತೆ ಒಂದಾಗಿ ಕೆಲಸ ಮಾಡೋಣ: ಪ್ರಧಾನಮಂತ್ರಿ ಮೋದಿ ರಾಜ್ಯ ಸರ್ಕಾರಗಳಿಗೆ ಕರೆ

0

ನವದೆಹಲಿ: ಭಾರತವನ್ನು 2047ರೊಳಗೆ ವಿಕಸಿತ ರಾಷ್ಟ್ರವನ್ನಾಗಿಸಲು ಎಲ್ಲ ರಾಜ್ಯಗಳು ಟೀಂ ಇಂಡಿಯಾದಂತೆ ಒಗ್ಗೂಡಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ನೀತಿ ಆಯೋಗದ ಸಭೆಯಲ್ಲಿ ಮಾತನಾಡಿದ ಅವರು, ದೇಶದ ಪ್ರತಿ ರಾಜ್ಯ, ಪ್ರತಿ ಪ್ರದೇಶ, ಪ್ರತಿಯೊಬ್ಬ ನಾಗರಿಕನಿಗೂ ಈ ಗುರಿ ಹೊಣೆಗಾರಿಕೆಯಾಗಬೇಕು ಎಂದು ಕರೆ ನೀಡಿದ್ದಾರೆ.

ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ, “ವಿಕಸಿತ ಭಾರತವು 140 ಕೋಟಿ ಭಾರತೀಯರ ಆಕಾಂಕ್ಷೆ. ಪ್ರತಿಯೊಂದು ರಾಜ್ಯವೂ ಸಮೃದ್ಧವಾಗಿದ್ದರೆ ಮಾತ್ರ ಭಾರತ ವಿಕಸಿತ ರಾಷ್ಟ್ರವಾಗಲು ಸಾಧ್ಯ” ಎಂದು ಹೇಳಿದರು. ಅವರು ಮುಂದಾಗಿ, ಪ್ರತಿಯೊಂದು ರಾಜ್ಯವೂ ತಮ್ಮಲ್ಲಿ ಕನಿಷ್ಠ ಒಂದು ಜಾಗತಿಕ ಮಟ್ಟದ ಪ್ರವಾಸಿ ತಾಣವನ್ನು ಅಭಿವೃದ್ಧಿಪಡಿಸಬೇಕು ಎಂಬುದಾಗಿ ಸೂಚನೆ ನೀಡಿದರು. ಇದರಿಂದ “ಒಂದು ರಾಜ್ಯ, ಒಂದು ಜಾಗತಿಕ ತಾಣ” ಎಂಬ ಭರವಸೆಯ ಕಲ್ಪನೆಯತ್ತ ಹೆಜ್ಜೆ ಇಡಬಹುದು ಎಂದರು.

ಸಭೆಯಲ್ಲಿ ಮಹಿಳಾ ಸಬಲೀಕರಣದ ಮಹತ್ವವನ್ನೂ ಮೋದಿ ಒತ್ತಿ ಹೇಳಿದರು. “ಮಹಿಳೆಯರನ್ನು ಗೌರವಯುತವಾಗಿ ಕಾರ್ಯಪಡೆಯಲ್ಲಿ ಸೇರಿಸಲು ಕಾನೂನುಗಳನ್ನು ರೂಪಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಈ ಮೂಲಕ ಸಮಾಜದ ಎಲ್ಲ ವರ್ಗಗಳಿಗೂ ಸಮಾನ ಅವಕಾಶ ಸಿಗುವ ದಾರಿ ಸುಗಮವಾಗುತ್ತದೆ ಎಂಬ ನಂಬಿಕೆ ವ್ಯಕ್ತಪಡಿಸಿದರು.

ನೀತಿ ಆಯೋಗ ಸಭೆಯಲ್ಲಿ ಆಂಧ್ರಪ್ರದೇಶದ ಎನ್. ಚಂದ್ರಬಾಬು ನಾಯ್ಡು, ತಮಿಳುನಾಡಿನ ಎಂ.ಕೆ. ಸ್ಟಾಲಿನ್, ತೆಲಂಗಾಣದ ರೇವಂತ್ ರೆಡ್ಡಿ, ಜಮ್ಮು-ಕಾಶ್ಮೀರದ ಒಮರ್ ಅಬ್ದುಲ್ಲಾ ಹಾಗೂ ಹಿಮಾಚಲ ಪ್ರದೇಶದ ಸುಖವಿಂದರ್ ಸುಖು ಭಾಗವಹಿಸಿದ್ದರು. ಆದರೆ ಪುದುಚೇರಿ, ಕರ್ನಾಟಕ ಮತ್ತು ಕೇರಳದ ಮುಖ್ಯಮಂತ್ರಿಗಳು ಗೈರಾಗಿದ್ದರು.

ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಹಲವು ಸಚಿವರು ಉಪಸ್ಥಿತರಿದ್ದು, ರಾಷ್ಟ್ರ ನಿರ್ಮಾಣದ ಬೃಹತ್ ಯೋಜನೆಗಳ ಬಗ್ಗೆ ಚರ್ಚಿಸಿದರು.