ನವದೆಹಲಿ : ದೆಹಲಿಯ ಹೆಸರನ್ನು ಇಂದ್ರಪ್ರಸ್ಥ ಎಂದ ಬದಲಾಯಿಸುವಂತೆ ಕೂಗೆದ್ದಿದೆ. ದೆಹಲಿಯ ಚಾಂದಿನಿ ಚೌಕ್ ಬಿಜೆಪಿ ಸಂಸದ ಪ್ರವೀಣ್ ಖಂಡೇಲ್‌ವಾಲ್ ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದು ದೆಹಲಿಯ ಹೆಸರು ಬದಲಾಯಿಸಿ ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡುವಂತೆ ಒತ್ತಾಯಿಸಿದ್ದಾರೆ.
ದೆಹಲಿಯ ಹೆಸರು ಬದಲಾವಣೆ ಭಾರತದ ಆತ್ಮ ಮತ್ತು ಐತಿಹಾಸಿಕ ಸಂಪ್ರದಾಯದ ಪುನರುಜ್ಜೀವನದ ಸಂಕೇತವಾಗಲಿದೆ ಎಂದು ಪ್ರವೀಣ್ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮಹಾಭಾರತದ ಸಮಯದಲ್ಲಿ ಪಾಂಡವರು ಯಮುನಾ ನಧಿಯ ದಡದಲ್ಲಿ ಇಂದ್ರಪ್ರಸ್ಥ ಎಂಬ ರಾಜಧಾನಿಯನ್ನು ಸ್ಥಾಪಿಸಿದ್ದರು ಎನ್ನುವುದಕ್ಕೆ ಸಾಕ್ಷಿಯಿದೆ ಎಂದು ಈ ಪತ್ರದಲ್ಲಿ ಪ್ರವೀಣ್ ಖಂಡೇಲ್ವಾಲ್ ಪ್ರಸ್ತಾಪಿಸಿದ್ದಾರೆ.
ನಂತರ ಈ ನಗರವು ವ್ಯಾಪಾರ, ಸಂಸ್ಕೃತಿ ಮತ್ತು ಆಡಳಿತದ ಕೇಂದ್ರವಾಯಿತು. ಸುಲ್ತಾನರು ಮತ್ತು ಮೊಘಲರ ಅವಧಿಯಲ್ಲಿ, ಈ ಹೆಸರು ದೆಹಲಿಯಾಗಿ ಬದಲಾಯಿತು. 1911 ರಲ್ಲಿ, ಬ್ರಿಟಿಷ್ ಆಳ್ವಿಕೆಯು ನವದೆಹಲಿಯನ್ನು ರಾಜಧಾನಿಯಾಗಿ ಘೋಷಿಸಿತು ಎಂದು ಪತ್ರದಲ್ಲಿ ಹೇಳಿದ್ದಾರೆ.
ಏನೇನು ಬದಲಾಗಬೇಕು..? – ಗೃಹ ಸಚಿವ ಅಮಿತ್ ಶಾ ಅವರಿಗೆ ಬರೆದ ಪತ್ರದಲ್ಲಿ ಪ್ರವೀಣ್ ಖಂಡೇಲ್ವಾಲ್ 4 ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಭಾರತದ ರಾಜಧಾನಿ ದೆಹಲಿಯ ಹೆಸರನ್ನು ಇಂದ್ರಪ್ರಸ್ಥ ಎಂದು ಬದಲಾಯಿಸಬೇಕು. ಹಳೆ ದೆಹಲಿ ರೈಲು ನಿಲ್ದಾಣವನ್ನು ಇಂದ್ರಪ್ರಸ್ಥ ಜಂಕ್ಷನ್ ಎಂದು ಮರುನಾಮಕರಣ ಮಾಡಬೇಕು.
ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಇಂದ್ರಪ್ರಸ್ಥ ವಿಮಾನ ನಿಲ್ದಾಣ ಎಂದು ಮರುನಾಮಕರಣ ಮಾಡಬೇಕು. ದೆಹಲಿಯ ಯಾವುದಾದರೂ ಒಂದು ಪ್ರಮುಖ ಸ್ಥಳದಲ್ಲಿ ಪಾಂಡವರ ಭವ್ಯ ಪ್ರತಿಮೆಗಳನ್ನು ಸ್ಥಾಪಿಸಬೇಕು.
ಅಯೋಧ್ಯೆ, ಕಾಶಿ ಮತ್ತು ಪ್ರಯಾಗ್‌ರಾಜ್‌ನಂತಹ ನಗರಗಳು ತಮ್ಮ ಪ್ರಾಚೀನ ಗುರುತನ್ನು ಮರಳಿ ಪಡೆದಾಗ, ದೆಹಲಿಯು ತನ್ನ ಮೂಲ ಹೆಸರಿಗೆ ಮರಳುವುದರಿಂದ ಸಂಸ್ಕೃತಿ ಶ್ರೀಮಂತವಾಗುತ್ತದೆ. ದೆಹಲಿ ಇಂದ್ರಪ್ರಸ್ಥ ಎಂದು ಮರುನಾಮಕರಣ ಮಾಡುವುದರಿಂದ ರಾಜಧಾನಿಯಲ್ಲಿ ಪ್ರವಾಸೋದ್ಯಮವೂ ವೃದ್ಧಿಯಾಗುತ್ತದೆ ಎಂದು ಹೇಳಿದರು.
ʻಇಂದ್ರಪ್ರಸ್ಥʼ ಬೇಡಿಕೆಯನ್ನು ಬೆಂಬಲಿಸಲು ಅವರು ಐತಿಹಾಸಿಕ ಉಲ್ಲೇಖಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಮಹಾಭಾರತದ ಅವಧಿ : ಪಾಂಡವರು ತಮ್ಮ ರಾಜಧಾನಿಯನ್ನು ಹಸ್ತಿನಾಪುರದಿಂದ ಸ್ಥಳಾಂತರಿಸಿ ಯಮುನಾ ನದಿಯ ದಡದಲ್ಲಿ ಇಂದ್ರಪ್ರಸ್ಥವನ್ನು ಸ್ಥಾಪಿಸಿದರು.
ಮೌರ್ಯರಿಂದ ಗುಪ್ತರ ಕಾಲದವರೆಗೆ: ಇಂದ್ರಪ್ರಸ್ಥವು ವ್ಯಾಪಾರ, ಸಂಸ್ಕೃತಿ ಮತ್ತು ಆಡಳಿತದ ಪ್ರಮುಖ ಕೇಂದ್ರವಾಗಿತ್ತು. ರಜಪೂತರ ಅವಧಿ (11ನೇ–12ನೇ ಶತಮಾನಗಳು) : ತೋಮರ್ ರಾಜರು ಇದನ್ನು ʼಢಿಲ್ಲಿಕಾʼ ಎಂದು ಕರೆದರು. ಇದರಿಂದ ʻದೆಹಲಿʼ ಎಂಬ ಹೆಸರು ಬಂತು.
ಸುಲ್ತಾನರು ಮತ್ತು ಮೊಘಲ್ ಅವಧಿ : ಸಿರಿ, ತುಘಲಕಾಬಾದ್, ಫಿರೋಜ್ ಷಾ ಕೋಟ್ಲಾ ಮತ್ತು ಶಹಜಹಾನಾಬಾದ್‌ನಂತಹ ನಗರಗಳು ಅಭಿವೃದ್ಧಿ ಹೊಂದಿದವು. ಆದರೆ ಭೌಗೋಳಿಕ ಕೇಂದ್ರವು ಪ್ರಾಚೀನ ಇಂದ್ರಪ್ರಸ್ಥವಾಗಿಯೇ ಉಳಿಯಿತು. ಬ್ರಿಟಿಷ್ ಅವಧಿ (1911) : ಪಾಂಡವರ ರಾಜಧಾನಿ ಇದ್ದ ಅದೇ ಐತಿಹಾಸಿಕ ಭೂಮಿಯಲ್ಲಿ ನವದೆಹಲಿಯನ್ನು ರಾಜಧಾನಿಯನ್ನಾಗಿ ಮಾಡಲಾಯಿತು.














