ಮನೆ ರಾಜ್ಯ ಮಹಿಳಾ ಮೀಸಲಾತಿಗೆ ಆಗ್ರಹಿಸಿ ಪ್ರಧಾನಿಗೆ ಪತ್ರ

ಮಹಿಳಾ ಮೀಸಲಾತಿಗೆ ಆಗ್ರಹಿಸಿ ಪ್ರಧಾನಿಗೆ ಪತ್ರ

0

ಮೈಸೂರು: ವಿಧಾನಸಭೆ, ಲೋಕಸಭೆಯಲ್ಲಿ ಮಹಿಳೆಯರ ರಾಜಕೀಯ ಮೀಸಲಾತಿ ಜಾರಿ ಮಾಡುವಂತೆ ಒತ್ತಾಯಿಸಿ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗೆ ಪತ್ರ ಬರೆಯುವುದಾಗಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಡಾ.ಪುಷ್ಪಾ ಅಮರನಾಥ್‌ ತಿಳಿಸಿದ್ದಾರೆ.


ನಗರ ಮತ್ತು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್‌‍ ವತಿಯಿಂದ ನಗರದ ಇಂದಿರಾ ಕಾಂಗ್ರೆಸ್‌‍ ಭವನದ ಆವರಣದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ಪ್ರಜಾಪ್ರಭುತ್ವ ದಿನ ಮತ್ತು ಮಹಿಳಾ ಕಾಂಗ್ರೆಸ್‌‍ ಸಂಸ್ಥಾಪನಾ ದಿನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಮಹಿಳೆಯರಿಗೆ ಸ್ಥಳೀಯ ಸಂಸ್ಥೆಗಳಲ್ಲಿ ರಾಜಕೀಯ ಮೀಸಲಾತಿ ದೊರೆತಿದೆ. ವಿಧಾನಸಭೆ, ಪಾರ್ಲಿಮೆಂಟಿನಲ್ಲಿ ರಾಜಕೀಯ ಮೀಸಲಾತಿ ಜಾರಿಗೊಳಿಸುವಂತೆ ಕೂಗು, ಹೋರಾಟ ನಿರಂತರವಾಗಿ ನಡೆಯುತ್ತಿದೆ. ಆದರೆ, ಮಹಿಳೆಯರ ಮೀಸಲಾತಿ ಜಾರಿ ಮರೀಚಿಕೆಯಾಗಿದೆ ಎಂದು ನುಡಿದರು.
ಕೇಂದ್ರದಲ್ಲಿ ಬಿಜೆಪಿ ಬಹುಮತದ ಸರ್ಕಾರವಿದೆ. ಮನಸ್ಸು ಮಾಡಿದರೆ ಮಹಿಳಾ ಮೀಸಲಾತಿ ಜಾರಿ ಮಾಡುವುದು ಕಷ್ಟವಲ್ಲ. ಆದರೆ, ತಡ ಮಾಡುತ್ತಿದೆ. ಶೇ. 30 ಮೀಸಲಾತಿ ನೀಡುವ ಮೂಲಕ ಬಾಬಾ ಸಾಹೇಬರ ಆಶಯವನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
ರಾಜಕೀಯ ಸಮಾನತೆ ಸಿಕ್ಕಿದರೆ ಮಾತ್ರ ಮಹಿಳೆಯರ ಮುಂದುವರಿಯಲು ಸಾಧ್ಯ. ಶೇ. 50 ಮತದಾನ ಮಾಡುವ ಮಹಿಳೆಗೆ ಶಕ್ತಿ ತುಂಬಬೇಕು. ಎಲ್ಲ ಪಕ್ಷಗಳ ನಾಯಕರು ರಾಜಕೀಯವನ್ನು ಬಿಟ್ಟು ಮಹಿಳಾ ಮೀಸಲಾತಿ ಜಾರಿಗೆ ಸಹಮತ ವ್ಯಕ್ತಪಡಿಸಬೇಕು ಎಂದು ಹೇಳಿದರು.
ಮಹಿಳಾ ಕಾಂಗ್ರೆಸ್‌‍ ಸ್ಥಾಪನೆಯಾಗಿ 4 ದಶಕಗಳನ್ನು ಪೂರೈಸಿದೆ. ಸುಚೇತಾ ಕೃಪಲಾನಿ ಮೊದಲ ಅಧ್ಯಕ್ಷರಾಗಿದ್ದರು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಮಹಿಳಾ ಕಾಂಗ್ರೆಸ್‌‍ಗೆ ಒತ್ತು ಕೊಟ್ಟಿದ್ದರು. ಇವತ್ತು ಅಖಿಲ ಭಾರತ ಮಹಿಳಾ ಕಾಂಗ್ರೆಸ್‌‍ ದೇಶದ ಮಹಿಳೆಯರ ಕಷ್ಟಗಳಿಗೆ ದನಿಯಾಗಿದೆ ಎಂದು ತಿಳಿಸಿದರು.
ಮಹಿಳಾ ಕಾಂಗ್ರೆಸ್‌‍ ಚಳವಳಿ, ಹೋರಾಟದ ಸಂಕೇತವಾಗಿದೆ. ಮಹಿಳೆಯರ ಶಿಕ್ಷಣ, ಹಕ್ಕುಗಳನ್ನು ಕೊಡಿಸಲು ಬದ್ಧವಾಗಿದೆ. ದೌರ್ಜನ್ಯ, ದಬ್ಬಾಳಿಕೆಯ ವಿರುದ್ಧ ಹೋರಾಡುವ ಸಂಕಲ್ಪ ತೊಟ್ಟಿದೆ ಎಂದು ಹೇಳಿದರು.
ಸಂವಿಧಾನ ಪೀಠಿಕೆ ಓದಿದ ಬಳಿಕ ಎಲ್ಲರಿಗೂ ಸಿಹಿ ವಿತರಿಸಲಾಯಿತು.
ನಗರ ಅಧ್ಯಕ್ಷ ಆರ್‌.ಮೂರ್ತಿ, ಗ್ರಾಮಾಂತರ ಅಧ್ಯಕ್ಷ ಡಾ.ಬಿ.ಜೆ. ವಿಜಯ್‌ ಕುಮಾರ್‌, ಸಿ.ಬಸವೇಗೌಡ, ಲತಾಸಿದ್ಧಶೆಟ್ಟಿ, ಪುಷ್ಪವಲ್ಲಿ, ಪುಷ್ಪಾಲತಾ ಚಿಕ್ಕಣ್ಣ, ಮಾಜಿ ಜಿ.ಪ ಸದಸ್ಯೆ ಸುಧಾ ಮಹದೇವಯ್ಯ ಮುಂತಾದವರು ಭಾಗವಹಿಸಿದ್ದರು.