ಮನೆ ರಾಷ್ಟ್ರೀಯ ಸಹ ಸೈನಿಕನನ್ನು ರಕ್ಷಿಸಲು ಪ್ರವಾಹದ ಹೊಳೆಗೆ ಹಾರಿದ ಲೆಫ್ಟಿನೆಂಟ್ : ಸೇನೆಯ ಧೈರ್ಯವೀರನ ದುರಂತ ಅಂತ್ಯ

ಸಹ ಸೈನಿಕನನ್ನು ರಕ್ಷಿಸಲು ಪ್ರವಾಹದ ಹೊಳೆಗೆ ಹಾರಿದ ಲೆಫ್ಟಿನೆಂಟ್ : ಸೇನೆಯ ಧೈರ್ಯವೀರನ ದುರಂತ ಅಂತ್ಯ

0

ಸಿಕ್ಕಿಂ: ಸೇನೆಯ ಧೈರ್ಯ, ಬದ್ಧತೆ ಮತ್ತು ತ್ಯಾಗದ ಮತ್ತೊಂದು ಉದಾಹರಣೆಯಾಗಿ 23 ವರ್ಷದ ಯುವ ಯೋಧ ಲೆಫ್ಟಿನೆಂಟ್ ಶಶಾಂಕ್ ತಿವಾರಿ ತಮ್ಮ ಸಹ ಸೈನಿಕನನ್ನು ರಕ್ಷಿಸಲು ಹೋರಾಡುತ್ತಾ ಪ್ರಾಣ ತೆತ್ತ ಘಟನೆ ಸಿಕ್ಕಿಂನಲ್ಲಿ ನಡೆದಿದೆ. ಸೇನೆಯು ಈ ಧೈರ್ಯಮಯ ತ್ಯಾಗವನ್ನು ಗೌರವಿಸಿ, ತಿವಾರಿ ಅವರನ್ನು ಮುಂದಿನ ಪೀಳಿಗೆಯ ಸೈನಿಕರಿಗೆ ಸ್ಫೂರ್ತಿಯ ಮೂಲವೆಂದು ಹೊಗಳಿದೆ.

ಕಳೆದ ವರ್ಷ ಡಿಸೆಂಬರ್‌ನಲ್ಲಿ ಸೇನೆಗೆ ಸೇರ್ಪಡೆಯಾದ ಶಶಾಂಕ್ ತಿವಾರಿ ಅವರು ಸಿಕ್ಕಿಂ ಸ್ಕೌಟ್ಸ್‌ಗೆ ನಿಯೋಜನೆಗೊಂಡಿದ್ದರು. ಅವರು ಯುದ್ಧ ತಂತ್ರದ ಪ್ರಮುಖ ಕಾರ್ಯಾಚರಣಾ ನೆಲೆಯಲ್ಲಿ ಗಸ್ತು ನಡೆಸುತ್ತಿರುವಾಗ, ಗಸ್ತು ತಂಡದ ಸದಸ್ಯರಲ್ಲಿ ಒಬ್ಬರು ಬೆಳಗ್ಗೆ 11 ಗಂಟೆ ಸುಮಾರಿಗೆ ಮರದ ಸೇತುವೆಯನ್ನು ದಾಟುವಾಗ ಕಾಲು ಜಾರಿ ಬಿದ್ದರು.

ಸೇತುವೆಯಿಂದ ಬಿದ್ದು ಪರ್ವತದ ಹೊಳೆಯಲ್ಲಿ ಸಿಲುಕಿ ಅಗ್ನಿವೀರ್ ಸ್ಟೀಫನ್ ಸುಬ್ಬಾ ಕೊಚ್ಚಿ ಹೋದರು. ಮುಳುಗುತ್ತಿದ್ದ ಸುಬ್ಬಾ ಅವರನ್ನು ರಕ್ಷಿಸಲು ಲೆಫ್ಟಿನೆಂಟ್ ತಿವಾರಿ ನೀರಿಗೆ ಹಾರಿದರು. ಮತ್ತೊಬ್ಬ ಸೈನಿಕ ನಾಯಕ್ ಪುಕಾರ್ ಕಟೀಲ್ ತಕ್ಷಣವೇ ಬೆಂಬಲವಾಗಿ ಹಿಂಬಾಲಿಸಿದರು. ಅವರು ಮುಳುಗುತ್ತಿದ್ದ ಅಗ್ನಿವೀರ್ ಅವರನ್ನು ರಕ್ಷಿಸುವಲ್ಲಿ ಯಶಸ್ವಿಯಾದರು.

ಸುಬ್ಬಾ ಅವರನ್ನು ಸುರಕ್ಷಿತವಾಗಿ ಕರೆತರುವಷ್ಟರಲ್ಲಿ, ಲೆಫ್ಟಿನೆಂಟ್ ತಿವಾರಿ ಅವರು ಬಲವಾದ ಪ್ರವಾಹದಲ್ಲಿ ಕೊಚ್ಚಿಹೋದರು. ಅಪಘಾತದ ನಂತರ 30 ನಿಮಿಷಗಳ ಕಾಲ ನಡೆದ ಶೋಧ ಕಾರ್ಯದಲ್ಲಿ, ಲೆಫ್ಟಿನೆಂಟ್ ತಿವಾರಿ ಅವರ ಶವವು 800 ಮೀಟರ್ ದೂರದಲ್ಲಿ ಪತ್ತೆಯಾಯಿತು. ಅವರ ಈ ತ್ಯಾಗಮಯ ನಡೆ ಭಾರತ ಸೇನೆಯ ಧೈರ್ಯ, ಸೌಹಾರ್ದತೆ ಮತ್ತು ಬದ್ಧತೆಯ ಪಾಠವನ್ನು ತೀವ್ರವಾಗಿ ನೆನಪಿಸುತ್ತದೆ.

ಯುದ್ಧ ಕ್ಷೇತ್ರದಲ್ಲಿಯೇ ಮೊದಲ ಪ್ರೀತಿ, ಸಹೋದರತ್ವ ಮತ್ತು ಮಾನವೀಯತೆ ಎಂಬುದರ ಪ್ರತೀಕವಾಗಿ ತಿವಾರಿ ಅವರು ತಮ್ಮ ಸಹ ಸೈನಿಕನ ಜೀವ ಉಳಿಸಲು ತಮ್ಮದೇ ಜೀವವನ್ನೇ ಅರ್ಪಿಸಿದರು. ಕೇವಲ 6 ತಿಂಗಳ ಸೇವಾ ಅನುಭವವಿದ್ದ ಈ ಯುವ ಸೇನಾಧಿಕಾರಿ ತಮ್ಮ ಪೋಷಕರು ಮತ್ತು ಸಹೋದರಿಯನ್ನು ಅಗಲಿದ್ದಾರೆ.