ಮೈಸೂರು:ಅರ್ಥಪೂರ್ಣ ಬದುಕಿಗೆ ಭಾವನೆಗಳು ಮುಖ್ಯ.ಈ ಭಾವನೆಗಳ ಅಭಿವ್ಯಕ್ತಿಗೆ ಭಾಷೆಯೇ ಜೀವಾಳ. ಆದ್ದರಿಂದ ಬದುಕಿಗೂ ಭಾಷೆಗೂ ಅವಿನಾಭಾವ ಸಂಬಂಧವಿದೆ.ಈ ಕಾರಣಕ್ಕೆ ಭಾಷೆ ಉಳಿದರೆ ಮಾತ್ರ ಬದುಕು ಮತ್ತು ಭಾವನೆಗಳು ಉಳಿಯಲು ಸಾಧ್ಯ ಎಂದು ಸ್ಪಂದನ ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ವ್ಯಾಖ್ಯಾನಿಸಿದರು.
ನಗರದ ನಾದಬ್ರಹ್ಮ ಸಂಗೀತ ಸಭಾದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇತ್ತೀಚೆಗೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಜಯಂತ್ಯೋತ್ಸವದ ಅಂಗವಾಗಿ ನಡೆದ ಕವಿಗೋಷ್ಠಿಗೆ ಚಾಲನೆ ನೀಡಿ ಅವರು ಮಾತನಾಡಿದ ಅವರು, ಭಾಷೆಯಿಂದ ಬದುಕಿಗೆ ಲವಲವಿಕೆ ಒದಗಿಬರುತ್ತದೆ ಎಂದರು.
ವಿದ್ಯಾವಂತರೇ ಕನ್ನಡ ಭಾಷೆಯನ್ನು ಮಲಿನಗೊಳಿಸುತ್ತಿದ್ದಾರೆ. ತುಂಬಾ ಮಂದಿ ಭಾಷೆಯನ್ನು ಸ್ಪಷ್ಟವಾಗಿ ಉಚ್ಛಾರಣೆ ಮಾಡುತ್ತಿಲ್ಲ. ತಪ್ಪಿಲ್ಲದೇ ಬರೆಯುವ ಆಸಕ್ತಿ ವಹಿಸುತ್ತಿಲ್ಲ. ಭಾಷೆಯನ್ನು ಸಂಕ್ಷಿಪ್ತಕರಣಗೊಳಿಸಿ ಬಳಸುತ್ತಿದ್ದಾರೆ. ಇದರಿಂದ ಕನ್ನಡ ಭಾಷೆ ವಿರೂಪಗೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಭಾಷೆಯ ಉಳಿವು ಎಂದರೆ ಭಾವನೆಗಳ ಉಳಿವು ಮಾತ್ರವಲ್ಲ, ಬದುಕಿನ ಉಳಿವು ಕೂಡ ಆಗಿದೆ. ಆದ್ದರಿಂದ ಭಾಷೆಯನ್ನು ಶುದ್ಧ ರೂಪದಲ್ಲಿ ಬಳಸಬೇಕು. ಆಗ ಭಾಷೆ ತನ್ನ ಜೀವಂತಿಕೆ ಉಳಿಸಿಕೊಳ್ಳುತ್ತದೆ. ಆ ಮೂಲಕ ನಮ್ಮ ಎರಡೂವರೆ ವರ್ಷಗಳ ಭವ್ಯ ಪರಂಪರೆಯ ಕನ್ನಡ ಭಾಷೆ ಮತ್ತಷ್ಟು ಸಮೃದ್ಧವಾಗಿ ಬೆಳೆಯಲು ಸಾಧ್ಯ ಎಂದರು.
ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಕೇವಲ ಅಧಿಕ ಅಂಕಗಳನ್ನೂ ಪದವಿಯನ್ನೂ ಪಡೆಯಲು ಬಳಸಿದರೆ ಸಾಲದು. ಅದು ಯಾಂತ್ರಿಕವಾಗುತ್ತದೆ. ಕನ್ನಡ ಭಾಷೆಯ ಬಗ್ಗೆ ನೈಜ ಪ್ರೀತಿ, ಅಭಿಮಾನ, ಗೌರವ ಮನೋಭಾವ ಮೈಗೂಡಿಸಿಕೊಳ್ಳಬೇಕು.ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆ
ಗಳಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡು ಉತ್ತಮ ವ್ಯಕ್ತಿತ್ವದ ಪ್ರಜೆಗಳಾಗಬೇಕು ಎಂದು ಕರೆ ನೀಡಿದರು.
ತಾಲೂಕು ಕಸಾಪ ಅಧ್ಯಕ್ಷ ಎ.ಸಿ. ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಢಿಯಲ್ಲಿ ಗಣೇಶ್ ನಿಲುವಾಗಿಲು,ಶಿಲ್ಪ ಬಿ.ಯರಹಳ್ಳಿ, ಪೂರ್ಣಿಮಾ, ದಾ.ಪು.ಚಿಕ್ಕಣ್ಣ, ಪ್ರಭಾ,ಭಾರ್ಗವ ಕೆಂಪರಾಜ್, ಶಕುಂತಲ, ಪ್ರೇಮಾ ಮಾದಪ್ಪ ಕವನ ವಾಚಿಸಿದರು.
ವೇದಿಕೆಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ಮಡ್ಡೀಕೆರೆ ಗೋಪಲ್, ತಿ.ನರಸೀಪುರ ತಾಲೂಕು ಕಸಾಪ ಅಧ್ಯಕ್ಷ ಕನ್ನಡ ಪುಟ್ಟಸ್ವಾಮಿ, ಕವಯಿತ್ರಿ ಶೋಭಾ ನಾಗಶಯನ, ಗೌಡ್ತಿಯರ ಸೇನೆಯ ರಾಜ್ಯ ಉಪಾಧ್ಯಕ್ಷೆ ವೃಂದಾಮಣಿ,ಸಾಹಿತಿ ಟಿ.ತ್ಯಾಗರಾಜು ಉಪಸ್ಥಿತರಿದ್ದರು.