ಮನೆ ಕಾನೂನು ಪ್ರೀತಿಸಿದ ಯುವಕನಿಗಾಗಿ ಹೆತ್ತವರಿಂದ ದೂರವಾದ ವಿದ್ಯಾರ್ಥಿನಿಗೆ ಹೈಕೋರ್ಟ್‌ ನಿಂದ ಜೀವನ ಪಾಠ

ಪ್ರೀತಿಸಿದ ಯುವಕನಿಗಾಗಿ ಹೆತ್ತವರಿಂದ ದೂರವಾದ ವಿದ್ಯಾರ್ಥಿನಿಗೆ ಹೈಕೋರ್ಟ್‌ ನಿಂದ ಜೀವನ ಪಾಠ

0

ಬೆಂಗಳೂರು (Bengaluru): ತಾನು ಪ್ರೀತಿಸಿದ ಯುವಕನಿಗಾಗಿ ಹೆತ್ತವರಿಂದ ದೂರವಾದ ವಿದ್ಯಾರ್ಥಿನಿಗೆ ಹೈಕೋರ್ಟ್ ಜೀವನಪಾಠವನ್ನು ತಿಳಿಸಿಕೊಟ್ಟ ಘಟನೆ ನಡೆದಿದೆ.

ಪ್ರೇಮವಿವಾಹವಾದ ಪ್ರಕರಣದಲ್ಲಿ ಮಗಳನ್ನು ತಮ್ಮ ವಶಕ್ಕೆ ಒಪ್ಪಿಸುವಂತೆ ಕೋರಿ ತಂದೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಬಿ.ವೀರಪ್ಪ ಅವರಿದ್ದ ವಿಭಾಗೀಯಪೀಠ ವಾಸ್ತವ ಜೀವನದ ಪಾಠವನ್ನು ತಿಳಿಸಿಕೊಟ್ಟಿದೆ.

ಈ ಪ್ರಕರಣದಲ್ಲಿ ವಿದ್ಯಾರ್ಥಿನಿಗೆ 19 ವರ್ಷವಾಗಿದ್ದು, ವಯಸ್ಕರು ತಾವು ಬಯಸಿದ ವ್ಯಕ್ತಿಯೊಂದಿಗೆ ಜೀವಿಸುವ ಹಕ್ಕನ್ನು ಸಂವಿಧಾನವೇ ಕಲ್ಪಿಸಿರುವುದರಿಂದ ಮತ್ತು ಪತಿಯೊಂದಿಗೆ ಜೀವಿಸುವುದಾಗಿ ವಿದ್ಯಾರ್ಥಿನಿ ಪಟ್ಟು ಹಿಡಿದ ಕಾರಣ ತಂದೆಯ ಅರ್ಜಿ ಹೈಕೋರ್ಟ್ ವಜಾಗೊಳಿಸಿತು.

ಹಾಸ್ಟಲ್‌ನಲ್ಲಿ ಉಳಿದುಕೊಂಡು ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ವಿದ್ಯಾರ್ಥಿನಿಗೆ ಅದೇ ಕಾಲೇಜಿನ ವ್ಯಾನ್ ಚಾಲಕನ ಮೇಲೆ ಪ್ರೇಮಾಂಕುರವಾಗಿದೆ. ಇಬ್ಬರು ಮದುವೆ ಮಾಡಿಕೊಂಡಿದ್ದಾರೆ. ಆದರೆ, ಮಗಳ ಕೃತ್ಯಕ್ಕೆ ಬೇಸರಗೊಂಡ ಆಕೆಯ ತಂದೆ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಮಳವಳ್ಳಿ ತಾಲೂಕಿನ ನಿವಾಸಿ ನಾಗರಾಜು ಅವರ ಪುತ್ರಿ ಮಂಡ್ಯದ ಪ್ರತಿಷ್ಠಿತ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ವ್ಯಾಸಂಗ ಮಾಡುತ್ತಿದ್ದರು. ಹಾಸ್ಟೆಲ್‌ನಲ್ಲಿ ತಂಗಿದ್ದ ಆಕೆ ಕಾಲೇಜಿನ ವ್ಯಾನ್ ಚಾಲಕನನ್ನು ಪ್ರೀತಿಸಿದ್ದರು. ಪೋಷಕರಿಗೆ ತಿಳಿಯದಂತೆ ಮದುವೆಯಾಗಿದ್ದರು.

ನಾಗರಾಜ್ ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿ, ಮಗಳನ್ನು ಪುಸಲಾಯಿಸಿ ವ್ಯಾನ್ ಚಾಲಕ ಮದುವೆಯಾಗಿದ್ದಾನೆ. ಆತನ ಅಕ್ರಮ ಬಂಧನದಲ್ಲಿರುವ ಮಗಳನ್ನು ತಮ್ಮ ವಶಕ್ಕೆ ಒಪ್ಪಿಸಿ ಆದೇಶಿಸುವಂತೆ ಕೋರಿದ್ದರು. ಕೋರ್ಟ್ ನಿರ್ದೇಶನದಂತೆ ಆಕೆ ಮತ್ತು ಆಕೆಯ ಪತಿ ಕೋರ್ಟ್‌ಗೆ ಹಾಜರಾಗಿದ್ದರು.

ವಿಚಾರಣೆ ವೇಳೆ ಆಕೆ ತಾನು ವಯಸ್ಕಳಾಗಿದ್ದು, ಪ್ರೀತಿಸಿ ಮದುವೆಯಾಗಿದ್ದೇನೆ. ಪತಿಯೊಂದಿಗೆ ಜೀವಿಸಲು ಬಯಸಿದ್ದೇನೆ ಎಂದು ಹೇಳಿಕೆ ದಾಖಲಿಸಿದಳು. ಪತಿ ಸಹ ಆಕೆಯನ್ನು ಓದಿಸಿ ಚೆನ್ನಾಗಿ ನೋಡಿಕೊಳ್ಳುವ ಭರವಸೆ ನೀಡಿದರು. ಇದನ್ನು ಪರಿಗಣಿಸಿದ ನ್ಯಾಯಾಲಯ ಪ್ರಕರಣದಲ್ಲಿ ಅಕ್ರಮ ಬಂಧನ ಇಲ್ಲವಾಗಿದ್ದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿತು.

ಹೆತ್ತವರಿಗಿಂತ ದೊಡ್ಡ ದೇವರಿಲ್ಲ:

ಹೆತ್ತವರಿಗಿಂತ ದೊಡ್ಡ ದೇವರಿಲ್ಲ. ಸಹಾನುಭೂತಿಗಿಂತ ದೊಡ್ಡ ಧರ್ಮವಿಲ್ಲ. ಜನ್ಮ ನೀಡಿ ಬೆಳೆಸಿದ ತಂದೆ-ತಾಯಿಯ ಋಣ ತೀರಿಸಲು ಅಸಾಧ್ಯ. ಪ್ರೌಢಾವಸ್ಥೆಗೆ ಬಂದ ಕೂಡಲೇ ತಾವು ಸ್ವತಂತ್ರರು ಎಂದು ಬಯಸಿದ ಸಂಗಾತಿಯನ್ನು ಪ್ರೇಮ ವಿವಾಹವಾಗುವ ಮುನ್ನ ಪೋಷಕರು ತಮಗಾಗಿ ಮಾಡಿದ ತ್ಯಾಗವನ್ನು ಮಕ್ಕಳು ಒಮ್ಮೆ ನೆನೆಯಬೇಕು. ಮಕ್ಕಳು ಪೋಷಕರಿಗೆ ನೋವು ನೀಡಬಾರದು ಎಂದು ಹೈಕೋರ್ಟ್ ಹೇಳಿದೆ.

ತಂದೆ-ತಾಯಿ ಇಲ್ಲದಿದ್ದರೆ ಮಕ್ಕಳು ಈ ಭೂಮಿಗೆ ಬರುತ್ತಿರಲೇ ಇಲ್ಲ. ಜೀವನ ಎನ್ನುವುದು ಪ್ರತಿಕ್ರಿಯೆ-ಪ್ರತಿಬಿಂಬ ಮತ್ತು ಪ್ರತಿಧ್ವನಿ ಎನ್ನುವುದನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು. ಮಕ್ಕಳು ಇಂದು ಹೆತ್ತವರಿಗೆ ಏನು ನೀಡುತ್ತಾರೆ. ಅದನ್ನೇ ಮುಂದೆ ಅವರ ಮಕ್ಕಳಿಂದ ಪಡೆದುಕೊಳ್ಳುತ್ತಾರೆ. ಹೆತ್ತವರಿಗಿಂತ ದೊಡ್ಡ ಧರ್ಮವಿಲ್ಲ ಎಂದು ಹೇಳಿದೆ.

ಅಲ್ಲದೆ, ಮಕ್ಕಳನ್ನು ಬೆಳೆಸಿ ದೊಡ್ಡವರನ್ನಾಗಿ ಮಾಡಿದ ತಂದೆ-ತಾಯಿಯ ಋಣವನ್ನು ನೂರು ವರ್ಷವಾದರೂ ತೀರಿಸಲು ಅಸಾಧ್ಯ ಎಂಬುದಾಗಿ ಮನುಸ್ಮೃತಿ ಹೇಳುತ್ತದೆ. ಆದ್ದರಿಂದ ತಂದೆ-ತಾಯಿ, ಗುರು-ಹಿರಿಯರಿಗೆ ಇಷ್ಟವಾದ ಕೆಲಸಗಳನ್ನೇ ಮಕ್ಕಳು ಮಾಡಬೇಕು. ಪ್ರೀತಿ ಹೃದಯದಿಂದ ಹೃದಯಕ್ಕಿರಬೇಕು ಹೊರತು ಬಾಹ್ಯ ಆಕರ್ಷಣೆಗೆ ಸೀಮಿತವಾಗಬಾರದು ಎಂದು ಹೈಕೋರ್ಟ್ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.