ಬೆಂಗಳೂರು: ಬಿಜೆಪಿ ಶಾಸಕ ಕೆ ಗೋಪಾಲಯ್ಯಗೆ ಜೀವ ಬೆದರಿಕೆ ಒಡ್ಡಿದ ಆರೋಪದಲ್ಲಿ ಮಾಜಿ ಕಾರ್ಪೊರೇಟರ್ ಪದ್ಮರಾಜು ವಿರುದ್ಧ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ಮಂಗಳವಾರ ರಾತ್ರಿ 11 ಗಂಟೆಗೆ ಗೋಪಾಲಯ್ಯಗೆ ಕರೆ ಮಾಡಿದ್ದ ಪದ್ಮರಾಜು, ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾಗಿ ಪೊಲೀಸ್ ಠಾಣೆಗೆ ಕೆ. ಗೋಪಾಲಯ್ಯ ದೂರು ನೀಡಿದ್ದರು.
ಈ ವಿಚಾರವಾಗಿ ಶಾಸಕ ಕೆ ಗೋಪಾಲಯ್ಯ ಪ್ರತಿಕ್ರಿಯೆ ನೀಡಿದ್ದು, ಅವನು ಮಾತನಾಡಿರುವ ವಿಚಾರಗಳನ್ನು ಈಗ ಬಹಿರಂಗಪಡಿಸಲು ಆಗದು. ಆತ ಇದಕ್ಕೂ ಮೊದಲು ಬೇರೆ ಶಾಸಕರಿಗೆ ಕೂಡ ಬೆದರಿಕೆ ಹಾಕಿದ್ದ. ಪದ್ಮರಾಜು ಮಗಳಿಗೂ ನಾನೇ ಕೆಲಸ ಕೊಡಿಸಿದ್ದೇನೆ ಎಂದು ತಿಳಿಸಿದ್ದಾರೆ.
ಪದ್ಮರಾಜು ಬೆದರಿಕೆ ಹಾಕಿದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ, ಗೃಹಸಚಿವ ಪರಮೇಶ್ವರ ಅವರಿಗೂ ದೂರು ನೀಡುತ್ತೇನೆ. ಪದ್ಮರಾಜುನನ್ನ ಗಡಿಪಾರು ಮಾಡುವಂತೆ ಆಗ್ರಹಿಸುತ್ತೇನೆ ಎಂದು ಗೋಪಾಲಯ್ಯ ಹೇಳಿದ್ದಾರೆ.
ವಿಧಾನಸಭೆ ಸ್ಪೀಕರ್ ಹಾಗೂ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಶಾಸಕ ಕೆ.ಗೋಪಾಲಯ್ಯ ದೂರು ನೀಡಿದ್ದಾರೆ.