ಬೆಳಗಾವಿ: ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಸ್ವಾಮೀಜಿ ಅವರಿಗೆ ಜೀವ ಬೆದರಿಕೆಯ ಪತ್ರ ಬಂದಿರುವ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗಮನಕ್ಕೆ ತರುತ್ತೇನೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪಕ್ಕೆ ಭೇಟಿ ನೀಡಿ, ನಿಜಗುಣಾನಂದ ಸ್ವಾಮೀಜಿ ಅವರೊಂದಿಗೆ ಚರ್ಚಿಸಿದ ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದರು.
ಸಮಾಜ ಪರಿವರ್ತನೆ ಮಾಡುವವರು, ಪ್ರಗತಿಪರ ಚಿಂತಕರಿಗೆ ಜೀವ ಬೆದರಿಕೆಗಳು ಬರುತ್ತಲೆ ಇವೆ. ಆದರೆ ನನಗೆ ಯಾವುದೇ ಜೀವ ಬೆದರಿಕೆಗಳು ಬಂದಿಲ್ಲ ಎಂದರು.
ಈ ರೀತಿಯ ಜೀವ ಬೆದರಿಕೆಗಳು ಬಂದಾಗ, ಸರ್ಕಾರ, ಕಾನೂನು, ಪೋಲೀಸ್ ಇಲಾಖೆ ಇದ್ದು ಈ ಬಗ್ಗೆ ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.
ಸಮಾಜದಲ್ಲಿ ಒಳ್ಳೆಯ ಕೆಲಸ ಮಾಡುವವರಿಗೆ ಈ ರೀತಿಯ ಪರಿಸ್ಥಿತಿ ಎದುರಾಗುತ್ತದೆ. ನಾವು ಜಾಗೃತರಾಗಿರಬೇಕು. ಹೋರಾಟವನ್ನು ಮುಂದುವರೆಸಬೇಕು. ನಿಜಗುಣಾನಂದ ಸ್ವಾಮೀಜಿ ಬಸವತತ್ವಗಳನ್ನು ಮನೆ, ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ನಾವೂ ಬುದ್ದ, ಬಸವ, ಅಂಬೇಡ್ಕರ್ ಅವರ ತತ್ವಗಳನ್ನು ಮನೆ, ಮನೆಗೆ ತಲುಪಿಸುವ ಕಾರ್ಯ ಮಾಡುತ್ತಿದ್ದೇವೆ. ಅವರ ಹೋರಾಟ, ನಮ್ಮ ಹೋರಾಟ ಒಂದೇ ಆಗಿರುವುದರಿಂದ ನಾನು ಪದೇ ಪದೇ ಶ್ರೀಗಳನ್ನು ಭೇಟಿ ಆಗುತ್ತೇನೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.














