ಮನೆ ಕಾನೂನು ದತ್ತು ಪಡೆದ ಪೋಷಕರಿಗೆ ಸೀಮಿತ ಹೆರಿಗೆ ಸವಲತ್ತು: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ

ದತ್ತು ಪಡೆದ ಪೋಷಕರಿಗೆ ಸೀಮಿತ ಹೆರಿಗೆ ಸವಲತ್ತು: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ತರಾಟೆ

0

ದತ್ತು ಪಡೆದ ಮಗುವಿಗೆ ಮೂರು ತಿಂಗಳಿಗಿಂತ ಕಡಿಮೆ ವಯಸ್ಸಾಗಿದ್ದರಷ್ಟೇ ದತ್ತು ಪಡೆದ ಪೋಷಕರು ಹೆರಿಗೆ ಸವಲತ್ತುಗಳಿಗೆ ಅರ್ಹರು ಎಂದು ಹೇಳುವ ಹೆರಿಗೆ ಸವಲತ್ತು ಕಾಯಿದೆಯ ನಿಯಮಾವಳಿಗಳ ಹಿಂದಿನ ತಾರ್ಕಿಕತೆಯನ್ನು ಸುಪ್ರೀಂ ಕೋರ್ಟ್ ಮಂಗಳವಾರ ಪ್ರಶ್ನಿಸಿದೆ.

Join Our Whatsapp Group

2017ರ ತಿದ್ದುಪಡಿ ಮೂಲಕ ಸೇರಿಸಲಾದ ಹೆರಿಗೆ ಸವಲತ್ತು ಕಾಯಿದೆ, 1961ರ ಸೆಕ್ಷನ್ 5(4) ರ ಸಾಂವಿಧಾನಿಕ ಸಿಂಧುತ್ವ  ಪ್ರಶ್ನಿಸುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಪಂಕಜ್ ಮಿತ್ತಲ್‌ ಅವರಿದ್ದ ಪೀಠ ಈ ಪ್ರಶ್ನೆ ಕೇಳಿದೆ.

ಮೂರು ತಿಂಗಳೊಳಗಿನ ಮಗುವನ್ನು ಕಾನೂನುಬದ್ಧವಾಗಿ ದತ್ತು ತೆಗೆದುಕೊಳ್ಳುವ ಮಹಿಳೆ ಹನ್ನೆರಡು ವಾರಗಳವರೆಗೆ ಹೆರಿಗೆ ಸವಲತ್ತುಗಳಿಗೆ ಅರ್ಹರಾಗಿರುತ್ತಾರೆ ಎಂದು ಈ ಸೆಕ್ಷನ್‌ ಹೇಳುತ್ತದೆ. ಈ ನಿಬಂಧನೆಯ ಹಿಂದಿನ ತರ್ಕ ಏನೆಂಬುದನ್ನು ವಿವರಿಸುವಂತೆ ಕೇಂದ್ರ ಸರ್ಕಾರದ ಪರ ವಕೀಲರನ್ನು ನ್ಯಾಯಾಲಯ ಪ್ರಶ್ನಿಸಿದೆ.

“ಮಗುವಿಗೆ ಮೂರು ತಿಂಗಳು ಅಥವಾ ಅದಕ್ಕಿಂತ ಕಡಿಮೆ ವಯಸ್ಸಾಗಿರಬೇಕು ಎಂದು ಹೇಳುವ ಕಲ್ಪನೆ ಎಂಥದ್ದು? ಹೆರಿಗೆ ರಜೆ ನೀಡುವ ಕಾನೂನಿನ ಉದ್ದೇಶ ಏನು? ಜೈವಿಕ ಅಥವಾ ಯಾವುದೇ ರೀತಿಯ ತಾಯಿಯಾಗಿರಲಿ ಮಗುವನ್ನು ನೋಡಿಕೊಳ್ಳಬೇಕು ಎಂಬುದು… ಮೂರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಮಹಿಳೆಗೆ ಮಾತ್ರ ಹೆರಿಗೆ ಸವಲತ್ತುವನ್ನು ನೀಡುವುದರ ಹಿಂದಿನ ಆಲೋಚನೆ ಎಂಥದ್ದು?” ಎಂದು ನ್ಯಾಯಾಲಯ ಕೇಳಿದೆ.

ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ ಅಕ್ಟೋಬರ್ 2021ರಲ್ಲಿ ಸುಪ್ರೀಂ ಕೋರ್ಟ್ ನೋಟಿಸ್ ನೀಡಿತ್ತು.

ಹೆರಿಗೆ ಸವಲತ್ತು ಕಾಯಿದೆಯ ಸೆಕ್ಷನ್ 5(4) ಎಂಬುದು ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯಿದೆ ಮತ್ತು ಸಂವಿಧಾನ ಒದಗಿಸಿರುವ ಮೂಲಭೂತ ಹಕ್ಕುಗಳಿಗೆ ಅಕ್ಷರಶಃ ವ್ಯತಿರಿಕ್ತವಾಗಿದೆ ಎಂದು ಅರ್ಜಿದಾರರಾದ ಎಚ್ ನಂದೂರಿ ವಾದಿಸಿದ್ದರು.

ಮೂರು ತಿಂಗಳೊಳಗಿನ ಅನಾಥ, ಪರಿತ್ಯಕ್ತ ಅಥವಾ ಒಪ್ಪಿಸಲಾದ ಮಗುವನ್ನು ದತ್ತು ಪಡೆಯುವುದು ತಾಯಿಗೆ ತುಂಬಾ ಕಷ್ಟಕರವಾಗುತ್ತದೆ. ಇದರಿಂದಾಗಿ ಮೂರು ತಿಂಗಳಿಗಿಂತ ಹೆಚ್ಚು ವಯಸ್ಸಾದ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ಮಹಿಳೆಯರು ಹೆರಿಗೆ ಸವಲತ್ತು ಕಾಯಿದೆಯಡಿ ಮಕ್ಕಳನ್ನು ಹೆರುವ ತಾಯಂದಿರಿಗೆ ದೊರೆಯುವ ಶಾಸನಬದ್ಧ ಹೆರಿಗೆ ಸವಲತ್ತುಗಳಿಂದ ವಂಚಿತರಾಗುತ್ತಾರೆ ಎಂಬುದು ಅರ್ಜಿದಾರರ ವಾದವಾಗಿತ್ತು.

ಇಂದು ನ್ಯಾಯಾಲಯದ ಪ್ರಶ್ನೆಗಳಿಗೆ ಉತ್ತರಿಸಿದ ಕೇಂದ್ರ ಸರ್ಕಾರ ಜೈವಿಕ ಮತ್ತು ದತ್ತು ಪಡೆದ ತಾಯಂದಿರ ನಡುವೆ ಅಪಾರ ವ್ಯತ್ಯಾಸವಿದೆ ಎಂದಿತು. ನಾಲ್ಕು ವಾರಗಳ ಬಳಿಕ ಪ್ರಕರಣ ಆಲಿಸುವುದಾಗಿ ತಿಳಿಸಿದ ನ್ಯಾಯಾಲಯ ಈ ಸಂಬಂಧ ಸಮರ್ಪಕ ಅಫಿಡವಿಟ್‌ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿತು.