ಬೆಂಗಳೂರು (Bengaluru): ಶನಿವಾರದಿಂದ ಮದ್ಯ ಮಾರಾಟ ಬಂದ್ ಆಗಲಿದೆ! ಇದರಿಂದ ಎಣ್ಣೆ ಪ್ರಿಯರಿಗೆ ಶಾಕ್ ನ್ಯೂಸ್ ಸಿಕ್ಕಿದೆ.
ಮದ್ಯ ಪೂರೈಕೆ ವ್ಯವಸ್ಥೆಯಲ್ಲಿನ ಲೋಪಗಳನ್ನು ರಾಜ್ಯ ಸರ್ಕಾರ ಸರಿಪಡಿಸದಿದ್ದರೆ ಜುಲೈ 9ರಿಂದ ಮದ್ಯ ಮಾರಾಟ ಬಂದ್ ಮಾಡಲಾಗುವುದು ಎಂದು ಮದ್ಯ ಮಾರಾಟಗಾರರ ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಸ್.ಗುರುಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮದ್ಯ ಖರೀದಿಗೆ ಅನುಸರಿಸಬೇಕಾದ ಪ್ರಕ್ರಿಯೆಯಲ್ಲಿ ಹತ್ತಾರು ಗೊಂದಲಗಳಿವೆ. ಕೆಎಸ್ ಬಿಸಿಎಲ್ ಅಕೌಂಟ್ ಗೆ ಹಣ ಹಾಕಿದರೆ ಮೊದಲು ನಮಗೆ ಬೇಕಾದ ಮದ್ಯ ಸುಲಭವಾಗಿ ಸಿಗುತ್ತಿತ್ತು. ಬಿಲ್ಲಿಂಗ್ ವ್ಯವಸ್ಥೆ ಮ್ಯಾನ್ಯುವಲ್ ಆಗಿ ಇತ್ತು. ಆದರೆ ಏಪ್ರಿಲ್ 4ರಿಂದ ಹೊಸ ಪದ್ಧತಿ ಆರಂಭವಾಗಿದೆ. ವೆಬ್ ಇಂಡೆಂಟಿಂಗ್ ವ್ಯವಸ್ಥೆ ಜಾರಿಯಾದಾಗಿನಿಂದ ಎಲ್ಲವನ್ನೂ ಹಿಂದಿನ ದಿನವೇ ಪೂರ್ಣಗೊಳಿಸಬೇಕು. ಸಗಟು ಮದ್ಯ ಖರೀದಿದಾರರಿಗೇ ಸಂಕಷ್ಟ ಎದುರಾಗಿದೆ. ಮುಂದಿನ 24 ಗಂಟೆಗಳ ಒಳಗೆ ಮದ್ಯ ಖರೀದಿ ಇಂಡೆಂಟಿಂಗ್ ವ್ಯವಸ್ಥೆಯನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಮದ್ಯ ಮಾರಾಟವನ್ನು ನಿಲ್ಲಿಸಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಸಕಾಲದಲ್ಲಿ ಮದ್ಯ ಪೂರೈಕೆಯಾಗದೇ ಬಾರ್ ಮಾಲೀಕರು ಸಂಕಷ್ಟ ಅನುಭವಿಸುವಂತಾಗಿದೆ. ನಮ್ಮನ್ನು ಹೀಗೇಕೆ ಗೋಳು ಹೊಯ್ದುಕೊಳ್ತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ.