ಮನೆ ಕಾನೂನು ಮದ್ಯ ಹಗರಣ: ಛತ್ತೀಸ್​ ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ...

ಮದ್ಯ ಹಗರಣ: ಛತ್ತೀಸ್​ ಗಢ ಮಾಜಿ ಸಿಎಂ ಭೂಪೇಶ್ ಬಘೇಲ್ ಮನೆ ಸೇರಿ ಹಲವೆಡೆ ಇಡಿ ದಾಳಿ

0

ರಾಯ್​ಪುರ: ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಅವರ ಪುತ್ರ ಚೈತನ್ಯ ಬಘೇಲ್ ಅವರಿಗೆ ಸಂಬಂಧಿಸಿದ ಹಲವಾರು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ಸೋಮವಾರ ದಾಳಿ ನಡೆಸಿದೆ. ಮದ್ಯ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಈ ದಾಳಿ ನಡೆದಿದೆ. ಭಿಲಾಯಿಯಲ್ಲಿರುವ ಚೈತನ್ಯ ಬಘೇಲ್ ನಿವಾಸ ಮತ್ತು ರಾಜ್ಯದ ಇತರ ಕಡೆಗಳಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ದಾಳಿ ನಡೆಸಲಾಯಿತು.

Join Our Whatsapp Group

ಈ ವಿಚಾರವಾಗಿ ಭೂಪೇಶ್ ಬಘೇಲ್ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸಂದೇಶ ಪ್ರಕಟಿಸಲಾಗಿದ್ದು, ಪರೋಕ್ಷವಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಲಾಗಿದೆ.

‘‘ಏಳು ವರ್ಷಗಳಿಂದ ಅಸ್ತಿತ್ವದಲ್ಲಿದ್ದ ಸುಳ್ಳು ಪ್ರಕರಣವನ್ನು ನ್ಯಾಯಾಲಯ ವಜಾಗೊಳಿಸಿದೆ. ಹೀಗಿರುವಾಗ, ಇಡಿ ಅಧಿಕಾರಿಗಳು ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಭೂಪೇಶ್ ಬಘೇಲ್ ಅವರ ಭಿಲಾಯಿ ನಿವಾಸಕ್ಕೆ ಇಂದು ಬೆಳಿಗ್ಗೆ ಪ್ರವೇಶಿಸಿದ್ದಾರೆ. ಈ ಪಿತೂರಿಯ ಮೂಲಕ ಯಾರಾದರೂ ಪಂಜಾಬ್‌ನಲ್ಲಿ ಕಾಂಗ್ರೆಸ್ ಅನ್ನು ತಡೆಯಲು ಪ್ರಯತ್ನಿಸುತ್ತಿದ್ದರೆ, ಅದು ತಪ್ಪು ತಿಳುವಳಿಕೆ’’ ಎಂದು ಟ್ವೀಟ್​​ನಲ್ಲಿ ಉಲ್ಲೇಖಿಸಲಾಗಿದೆ.

ಛತ್ತೀಸ್‌ಗಢ ಮದ್ಯ ಹಗರಣದಿಂದ ರಾಜ್ಯ ಖಜಾನೆಗೆ ಭಾರಿ ನಷ್ಟ ಉಂಟಾಗಿದೆ. ಸುಮಾರು 2,100 ಕೋಟಿ ರೂ.ಗಳಿಗೂ ಹೆಚ್ಚು ಹಣ ನಷ್ಟವಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯಮಿಗಳು ಸೇರಿದಂತೆ ಹಲವಾರು ವ್ಯಕ್ತಿಗಳನ್ನು ಈಗಾಗಲೇ ಬಂಧಿಸಲಾಗಿದೆ.

ಛತ್ತೀಸ್‌ ಗಢ ಮದ್ಯ ಹಗರಣ ಪ್ರಕರಣವನ್ನು ಇಡಿ ತನಿಖೆ ನಡೆಸುತ್ತಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಡಿ ಮತ್ತು ಎಸಿಬಿಯಲ್ಲಿ ಎಫ್‌ಐಆರ್ ದಾಖಲಾಗಿದೆ. 2 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ಹಗರಣದ ಬಗ್ಗೆ ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ. ಐಎಎಸ್ ಅಧಿಕಾರಿ ಅನಿಲ್ ತುತೇಜಾ, ಅಬಕಾರಿ ಇಲಾಖೆ ಎಂಡಿ ಎಪಿ ತ್ರಿಪಾಠಿ ಮತ್ತು ಉದ್ಯಮಿ ಅನ್ವರ್ ಧೇಬರ್ ಅವರ ಮೂಲಕ ಆಗಿನ ಭೂಪೇಶ್ ಸರ್ಕಾರದ ಅವಧಿಯಲ್ಲಿ ಈ ಹಗರಣ ನಡೆದಿತ್ತು ಎಂದು ತನಿಖೆಯಲ್ಲಿ ಕಂಡುಹಿಡಿರುವುದಾಗಿ ಜಾರಿ ನಿರ್ದೇಶನಾಲಯ ಹೇಳಿಕೊಂಡಿದೆ.