ಬೆಂಗಳೂರು ನಗರದಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಹಾವಳಿ ತಡೆಗಟ್ಟಲು ವಿಫಲವಾಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಕರ್ನಾಟಕ ಹೈಕೋರ್ಟ್ ಗುರುವಾರ ಆದೇಶಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆಯನ್ನು ಆಕ್ಷೇಪಿಸಿ ಬೆಂಗಳೂರಿನ ಮಾಯಿಗೇಗೌಡ ಅವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಬೆಂಗಳೂರು ನಗರದಲ್ಲಿ ಅನಧಿಕೃತ ಹೋರ್ಡಿಂಗ್, ಫ್ಲೆಕ್ಸ್, ಪೋಸ್ಟರ್ ಅಳವಡಿಕೆಯನ್ನು ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಕುರಿತು ಮಾರ್ಚ್ 6ರೊಳಗೆ ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರ, ಬಿಬಿಎಂಪಿ ಮತ್ತು ಬಿಡಿಎಗೆ ಪೀಠವು ತಾಕೀತು ಮಾಡಿದೆ.
ಅಕ್ರಮ ಜಾಹೀರಾತುಗಳ ಅಳವಡಿಕೆ ತಡೆಗಟ್ಟಲು ಕಾಲ ಕಾಲಕ್ಕೆ ಪರಿಶೀಲನೆ ನಡೆಸಲಾಗಿದೆಯೇ? ಇಲ್ಲ ಎನ್ನುವುದಾದರೆ ಈ ಕರ್ತವ್ಯ ಲೋಪಕ್ಕೆ ಹೊಣೆಗಾರರಾಗಿರುವ ಅಧಿಕಾರಿಗಳು ಯಾರು? ಅಕ್ರಮ ಜಾಹೀರಾತು ಅಳವಡಿಕೆಯನ್ನು ತಡೆಗಟ್ಟುವ ಸಂಬಂಧ ಹೈಕೋರ್ಟ್ ಈ ಹಿಂದೆ ನೀಡಿದ್ದ ನಿರ್ದೇಶನಗಳ ಸಂಬಂಧ ಬಿಡಿಎ, ಬಿಬಿಎಂಪಿ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳು ತಮ್ಮ ಅಧೀನದ ಅಧಿಕಾರಿಗಳಿಗೆ ಯಾವುದಾದರೂ ಸುತ್ತೋಲೆ ಹೊರಡಿಸಿದ್ದಾರೆಯೇ? ಅನಧಿಕೃತ ಜಾಹೀರಾತು ಅಳವಡಿಸಿದವರ ವಿರುದ್ಧ ಯಾವುದಾದರೂ ಕ್ರಮ ಕೈಗೊಳ್ಳಲಾಗಿದೆಯೇ? ಕ್ರಮ ಕೈಗೊಂಡಿದ್ದರೆ ಆ ಕುರಿತು ಮಾಹಿತಿ ಒದಗಿಸಬೇಕು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಒಂದೊಮ್ಮೆ ಈವರೆಗೂ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಬಿಬಿಎಂಪಿ ಹಾಗೂ ಬಿಡಿಎ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಎಫ್ಐಆರ್ ಅನ್ನು ದಾಖಲಿಸುವ ಮೂಲಕ ಕ್ರಮ ಜರುಗಿಸಬೇಕು. ಇದನ್ನು ಮೂರು ವಾರದಲ್ಲಿ ಮಾಡಬೇಕು. ಒಂದು ವೇಳೆ ಹಿರಿಯ ಅಧಿಕಾರಿಗಳಿಗೆ ಅವರ ಅಧೀನ ಅಧಿಕಾರಿಗಳು ಕರ್ತ್ಯಲೋಪ ಎಸಗಿರುವುದು ಕಂಡುಬಂದರೆ ಅಂತಹ ವಿರುದ್ಧ ಕ್ರಮ ಜರುಗಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ಇದಕ್ಕೂ ಮುನ್ನ ಪ್ರಕರಣದ ಅಮಿಕಸ್ ಕ್ಯೂರಿ ಆಗಿರುವ ಹಿರಿಯ ವಕೀಲ ವಿಕ್ರಮ್ ಹುಯಿಲಗೋಳ ಅವರು, ಅನಧಿಕೃತ ಜಾಹೀರಾತು ಅವಳಡಿಕೆ ತಡೆಗಟ್ಟಲು ಮತ್ತು ಅಳವಡಿಕೆದಾರರ ವಿರುದ್ಧ ಕ್ರಮ ಜರುಗಿಸಲು ಹೈಕೋರ್ಟ್ ಈ ಹಿಂದೆ ಹಲವು ಬಾರಿ ನಿರ್ದೇಶನ ನೀಡಿದೆ. ಆದರೆ, ಸರ್ಕಾರ, ಬಿಡಿಎ ಮತ್ತು ಬಿಬಿಎಮಪಿ ನ್ಯಾಯಾಲಯ ನಿರ್ದೇಶನಗಳನ್ನು ಪಾಲಿಸಲು ವಿಫಲವಾಗಿವೆ ಎಂದು ತಿಳಿಸಿದರು.
ಬಿಬಿಎಂಪಿ ಹೊರಾಂಗಣ ನಾಮಫಲಕ ಮತ್ತು ಸಾರ್ವಜನಿಕ ಸಂದೇಶಗಳು ಬೈಲಾ-2018ಗಳನ್ನು ಉಲ್ಲಂಘನೆ ಮಾಡಿ ವಿವಿಧ ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದ ಜಾಹೀರಾತು ಫಲಕಗಳನ್ನು ಬೆಂಗಳೂರಿನಾದ್ಯಂತ ಪ್ರದರ್ಶಿಸಲಾಗಿದೆ. ಜಾಹಿರಾತು ಫಲಕಗಳನ್ನು ಪ್ರದರ್ಶಿಸಗಲು ಬೈಲಾ ಪ್ರಕಾರ ಅನುಮತಿ ಪಡೆಯಲಾಗಿದೆ ಎಂಬ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಬೈಲಾ ಉಲ್ಲಂಘಿಸಿದವರ ವಿರುದ್ಧ ದಂಡ ಸಹಿತ ಕ್ರಮ ಜರುಗಿಸಲು ಅವಕಾಶವಿದೆ. ಆದರೆ, ಬಿಬಿಬಿಎಂಪಿಯು ಈ ವಿಚಾರದಲ್ಲಿ ಮೌನವಹಿಸಿದೆ. ಹೆಬ್ಬಾಳ ಮೇಲ್ಸೇತುವೆಯಲ್ಲಿ ವ್ಯಾಪಕವಾಗಿ ಜಾಹೀರಾತು ಫಲಕ ಅಳವಡಿಸಲಾಗಿದೆ ಎಂದು ಪೀಠದ ಗಮನಕ್ಕೆ ತಂದರು.
ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್ ಅವರು ನಗರದ ವಿವಿಧೆಡೆ ಅಳವಡಿಸಿರುವ ಹಲವು ಜಾಹೀರಾತುಗಳ ಪೋಟೊ ಮತ್ತು ಅವುಗಳ ಕುರಿತ ವಿವರಗಳನ್ನು ಪೀಠಕ್ಕೆ ಸಲ್ಲಿಸಿ, ಸ್ಥಳೀಯ ಪ್ರಾಧಿಕಾರದಿಂದ ಪೂರ್ವಾನುಮತಿ ಪಡೆಯದೇ ಸಾರ್ವಜನಿಕ ಪ್ರದೇಶದಲ್ಲಿ ಅನಧಿಕೃತವಾಗಿ ಜಾಹಿರಾತು ಅಳವಡಿಸಿದವರ ವಿರುದ್ಧ ಕ್ರಿಮಿನಲ್ ಕಾನೂನಿನ ಅಡಿಯಲ್ಲಿ ಕ್ರಮ ಜರುಗಿಸಬೇಕು ಎಂದು ಮೂರು ವರ್ಷಗಳ ಹಿಂದೆಯ ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ. ಆದರೂ ನಗರದಲ್ಲಿ ಅನಧಿಕೃತ ಜಾಹಿರಾತುಗಳ ಹಾವಳಿಯಿದ್ದು, ಅಧಿಕಾರಿಗಳು ಯಾವುದೇ ಕ್ರಮ ಜರುಗಿಸುತ್ತಿಲ್ಲ ಎಂದು ತಿಳಿಸಿದರು.
ಇದನ್ನು ಪರಿಗಣಿಸಿದ ಪೀಠವು ಪೊಲಿಸ್ ಇಲಾಖೆಯು ಸುತ್ತೋಲೆ ಹೊರಡಿಸಿ ಬಹುತೇಕ ಮೂರು ವರ್ಷ ಕಳೆದಿದೆ. ಆದರೆ, ಅನಧಿಕೃತ ಜಾಹೀರಾತು ಫಲಕಗಳ ಅಳವಡಿಕೆ ತಡೆಯುವ ಬದಲಿಗೆ ಸಾರ್ವಜನಿಕ ಸ್ಥಳದಲ್ಲಿ ಅನಧಿಕೃತ ಜಾಹೀರಾತುಗಳ ಅಳವಡಿಕೆ ವ್ಯಾಪಕವಾಗಿ ಹೆಚ್ಚಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಮೇಲಿನಂತೆ ನಿರ್ದೇಶಿಸಿ, ವಿಚಾರಣೆಯನ್ನು ಮಾರ್ಚ್ 7ಕ್ಕೆ ಮುಂದೂಡಿತು.