ಮನೆ ಕಾನೂನು ಸಂಗಾತಿಗಳಲ್ಲಿ ಒಬ್ಬರು ವಿವಾಹಿತರಾಗಿದ್ದರೆ ಲಿವ್-ಇನ್ ಸಂಬಂಧ ಮಾನ್ಯವಾಗದು: ಮದ್ರಾಸ್ ಹೈಕೋರ್ಟ್

ಸಂಗಾತಿಗಳಲ್ಲಿ ಒಬ್ಬರು ವಿವಾಹಿತರಾಗಿದ್ದರೆ ಲಿವ್-ಇನ್ ಸಂಬಂಧ ಮಾನ್ಯವಾಗದು: ಮದ್ರಾಸ್ ಹೈಕೋರ್ಟ್

0

ಸಂಗಾತಿಗಳಲ್ಲಿ ಒಬ್ಬರು ಈಗಾಗಲೇ ವಿವಾಹ ಸಂಬಂಧದಲ್ಲಿದ್ದರೆ ಆಗ ಅವರ ಸಹಜೀವನ  (ಲಿವ್-ಇನ್) ಸಂಬಂಧ ಕಾನೂನುಬದ್ಧವಾಗಿರದು ಎಂದು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತಿಳಿಸಿದೆ.

Join Our Whatsapp Group

ಸಹಜೀವನ ನಡೆಸುತ್ತಿರುವವರಲ್ಲಿ ಒಬ್ಬರಿಗೆ ಈಗಾಗಲೇ ವಿವಾಹವಾಗಿದ್ದರೆ ಅವರು ಲಿವ್‌- ಇನ್‌ ಸಂಗಾತಿಯ ಆಸ್ತಿಯ ಉತ್ತರಾಧಿಕಾರ ಅಥವಾ ಪಿತ್ರಾರ್ಜಿತ ಹಕ್ಕುಗಳನ್ನು ಪಡೆಯಲಾಗದು ಎಂದು ಜೂನ್ 7ರಂದು ಹೊರಡಿಸಿದ ಆದೇಶದಲ್ಲಿ, ನ್ಯಾಯಮೂರ್ತಿ ಆರ್‌ಎಂಟಿ ಟೀಕಾ ರಾಮನ್ ಅವರು ಹೇಳಿದ್ದಾರೆ.

ಮತ್ತೊಂದು ವಿವಾಹ ಸಂಬಂಧದಲ್ಲಿರುವ ಜೋಡಿ ತಮ್ಮ ಸಂಬಂಧವನ್ನು ಲಿವ್‌ ಇನ್‌ ಎಂದು ಕರೆದುಕೊಳ್ಳುವುದನ್ನು ಒಪ್ಪಲಾಗದು ಎಂದು ನ್ಯಾಯಾಲಯ ನುಡಿದಿದೆ. 

ಪಕ್ಷಕಾರರಿಬ್ಬರೂ ವಯಸ್ಕ ಅವಿವಾಹಿತರಾಗಿದ್ದು ಅಂತಹವರು ಸಹಜೀವನಕ್ಕೆ ಮುಂದಾದರೆ ಆಗ ಸ್ಥಿತಿ ಭಿನ್ನವಾಗಿರುತ್ತದೆ. ವಿವಾಹೇತರ ಸಂಬಂಧದಲ್ಲಿ ತೊಡಗುವವರು ಕೂಡ ತಮ್ಮ ಸಂಬಂಧಕ್ಕೆ ಲಿವ್‌ ಇನ್‌ ಹಣೆಪಟ್ಟಿ ಹಚ್ಚುತ್ತಿದ್ದಾರೆ. ಇದು ತಪ್ಪು ಮತ್ತು ಒಪ್ಪಲಾಗದಂಥದ್ದು ಎಂದು ಅದು ವಿವರಿಸಿದೆ.  

ಜಯಚಂದ್ರನ್‌ ಮತ್ತು ಮಾರ್ಗರೇಟ್‌ ಅರುಲ್‌ಮೋಳಿ ಪರಸ್ಪರ ವಿವಾಹವಾಗದೆ ಸಹಜೀವನ ನಡೆಸುತ್ತಿದ್ದರು. ಅವರಲ್ಲಿ ಜಯಚಂದ್ರನ್‌ ಈಗಾಗಲೇ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದರು. ದಂಪತಿಗೆ ಐವರು ಮಕ್ಕಳಿದ್ದರು. ಪರಿತ್ಯಕ್ತರಾಗಿದ್ದ ಅವರು ಕಾನೂನು ಪ್ರಕಾರ ವಿಚ್ಛೇದನ ಪಡೆದಿರಲಿಲ್ಲ. ಈ ನಡುವೆ ಸಹಜೀವನ ನಡೆಸುತ್ತಿದ್ದ ಜಯಚಂದ್ರನ್‌ ಮತ್ತು ಮಾರ್ಗರೇಟ್‌ ಮನೆಯೊಂದನ್ನು ಖರೀದಿಸಿದ್ದರು. ಮಾರ್ಗರೇಟ್‌ ಅವರ ಹೆಸರಿನಲ್ಲಿ ಅದನ್ನು ನೋಂದಾಯಿಸಲಾಗಿತ್ತು.

2013ರಲ್ಲಿ ಮಾರ್ಗರೇಟ್‌ ತೀರಿಕೊಂಡಾಗ ಜಯಚಂದ್ರ ಅವರು ಏಕಪಕ್ಷೀಯವಾಗಿ ನಿವೇಶನ ಪತ್ರವನ್ನು ರದ್ದುಪಡಿಸಿ ಮನೆಯನ್ನು ತಮ್ಮ ಹೆಸರಿಗೆ ಮಾಡಿಸಿಕೊಳ್ಳಲು ಮುಂದಾದರು. ಆದರೆ ಮಾರ್ಗರೇಟ್‌ ಅವರ ತಂದೆ (ಈಗ ತಂದೆ ಕೂಡ ಇಹಲೋಕ ತ್ಯಜಿಸಿದ್ದಾರೆ) ತನ್ನ ದಿವಂಗತ ಮಗಳ ಆಸ್ತಿಯ ಮೇಲೆ ಹಕ್ಕು ಮಂಡಿಸಿದ್ದರು. ಇದನ್ನು ವಿಚಾರಣಾ ನ್ಯಾಯಾಲಯ ಒಪ್ಪಿತ್ತು.

ಈ ಹಿನ್ನೆಲೆಯಲ್ಲಿ ಜಯಚಂದ್ರ ಹೈಕೋರ್ಟ್ ಮೆಟ್ಟಿಲೇರಿದ್ದರು. ತಾನು ಮತ್ತು ಮಾರ್ಗರೇಟ್‌ ಕಾನೂನುಬದ್ಧವಾಗಿ ಮದುವೆಯಾಗದಿದ್ದರೂ ಸತಿ- ಪತಿಯರಂತೆ ಒಟ್ಟಿಗೆ ವಾಸಿಸುತ್ತಿದ್ದೆವು. ಹೀಗಾಗಿ ಆಕೆಯ ಮರಣದ ನಂತರ ಆಸ್ತಿಯ ಹಕ್ಕು ತನಗೇ ಸೇರಬೇಕು ಎಂದು ಕೋರಿದ್ದರು.

ಆದರೆ ತಮ್ಮ ಮೊದಲ ಪತ್ನಿಗೆ ವಿಚ್ಛೇದನ ನೀಡದೆ ಮಾರ್ಗರೇಟ್‌ ಅವರೊಂದಿಗೆ ಲಿವ್‌ ಇನ್‌ ಸಂಬಂಧದಲ್ಲಿ ಇರುವುದು ಪತಿ- ಪತ್ನಿಯ ಕಾನೂನು ಸ್ಥಾನಮಾನ ಒದಗಿಸದು ಎಂದು ನ್ಯಾ. ಟೀಕಾ ರಾಮನ್‌ ತಿಳಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯದ ಆದೇಶ ಎತ್ತಿಹಿಡಿದ ಹೈಕೋರ್ಟ್‌ ವಿಚಾರಣೆ ಬಾಕಿ ಇರುವಾಗಲೇ ಮಾರ್ಗರೇಟ್‌ ಅವರ ತಂದೆ ಸಾವನ್ನಪ್ಪಿರುವುದರಿಂದ ಅವರ ಕಾನೂನುಬದ್ಧ ಉತ್ತರಾಧಿಕಾರಿಗಳು ಆಸ್ತಿಯ ಮಾಲೀಕರಾಗುತ್ತಾರೆ ಎಂದಿದೆ.