ಬೆಂಗಳೂರು: ರಾಮ ಮಂದಿರ ನಿರ್ಮಾಣಕ್ಕೆ ಕಾರಣರಾದ ಅಡ್ವಾಣಿ ಅವರಿಗೆ ಉದ್ಠಾಟನೆಗೆ ಅಹ್ವಾನ ನೀಡಿಲ್ಲ, ಅವರು ಬರಬಾರದು ಅಂದರೆ ಬಿಜೆಪಿ ಅವರಿಗೆ ಎಲ್ಲಿ ನೈತಿಕತೆ ಇದೆ? ಇನ್ನೂ ನಾವು ಯಾವ ಲೆಕ್ಕ ಎಂದು ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಪ್ರಶ್ನಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಅವರು ಭಾವನಾತ್ಮಕ ವಿಚಾರಗಳನ್ನ ಮುಂದಿಟ್ಟುಕೊಂಡು ಅದಕ್ಕೆ ಬಣ್ಣ ಕಟ್ಟಿ ರಾಜಕೀಯ ಮಾಡ್ತಾರೆ. ರಾಮಮಂದಿರ ಆಗೋಕೆ ಅಡ್ವಾಣಿ ಕಾರಣ. ಬಿಜೆಪಿ ಅವರು ಮೊದಲು ಹಿಂದೂ ಹಿಂದೂ.. ಅಧಿಕಾರ ಬಂದ ಮೇಲೆ ನಾವು ಮುಂದು, ನೀವು ಹಿಂದೆ ಅಂತಾರೆ. ಅಡ್ವಾಣಿ ಅವರನ್ನೇ ಬರಬೇಡಿ ಅಂದರೆ ಸಿಎಂ ಸಿದ್ದರಾಮಯ್ಯಗೆ ಆಹ್ವಾನ ಕೊಡದೇ ಇರುವ ವಿಷಯ ದೊಡ್ಡದಲ್ಲ ಎಂದು ಕಾಲೆಳೆದಿದ್ದಾರೆ.
ರಾಮಮಂದಿರ ಉದ್ಘಾಟನೆಗೆ ಸಿಎಂ, ಸಚಿವರಿಗೆ ಆಹ್ವಾನ ನೀಡದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಮಮಂದಿರಕ್ಕೆ ಹಣ ಸಂಗ್ರಹ ಮಾಡುವಾಗ ಎಲ್ಲರೂ ನೆನಪು ಆದ್ರು. ರಾಮಮಂದಿರ ರೆಡಿ ಆದ ಮೇಲೆ ಯಾರ ನೆನಪು ಕೂಡ ಬರೊಲ್ಲ. ನಾನು ಕೂಡಾ ರಾಮಮಂದಿರ ನಿರ್ಮಾಣಕ್ಕೆ 10 ಲಕ್ಷ ರೂ. ಕೊಟ್ಟಿದ್ದೇನೆ. ಸ್ಥಳೀಯ RSS ನಾಯಕರು ಹಣ ತೆಗೆದುಕೊಂಡು ಹೋಗಿದ್ದರು. ಆದರೆ ಈಗ ಯಾವುದಕ್ಕೂ ಆಹ್ವಾನ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಬಿಜೆಪಿಯಲ್ಲಿ ಇತ್ತೀಚೆಗೆ ಒನ್ ಮ್ಯಾನ್ ಆರ್ಮಿ ರೀತಿ ಆಗಿದೆ, ನಮಗೆ ಯಾವುದಕ್ಕೂ ಆಹ್ವಾನ ನೀಡಿಲ್ಲ ಎಂದು ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ನೀಡದ್ದಕ್ಕೆ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಬೇಸರ ವ್ಯಕ್ತಪಡಿಸಿದ್ದಾರೆ.