ಚಿಕ್ಕಬಳ್ಳಾಪುರ: ನಾವು ಅಧಿಕಾರಕ್ಕೆ ಬಂದರೆ 24 ಗಂಟೆಗಳಲ್ಲಿ ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುತ್ತೇವೆ. ವಿಧವೆಯರ ಮತ್ತು ಅಂಗವಿಕಲರಿಗೆ ಮಾಸಾಶನ ಹೆಚ್ಚಿಸುತ್ತೇವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಜೆಡಿಎಸ್ ಹಮ್ಮಿಕೊಂಡಿರುವ ‘ಪಂಚರತ್ನ’ ರಥಯಾತ್ರೆಯ ಬುಧವಾರ ಕೋಲಾರ ಜಿಲ್ಲೆಯ ಶ್ರೀನಿವಾಸಪುರದ ಮೂಲಕ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿದೆ.
ಈ ವೇಳೆ ಕೈವಾರ ಯೋಗಿ ನಾರೇಯಣ ಮಠಕ್ಕೆ ಎಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿದರು. ನಂತರ ಕೈವಾರ ಕಾಸ್‌ನಲ್ಲಿ ಮಳೆಯ ನಡುವೆಯೇ ಭಾಷಣ ಮಾಡಿದರು.
ಕೈವಾರ ಕ್ಷೇತ್ರದಲ್ಲಿ ತಾತಯ್ಯ ಅವರಿಗೆ ಪೂಜೆ ಸಲ್ಲಿಸಿದ್ದೇವೆ. ಅವರ ಅನುಗ್ರಹದಿಂದ ಈ ಕಾರ್ಯಕ್ರಮ ಯಶಸ್ವಿಯಾಗಲಿದೆ ಎಂದ ಅವರು, ನಾವು ಅಧಿಕಾರಕ್ಕೆ ಬಂದರೆ ಪ್ರತೀ ಗ್ರಾ.ಪಂನಲ್ಲಿ 30 ಹಾಸಿಗೆ ಸಾಮರ್ಥ್ಯದ ಸುಸಜ್ಜಿತ ಸರ್ಕಾರಿ ಆಸ್ಪತ್ರೆ ಪ್ರಾರಂಭಿಸಲಾಗುವುದು. ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಸರ್ಕಾರವೇ ಜೀವ ವಿಮೆ ಮಾಡಿಸಿಕೊಡಲಿದೆ ಚಿಕ್ಕಬಳ್ಳಾಪುರ ಜಿಲ್ಲೆಗೆ ಬೆಂಗಳೂರಿನ ಕೊಳಚೆ ನೀರನ್ನು ನೀಡುವ ಬದಲು ನದಿ ನೀರನ್ನು ನೀಡುತ್ತೇವೆ ಎಂದು ಹೇಳಿದರು.
2023ರ ವಿಧಾನಸಭಾ ಚುನಾವಣೆಯಲ್ಲಿ ಎಂ.ಕೃಷ್ಣಾರೆಡ್ಡಿ ಅವರನ್ನ ಮತ್ತೆ ಚಿಂತಾಮಣಿ ಕ್ಷೇತ್ರದಿಂದ ಆಯ್ಕೆ ಮಾಡಿ. ನಮ್ಮ ಸರ್ಕಾರ ಬಂದರೆ ಅವರು ಸಚಿವರಾಗಿ ಕೆಲಸ ಮಾಡುತ್ತಾರೆ ಎಂದು ಪ್ರಕಟಿಸಿದರು.
ಕೈವಾರ ತಾತಯ್ಯ ಅವರ ನೆಲದಲ್ಲಿ ನಿಂತಿದ್ದೇನೆ. ಮುಸ್ಲಿಮರು ನಮ್ಮ ಕೈ ಹಿಡಿದಿದ್ದೀರಿ. ನಾವು ಅಣ್ಣ ತಮ್ಮಂದಿರ ರೀತಿಯಲ್ಲಿ ಬದುಕಬೇಕು ಎಂದರು.
ರಥಯಾತ್ರೆಯು ಮುರುಗಮಲ್ಲ, ಕಾಗತಿ, ಬಟ್ಲಹಳ್ಳಿ, ಮಾಡಿಕೆರೆ ಕ್ರಾಸ್ ಮೂಲಕ ಚಿಂತಾಮಣಿ ನಗರ ಪ್ರವೇಶಿಸಲಿದೆ. ನಂತರ ತಾಲ್ಲೂಕಿನ ಚಿನ್ನಸಂದ್ರ ಗ್ರಾಮದಲ್ಲಿ ಕುಮಾರಸ್ವಾಮಿ ರಾತ್ರಿ ವಾಸ್ತವ್ಯ ಹೂಡಲಿದ್ದಾರೆ.