ಮನೆ ದೇಶ ಪ್ರಧಾನಿ ಮೋದಿ ಯೋಗ ವೇದಿಕೆಯಲ್ಲಿ ಸ್ಥಳೀಯ ಶಾಸಕರಿಗೆ ಅವಕಾಶವಿರುವುದಿಲ್ಲ: ಪ್ರತಾಪ್ ಸಿಂಹ

ಪ್ರಧಾನಿ ಮೋದಿ ಯೋಗ ವೇದಿಕೆಯಲ್ಲಿ ಸ್ಥಳೀಯ ಶಾಸಕರಿಗೆ ಅವಕಾಶವಿರುವುದಿಲ್ಲ: ಪ್ರತಾಪ್ ಸಿಂಹ

0

ಮೈಸೂರು‌(Mysuru): ಜೂನ್ 21 ರಂದು ನಡೆಯುವ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿದ್ದು, ಅಂದು ಅವರು ಯೋಗ ಮಾಡುವ ವೇದಿಕೆಯಲ್ಲಿ ನಾನು ಹಾಗೂ ಸ್ಥಳೀಯ ಯಾವ ಶಾಸಕರಿಗೂ ಅವಕಾಶವಿರುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಸ್ಪಷ್ಟಪಡಿಸಿದರು.

ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೋದಿ ಅವರ ಜೊತೆ ಮುಖ್ಯಮಂತ್ರಿ, ರಾಜ್ಯಪಾಲರು, ಕೇಂದ್ರ ಆಯುಷ್ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾತ್ರ ಅವಕಾಶ. ನಾವೆಲ್ಲಾ ರಾಜಕಾರಣಿಗಳು ವೇದಿಕೆಯ ಕೆಳ ಭಾಗದ ಒಂದು ಬದಿಯಲ್ಲಿರುತ್ತೇವೆ. ಇದರಲ್ಲಿ ಯಾವ ಬದಲಾವಣೆಗಳೂ ಇಲ್ಲ ಎಂದರು.

ಯೋಗ ದಿನದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನನ್ನ ಮತ್ತು ರಾಮದಾಸ್ ನಡುವೆ ಕ್ರೆಡಿಟ್ ವಾರ್ ನಡೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಮೋದಿ ಅವರ ವೇದಿಕೆ ಮುಂಭಾಗ 7 ಸಾವಿರ ಜನಕ್ಕೆ ಅವಕಾಶ ಇರುತ್ತದೆ. ಒಟ್ಟಾರೆ ಅರಮನೆಯ ಎಲ್ಲಾ ಭಾಗವೂ ಸೇರಿ 15 ಸಾವಿರ ಜನಕ್ಕೆ ಅವಕಾಶವಾಗಬಹುದು. ಆದರೆ, ಎಲ್ಲರಿಗೂ ಮೋದಿ ಅವರು ಕಾಣುವುದಿಲ್ಲ. ಈಗಾಗಲೇ ನೋಂದಣಿ ಆರಂಭವಾಗಿದೆ. ನೋಂದಣಿ ಮಾಡಿಕೊಂಡವರಿಗೆ ಮಾತ್ರ ಮೋದಿ ಅವರೊಂದಿಗೆ ಯೋಗ ಮಾಡಲು ಅವಕಾಶವಿರಲಿದೆ ಎಂದರು.

ಫ್ಲೆಕ್ಸ್ ಹಾಕಿ ನಗರ ಸೌಂದರ್ಯ ಹಾಳುಮಾಡಬೇಡಿ:

ಮೋದಿ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್‌ಗಳನ್ನು ಯಾರೂ ಹಾಕಬಾರದು. ಸರ್ಕಾರವೇ ಮೋದಿ ಅವರ ಸ್ವಾಗತದ ಬ್ಯಾನರ್‌ಗಳನ್ನು ಹಾಕುತ್ತದೆ. ನಮ್ಮ ಪಕ್ಷದವರೇ ಇರಲಿ, ಸಂಘ- ಸಂಸ್ಥೆಗಳವರೇ ಇರಲಿ ಯಾವುದೇ ಫ್ಲೆಕ್ಸ್‌ಗಳನ್ನ ಹಾಕಿ ನಗರದ ಸೌಂದರ್ಯ ಹಾಳು ಮಾಡಬಾರದು ಎಂದು ಕೋರಿದರು.