ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕೋರಿಕೆಯ ಹಿನ್ನೆಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆರ್ಥಿಕ ವರ್ಷದ ಪ್ರಾರಂಭದ ಒಂದು ತಿಂಗಳಲ್ಲಿ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿ ಮಾಡಿದಲ್ಲಿ ಶೇಕಡಾ 5ರಷ್ಟು ರಿಯಾಯಿತಿ ನೀಡಲು ಕಲ್ಪಿಸಿರುವ ಅವಕಾಶದ ಅವಧಿಯನ್ನು ಜುಲೈ 31ರವರೆಗೆ ರಾಜ್ಯ ಸರ್ಕಾರವು ವಿಸ್ತರಿಸಿ ಬುಧವಾರ ಆದೇಶಿಸಿದೆ.
ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಪಾವತಿಯನ್ನು ಪರಿಣಾಮಕಾರಿಯಾಗಿ ಹೆಚ್ಚಿಸಲು ಹಾಗೂ ಸ್ವಯಂ ತೆರಿಗೆ ಪಾವತಿಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಸೆಕ್ಷನ್ 105(1)ರ ಅನ್ವಯ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಲ್ಲಿ (ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ) ಆರ್ಥಿಕ ವರ್ಷ ಪ್ರಾರಂಭದ 30 ದಿನಗಳಲ್ಲಿ ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿ ಮಾಡಿದಲ್ಲಿ ಶೇಕಡಾ 5ರಷ್ಟು ರಿಯಾಯಿತಿ ನೀಡಲು ಕಲ್ಪಿಸಿರುವ ಅವಕಾಶದ ಅವಧಿಯನ್ನು ಜುಲೈ 31ರವರೆಗೆ ವಿಸ್ತರಿಸಿ ಆದೇಶಿಸಲಾಗಿದೆ ಎಂದು ತಿಳಿಸಲಾಗಿದೆ.
ಕೆಎಸ್‌ಎಲ್‌ಎಸ್‌ಎಗೆ ಇರುವ ಮಾಹಿತಿ ಪ್ರಕಾರ ಅಪಾರ ಪ್ರಮಾಣದ ಆಸ್ತಿ ತೆರಿಗೆ ಬಾಕಿ ಇದೆ. ಕರ್ನಾಟಕ ಪೌರಸಭೆಗಳ ಅಧಿನಿಯಮ 1964ರ ಅಡಿ ಆಸ್ತಿಯ ಕರ ಪಾವತಿಸಿದರೆ ಅದರ ಮಾಲೀಕರಿಗೆ ವಿನಾಯಿತಿ ನೀಡಲು ಅವಕಾಶವಿದೆ. ಇದರ ಅನ್ವಯ ರಾಜ್ಯ ಸರ್ಕಾರ ವಿನಾಯಿತಿ ವಿಸ್ತರಿಸಿದರೆ ಬೊಕ್ಕಸಕ್ಕೆ ಆದಾಯ ಹರಿದು ಬರಲಿದೆ. ಹೀಗಾಗಿ, ಕರ್ನಾಟಕ ಪೌರಸಭೆಗಳ ಅಧಿನಿಯಮ ಸೆಕ್ಷನ್‌ಗಳಾದ 103 ಮತ್ತು 105ರ ಅಡಿ ಜುಲೈ 13ರಂದು ನಡೆಯುವ ಎರಡನೇ ರಾಷ್ಟ್ರೀಯ ಲೋಕ ಅದಾಲತ್ ವೇಳೆಗೆ ಆಸ್ತಿ ತೆರಿಗೆ ಪಾವತಿ ವಿನಾಯಿತಿ ಗಡುವು ವಿಸ್ತರಿಸಲು ಕೆಎಸ್‌ಎಲ್‌ಎಸ್‌ಎ ಕಾರ್ಯಕಾರಿ ನಿರ್ದೇಶಕರು ಕೋರಿಕೆ ಸಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಸದಸ್ಯ ಕಾರ್ಯದರ್ಶಿ ಎಂ ಎಲ್ ರಘುನಾಥ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ವಿವರಿಸಿದ್ದರು.