ಮೈಸೂರು: 2024 ರ ಲೋಕಸಭಾ ಚುನಾವಣೆ ಸುಗಮವಾಗಿ ನಡೆಯಲು ಜಿಲ್ಲಾಡಳಿತ ಸರ್ವರೀತಿಯಲ್ಲೂ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದರು
ಜಿಲ್ಲಾಡಳಿತ ಭವನದಲ್ಲಿ ರಾಜಕೀಯ ಪಕ್ಷಗಳ ಮುಖಂಡರುಗಳೊಂದಿಗೆ ನಡೆದ ಮಾದರಿ ನೀತಿ ಸಂಹಿತೆ ಹಾಗೂ ಇತರೆ ಚುನಾವಣಾ ವಿಷಯಗಳ ಸಭೆಯಲ್ಲಿ ಮಾತನಾಡಿದ ಅವರು, ಭಾರತ ಚುನಾವಣಾ ಆಯೇಗದ ಸೂಚನೆಯಂತೆ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಸಿದ್ದತೆಗಳಾಗಿದ್ದು, ಮತಗಟ್ಟೆಗಳು ,ಇವಿಎಂ,ವಿವಿಪ್ಯಾಟ್ಗಳು, ಕ್ರಮಬದ್ದ ಮತದಾರರ ಪಟ್ಟಿಗಳು ಹಾಗೂ ಮಾನವ ಸಂಪನ್ಮೂಲ ಸಿದ್ದವಿದ್ದು, ಸುಗಮ ಹಾಗೂ ನಿರ್ಭೀತ ಚುನಾವಣೆ ನಡೆಸಲು ಆಡಳಿತ ಯಂತ್ರ ಸಿದ್ದವಿದೆ ಎಂದರು.
ಚುನಾವಣೆ ಘೋಷಣೆಯಾದ ನಂತರ ಯಾವುದೇ ಹೊಸ ಯೋಜನೆ ಅಥವ ಕಾಮಗಾರಿಯನ್ನು ಘೋಷಣೆ ಮಾಡುವುದು ಅಥವ ಘೋಷಣೆಯಾಗಿ ಕಾರ್ಯಾರಂಭವಾಗಿಲ್ಲದ ಕಾಮಗಾರಿಯನ್ನು ಪ್ರಾರಂಭಿಸುವುದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಈಗಾಗಲೇ ಘೋಷಣೆಗೊಂಡು ಪ್ರಾರಂಭಗೊಂಡು ಚಾಲ್ತಿಯಲ್ಲಿರುವ ಕಾಮಗಾರಿಗಳನ್ನು ಮುಂದುವರೆಸಬಹುದಾಗಿರುತ್ತದೆ.
ರಾಜಕೀಯ ಪಕ್ಷಗಳು ಪ್ಲೆಕ್ಸ್,ಬ್ಯಾನರ್, ಕಟೌಟ್ಗಳನ್ನು ಹಾಕುವ ಮುನ್ನ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಯ ಅನುಮತಿ ಪಡೆಯುವುದು ಕಡ್ಡಾಯ.
ಅನುಮತಿ ಕೋರಿ ಸಲ್ಲಿಕೆಯಾಗುವ ಅರ್ಜಿಗಳನ್ನು ಸ್ಥಳೀಯ ಸಂಸ್ಥೆಗಳು ಪರಿಶೀಲಿಸಿ ಅನುಮತಿ ನೀಡಲಿವೆ. ಅನುಮತಿ ಪಡೆಯದೇ ಅಳವಡಿಸಿದರೆ ಅಂತಹವುಗಳನ್ನು ತೆರವುಗೊಳಿಸಲಾಗುವುದು ಹಾಗೂ ನಿಯಮಾನುಸಾರ ದಂಡ ವಿಧಿಸಲಾಗುವುದು.
ಜಿಲ್ಲಾಡಳಿತ ಎಲ್ಲಾ ಮಾಹಿತಿಯನ್ನು ಮುಕ್ತವಾಗಿರಿಸಿದೆ, ಯಾವುದೇ ಮಾಹಿತಿಯನ್ನು ಮುಚ್ಚಿಟ್ಟಿಲ್ಲ, ತಮಗೆ ಯಾವುದೇ ನ್ಯೂನ್ಯತೆ ಕಂಡುಬಂದಲ್ಲಿ ಪ್ರಶ್ನಿಸಬಹುದಾಗಿದೆ
ಮತದಾರರ ಪಟ್ಟಿಯಲ್ಲಿ ಗೊಂದಲಗಳಿದ್ದರೆ ತಾವು ಬೂತ್ ಹಂತದ ಏಜೆಂಟರನ್ನು ನೇಮಿಸಿಕೊಂಡು ಪರೀಕ್ಷಿಸಿಕೊಳ್ಳಿ, ಸೇರ್ಪಡೆ,ತಿದ್ದುಪಡಿಗಳಿದ್ದರೆ ನಾಮಪತ್ರ ಸಲ್ಲಿಸುವ ಹತ್ತು ದಿನಗಳ ಮುಂಚಿನವರೆಗೂ ಅರ್ಜಿ ಸಲ್ಲಿಸಬಹುದು.
80 ತುಂಬಿದವರಿಗೆ ಮನೆಯಿಂದಲೇ ಮತದಾನ : 80 ವರ್ಷ ಮೇಲ್ಪಟ್ಟವರಿಗೆ ಹಾಗೂ ಶೇ,40ಕ್ಕಿಂತ ಹೆಚ್ಚು ಅಂಗವೈಕಲ್ಯ ಇರುವವರಿಗೆ ಮನೆಯಿಂದಲೇ ಮತದಾನ ಮಾಡಲು ಆಯೋಗ ಅವಕಾಶ ಕಲ್ಪಿಸಿದ್ದು ಮನೆಯಲ್ಲೇ ಮತದಾನ ಮಾಡಬಹುದಾಗಿದೆ, ಒಂದು ವೇಳೆ ಆರೋಗ್ಯವಾಗಿದ್ದು ಮತಗಟ್ಟೆಗೆ ಬರುವುದಾದರೂ ಬಂದು ಮತದಾನ ಮಾಡಬಹುದೆಂದರು.
ಈ ಹಿಂದೆ 2905 ಇದ್ದ ಮತಗಟ್ಟೆಗಳ ಸಂಖ್ಯೆ 2915 ಕ್ಕೆ ಹೆಚ್ಚಳವಾಗಿವೆ ಹಾಗೂ ಪ್ರತಿ ಮತಗಟ್ಟೆಗಳಲ್ಲೂ ಮೂಲಭೂತ ಸೌಲಭ್ಯಗಳಾದ Enquiry ನೀರು, ರ್ಯಾಂಪ್,ವಿದ್ಯುತ್, ಶೌಚಾಲಯ ಹಾಗೂ ನೆರಳಿನ ವ್ಯವಸ್ಥೆ ಮಾಡಲಾಗಿದೆ ಎಂದರು.
ಮತದಾರರ ಪಟ್ಟಿಯ ಪರಿಷ್ಕರಣೆ ಸಲುವಾಗಿ ಆರಂಭಿಸಿರುವ ಮತದಾರರ ಸಹಾಯವಾಣಿ -1950 ನ್ನು ಸಾರ್ವಜನಿಕರು, ರಾಜಕೀಯ ಪಕ್ಷಗಳು ಸದುಪಯೋಗಪಡಿಸಿಕೊಳ್ಳಬೇಕೆಂದರು.