ಬೆಂಗಳೂರು: ಬಿಜೆಪಿ ಜತೆಗೆ ಸಖ್ಯ ಬೆಳೆಸಿರುವ ಜೆಡಿಎಸ್ ಮುಂದಿನ ಲೋಕಸಭೆ ಚುನಾವಣೆಯ ಕ್ಷೇತ್ರ ಹಂಚಿಕೆಯಲ್ಲಿ ಮೊದಲ ಮೇಲುಗೈ ಸಾಧಿಸಿದೆ. ಎಚ್ ಡಿ ಕುಮಾರಸ್ವಾಮಿ ಅವರು ಅಂದುಕೊಂಡಂತೆ ಹಾಸನ ಮತ್ತು ಮಂಡ್ಯ ಕ್ಷೇತ್ರಗಳನ್ನು ಪಡೆದುಕೊಂಡಿದ್ದಾರೆ ಎನ್ನಲಾಗಿದೆ.
ಜೆಡಿಎಸ್ ಧುರೀಣ, ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ಸೀಟು ಹಂಚಿಕೆ ಮಾತುಕತೆಗಾಗಿ ದೆಹಲಿಗೆ ತೆರಳಿದ್ದಾರೆ. ಬಿಜೆಪಿ ಹಿರಿಯ ನಾಯಕ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಎಚ್ ಡಿಕೆ ಮೊದಲ ಹಂತದ ಸೀಟು ಹಂಚಿಕೆ ಅಂತಿಮಗೊಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ವರದಿಯ ಪ್ರಕಾರ ಮಂಡ್ಯ, ಹಾಸನ ಮತ್ತು ಕೋಲಾರ ಕ್ಷೇತ್ರಗಳನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಶಾ ಸಮ್ಮತಿಸಿದ್ದಾರೆ. ಉಳಿದ ಕ್ಷೇತ್ರಗಳ ಬಗ್ಗೆ ಇನ್ನಷ್ಟೇ ಅಂತಿಮವಾಗಲಿದೆ.
ಮೈತ್ರಿ ಅಂತಿಮವಾದ ಬಳಿಕ ಜೆಡಿಎಸ್ ಐದರಿಂದ ಆರು ಕ್ಷೇತ್ರಗಳಲ್ಲಿ ಸ್ಪರ್ಧೆ ನಡೆಸಲಿದೆ ಎನ್ನಲಾಗಿತ್ತು. ಐದು ಕ್ಷೇತ್ರಗಳು ಅಂತಿಮವಾಗಿದೆ ಎನ್ನುವ ವರದಿಯೂ ಬಂದಿತ್ತು. ಹಾಸನ ಮತ್ತು ಮಂಡ್ಯ ಕ್ಷೇತ್ರಗಳ ಬಗ್ಗೆ ಎಚ್ ಡಿಕೆ ಒಲವು ಹೊಂದಿದ್ದರು. ಆದರೆ ಈ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಸ್ಥಳೀಯ ನಾಯಕರು ಇದಕ್ಕೆ ವಿರೋಧ ಹೊಂದಿದ್ದರು. ಹಾಸನದಲ್ಲಿ ಪ್ರೀತಮ್ ಗೌಡ ಅವರು ಮೈತ್ರಿ ಬಗ್ಗೆ ಬಹಿರಂಗವಾಗಿ ವಿರೋಧ ವ್ಯಕ್ತಪಡಿಸಿದ್ದರು.