ಪ್ರಜಾಸತ್ತೆಯ ನಾಡಹಬ್ಬ ಲೋಕಸಭಾ ಚುನಾವಣೆಯ 7 ಹಂತದ ಮತದಾನ ಮುಗಿದಿದ್ದು ಜೂ.4 ರಂದು ಫಲಿತಾಂಶ ಹೊರಬೀಳುವುದರೊಂದಿಗೆ ಸತತ 39 ದಿನಗಳ ಕಾಯುವಿಕೆಗೆ ತೆರೆ ಬೀಳಲಿದೆ.
ತಾನೇ ಮತ ಚಲಾಯಿಸಿ, ತನ್ನದೇ ಹೊಸ ಸರ್ಕಾರ ಆಯ್ಕೆ ಮಾಡಿಕೊಳ್ಳಲು ಅಣಿಯಾಗಿರುವ ಮತದಾರ ಪ್ರಭು ಒಂದೆಡೆಯಾದರೆ, ಆಯ್ಕೆ ಬಯಸಿ ಕಣಕ್ಕಿಳಿದಿರುವ ಅಭ್ಯರ್ಥಿಗಳು ಜಾತಕ ಪಕ್ಷಿಗಳಂತೆ ಈ ದಿನವನ್ನೇ ಎದುರು ನೋಡುತಿದ್ದರು.
ಮೈಸೂರು -ಕೊಡಗು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯ ನಗರದ ಪಡುವಾರಹಳ್ಳಿಯ ಮಹಾರಾಣಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಮುಂಜಾನೆ 8 ಗಂಟೆಗೆ ಆರಂಭವಾಗಲಿದ್ದು ಸಕಲ ಸಿದ್ದತೆಗಳು ಅಂತಿಮ ಹಂತ ತಲುಪಿದ್ದು 18 ಅಭ್ಯರ್ಥಿಗಳ ಹಣೆಬರಹ ನಿರ್ಧಾರವಾಗಲಿದೆ.
ಸುಭದ್ರ ಭಧ್ರತೆಯೊಂದಿಗೆ ಸ್ಟಾಂಗ್ ರೂಂನಲ್ಲಿ ವಿರಾಜಮಾನವಾಗಿದ್ದ ಇವಿಎಂ ಗಳಲ್ಲಿ ಅಡಗಿದ್ದ ಭವಿಷ್ಯವನ್ನ ಚುನಾವಣಾ ಸಿಬ್ಬಂದಿಗಳು ಬೇಧಿಸಲಿದ್ದಾರೆ.
ಮತ ಎಣಿಕೆ ಕೇಂದ್ರದಲ್ಲಿ ಮೂರು ಹಂತದ ಭದ್ರತಾ ವ್ಯವಸ್ಥೆ ಇದ್ದು, ಸೂಕ್ತ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಈ ಮಧ್ಯೆ ಹಳ್ಳಿ ಹಳ್ಳಿ, ಗಲ್ಲಿ ಗಲ್ಲಿಗಳಲ್ಲಿ ತಮ್ಮದೇ ಲೆಕ್ಕಾಚಾರದ ಮೂಲಕ ಅಂಕಿ ಅಂಶಗಳನ್ನ ಪಕ್ಕಾಗಿಸುವ ಚುನಾವಣಾ ಚಾಣಕ್ಯರಿಗೇನು ಕೊರತೆಯಿರಲಿಲ್ಲ.
ಕೆಲವರು ಗೆಲ್ಲಬಹುದು, ಹಲವರು ಸೋಲಬಹುದು ಆದರೆ ಮುಕ್ತ ನಿರ್ಭೀತ ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸ ಚುನಾವಣಾ ಆಯೋಗ ಜಯಶಾಲಿಯಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ.














