ಮನೆ ಪೌರಾಣಿಕ ಲೋಕಾಲೋಕ ಪರ್ವತ

ಲೋಕಾಲೋಕ ಪರ್ವತ

0

ಪುಷ್ಕರ ದ್ವೀಪದ ಹೊರಗೆ ಸ್ವಾದು ಜಲಮಹಾರ್ಣವವಿದೆ. ಶುದ್ಧ ಜಲಸಾಗರಕ್ಕೆ ಬಹಿರ್ವಲಯದಲ್ಲಿ ಪುಷ್ಕರ ದ್ವೀಪದ ಎರಡರಷ್ಟು ಪ್ರಮಾಣದಲ್ಲಿ ಜನಶೂನ್ಯವಾದ ಚಕ್ರವಾಳ ಪರ್ವತವು ಕನಕ ವರ್ಣದಲ್ಲಿ ನೆಲೆಸಿದೆ. ಆನಂತರ ಇರುವುದು ಸರ್ವ ಶೂನ್ಯವಾದ ಅಲೋಕ. ಇಲ್ಲಿ ದೃಶ್ಯ ದರ್ಶನಗಳು ಎರಡೂ ಇಲ್ಲ. ಲೋಕ ಮತ್ತು ಅಲೋಕಗಳ ನಡುವೆಯಿರುವ ಪ್ರದೇಶದಲ್ಲಿ ಹತ್ತು ಸಾವಿರ ಯೋಜನಗಳ ಪ್ರಮಾಣದಲ್ಲಿ ಲೋಕಾಲೋಕ ಪರ್ವತವಿದೆ. ಈ ಪರ್ವತದ ಉಪರಿ ತಳವು ಸ್ಪಟಿಕಕ್ಕಿಂತಲೂ ಸ್ವಚ್ಛವಾದ ಗರಗರಿಕೆಯಿಂದ ಚಿನ್ನದ ಬಣ್ಣದಲ್ಲಿ ಪ್ರಕಾಶಮಾನವಾಗಿ ಶೋಭಿಸುತ್ತಿರುತ್ತದೆ. ಲೋಕಾಲೋಕ ಪರ್ವತವು ತ್ರಿಭುವನಗಳಿಗೂ ಪರಾಂತಿಕ. ಈ ಮಹಾದ್ರಿಯ ಮೇಲೆ ಪ್ರಾಚೀ ದಿಶೆಯಲ್ಲಿ ವೃಷಭ, ಪಶ್ಚಿಮಾಗ್ರದಲ್ಲಿ ಪುಷ್ಪಚೂಡ, ಉತ್ತರ ದಿಕ್ಕಿನಲ್ಲಿ ವಾಮನ, ದಕ್ಷಿಣದಲ್ಲಿ ಅಪರಾಜಿತವೆಂಬ ನಾಲ್ಕು ದಿಗ್ಗಜಗಳು ನಿಂತಿದ್ದು ಅವು ಲೋಕಾಭಿರಕ್ಷಣೆ ಯನ್ನು ಮಾಡುತ್ತಿವೆ ಅನಂತಕೋಟಿ ಮಾರ್ತಾಂಡ ಮಂಡಲಮಯೂಭ ರೇಖಾ ಶಿಖಾ ಮಹೋಜ್ವಲವಾದ ಲೋಕಾಲೋಕ ಪರ್ವತದಿಂದ ಸೂರ್ಯಾದಿ ಗ್ರಹತಾರೆಗಳು ಕಾಂತಿಪುಂಜಗಳನ್ನು ಸ್ವೀಕರಿಸಿ ಲೋಕಗಳಿಗೆಲ್ಲಾ ಪ್ರಸರಿಸುತ್ತಿವೆ.

Join Our Whatsapp Group

         ಲೋಕಾಲೋಕ ಪರ್ವತಗಳಿಗೆ ಬಹಿರ್ನಿಲಯದಲ್ಲಿರುವುದು ಸರ್ವಶೂನ್ಯ ವಾದ ಆಲೋಕ, ಮುಚ್ಚಿರುವ ಮಂಜೂಷದಲ್ಲಿನ ಕತ್ತಲಿನಂತೆ ಲೋಕಾಲೋಕವನ್ನು ಅತಿಕ್ರಮಿಸಿ ಅತ್ಯಂತ ನಿಭಿಡವಾದ ಮಹಾಅಂಧಕಾರವಿದೆ. ಅಂಡಕ್ಕೆ ಉಪರಿತಳದಲ್ಲಿನ ಚಿಪ್ಪೆಯು ಒಳಗಿರುವ ವಸ್ತುವನ್ನು ಮುಚ್ಚಿರುವಂತೆ ಬ್ರಹ್ಮನು ಕಲ್ಪಿಸಿದ ಈ ಸೃಷ್ಟಿ ಸರ್ವಸ್ವವನ್ನು ಆವರಿಸಿ ಅನಂತ ಮಹಾ ಪರಿಣಾಮದಲ್ಲಿ ಬ್ರಹ್ಮಾಂಡ ಕಟಾಹದ ಸ್ಥಿತ್ಯಂತರಕ್ಕೆ ನಿದರ್ಶನವಾಗಿದೆ. ಈ ವಿಧವಾಗಿ ಭೂಮಿಯ ಮೇಲೆ ದೃಶ್ಯ ಗೋಚರವಾದ ಕುಲಪರ್ವತಗಳು, ಮಹಾರ್ಣವಗಳು, ಜನವಾಸಗಳಿರುವ ಒಟ್ಟು ಪರಿಮಾಣ ಐವತ್ತು ಕೋಟಿ ಯೋಜನಗಳು. ಇದು ಸೃಷ್ಟಿಯ ಸ್ವರೂಪ ಈ ರೀತಿಯಾಗಿ ನವದ್ವೀಪಗಳ ಮಹಿಮೆಯ ವರ್ಣನೆಯನ್ನು ಕರ್ಣಪರ್ವವಾಗಿ ಆಲಿಸಿ ಪುಳಕಿತನಾದ ಮೈತ್ರೇಯನು, ”ಮುನಿ ಕುಲೋತ್ತಮಾ। ಪರಮ ಪವಿತ್ರವಾದ ಭೂಮಂಡಲ ಸ್ವರೂಪವನ್ನು ಅತಿಲೋಕ ರಮಣೀಯವಾಗಿ ವಿವರಿಸಿ ಹೇಳಿದಿರಿ. ಈ ಭೂಲೋಕದ ಕೆಳಗೆ ನೆಲೆಸಿದ ಅಧೋ ಲೋಕಗಳ ವಾಸ್ತವ್ಯ ಸ್ವರೂಪವನ್ನು ಸಂಕ್ಷಿಪ್ತವಾಗಿ ವಿವರಿಸಿ ಹೇಳಿ” ಎಂದು ಬೇಡಿಕೊಂಡನು. ಶಿಷ್ಯನ ಬೇಡಿಕೆಯನ್ನು ಕೇಳಿ ಪ್ರೀತಿಯಿಂದ ಮುಗುಳ್ಳಗೆಯನ್ನು ಬೀರಿ ಪರಾಶರ ಮಹರ್ಷಿಯು ಈ ರೀತಿಯಾಗಿ ಹೇಳಲಾರಂಭಿಸಿದನು.

 ಅಧೋಲೋಕದ ವರ್ಣನೆ :

ಭೂಮಂಡಲದ ಅಧೋಭಾಗದಲ್ಲಿ ಹತ್ತು ಸಾವಿರ ಯೋಜನಗಳ ದೂರದಲ್ಲಿ ಏಳು ಮಹಾಲೋಕಗಳಿವೆ. ಈ ಲೋಕಗಳಿಗೆ ಆತಲ, ವಿತಲ, ನಿತಲ, ಗಭಸ್ತಿಮಂತ, ಮಹಾತಲ, ಸುತಲ, ಪಾತಾಳ ಎಂಬ ಹೆಸರುಗಳಿವೆ. ಈ ಲೋಕಗಳ ನಾಮಧೇಯಗಳಂತೆಯೇ ರೂಪಧೇಯಗಳೂ ಸಹ ಅಭಿರಾಮಗುಣವಾಗಿವೆ. ಇವುಗಳಲ್ಲಿ ಆತಲ ಲೋಕವು ಶುಕ್ಲವರ್ಣಮಯವಾಗಿದೆ. ವಿತಲ ಲೋಕವು ಕೃಷ್ಣವರ್ಣ ಸಮೇತವಾಗಿದೆ. ನಿತಲ ಲೋಕವು ಆರುಣ ವರ್ಣಾಂಕಿತ, ಗಭಸ್ತಿಮಂತ ಲೋಕವು ಪೀತವರ್ಣಸಂಯುಕ್ತವಾಗಿಯೂ, ಮಹಾತಲ ಶರ್ಕರಾವರ್ಣದಿಂದ, ಸುತಲ ಶೈಲವರ್ಣದಿಂದಲೂ ಕೂಡಿವೆ. ಇನ್ನು ಪಾತಾಳಲೋಕವು ಮೇದಿನೀ ವಲಯದ ಅಧೋಭಾಗದಲ್ಲಿ ಎಪ್ಪತ್ತು ಸಾವಿರ ಯೋಜನಗಳ ದೂರದಲ್ಲಿ ಚಿನ್ನದ ಬಣ್ಣದಲ್ಲಿ ಸಮುಜ್ಜಲವಾಗಿ ಪ್ರಕಾಶಿಸುತ್ತಾ ವ್ಯಾಪ್ತವಾಗಿದೆ. ಈ ಎಲ್ಲಾ ಲೋಕಗಳಲ್ಲಿಯೂ, ದಾನವರು, ದೈತ್ಯರು, ಯಕ್ಷರು, ಭುಜಗಭೂಷಣರು ನಿತ್ಯ ನಿವಾಸಿಗಳಾಗಿ ಆನಂದ ಲೋಕಗಳಲ್ಲಿ ತೇಲುತ್ತಿರುತ್ತಾರೆ.

         Bಮೈತ್ರೇಯಾ! ಬ್ರಹ್ಮ ಮಾನಸಪುತ್ರನಾದ ನಾರದ ಮಹರ್ಷಿಯು ಸಮಸ್ತ ಲೋಕಗಳನ್ನು ಸುತ್ತಿ ಬಂದು ನನ್ನೊಂದಿಗೆ ಪಾತಾಳ ಲೋಕವು ಸಮಸ್ತ ಲೋಕಗಳಿಗಿಂತಲೂ, ದೇವಪುರಿಗಿಂತಲೂ ದಿವ್ಯ ಭೋಗಭಾಗ್ಯಗಳೊಂದಿಗೆ ದೇದೀಪ್ಯಮಾನವಾಗಿ ಕಂಗೊಳಿಸುತ್ತಿದೆಯೆಂದು ಘಂಟಾಘೋಷವಾಗಿ ಹೇಳಿದನು. ಜಾತರೂಪ ತೇಜೋವಿಲಾಸವಾದ ಆ ಪ್ರದೇಶದಲ್ಲಿ ನಾಗರಾಜರ ಪಣಾಮಣಿಗಣಗಳು ತುಂಬು ಬೆಳಕಿನಿಂದ ನೋಡಲು ಆಹ್ಲಾದಕರವಾಗಿರುತ್ತದೆ. ಅಲ್ಲಿ ದೈತ್ಯಯ ದಾನವ ರಾಜರುಗಳು ಧರಿಸಿದ ರೇಷ್ಮೆ ವಸ್ತ್ರಗಳು ನೆಲಕ್ಕೆ ತಾಕುತ್ತಿದ್ದರೆ ಲೀಲಾ ಸರ್ಪಭೂಷಣ ಆಭರಣಗಳು ತುಂಬಾ ಮನೋಹರವಾಗಿ ಗೋಚರಿಸುತ್ತವೆ. ಪಾತಾಳ ಲೋಕದಲ್ಲಿ ಸೂರ್ಯಚಂದ್ರರಿಗೆ ತೇಜೋದರ್ಶನವೇ ಹೊರತು ಉಷ್ಣಶೀತಗಳಿಲ್ಲ. ಮಧ್ಯಾಹ್ನದ ವೇಳೆಯಲ್ಲಿನ ಉರಿಬಿಸಿಲು ಸಹ ಬೆಳಕೇ ಹೊರತು ಉಷ್ಣ ತಾಪವಿರುವುದಿಲ್ಲ. ಅದೇ ರಾತ್ರಿಯ ಬೆಳದಿಂಗಳು ಬೆಳಕನ್ನು ಹೊರತುಪಡಿಸಿ ತಣ್ಣನೆಯ ಅನುಭವವನ್ನು ಕೊಡಲಾರದು.

          ದರ್ಶನೀಯವಾದ ಆ ದಿವ್ಯಲೋಕದಲ್ಲಿ ಎತ್ತ ನೋಡಿದರೂ ನಿರ್ಮಲ ಜಲದೊಂದಿಗೆ, ತುಂಬಿ ಹರಿಯುವ ನದೀ ಜಲಗಳಲ್ಲಿನ ತಾವರೆ ಹೂವುಗಳ ಮಕರಂದವನ್ನು ಕಂಡು ಪರವಶವಾಗುವ ಚಿಟ್ಟೆಗಳ ಮನೋಹರವಾದ ಸಂಗೀತನಾದವು ಪ್ರತಿಧ್ವನಿಸುತ್ತಾ ಕಿವಿಗೆ ಆಹ್ಲಾದವನ್ನುಂಟು ಮಾಡುತ್ತಿರುತ್ತದೆ. ನಾಗಲೋಕವು ಸರ್ವಭೋಗ ಭಾಗ್ಯಗಳ ತವರು. ಅಲ್ಲಿ ಲಭಿಸುವ ಭಕ್ಷ್ಯ ಭೋಜ್ಯಗಳು, ಲೇಹ್ಯಗಳು,ಚೋದ್ಯಗಳು, ಪಾನೀಯಗಳು, ಸುಗಂಧ ದ್ರವ್ಯಗಳು ಅಲಂಕಾರ ವಸ್ತುಗಳು,ಆಭರಣಗಳು, ನಾಣ್ಯಗಳಿಗೆ ಮಿತಿಯೇ ಇಲ್ಲ. ಸಪ್ತ ಪಾತಾಳಗಳಿಗೂ ಅಧೋ ಭಾಗದಲ್ಲಿ ಮಹಾಂಧಕಾರ ನಿಬಿಡವಾಗಿದೆ. ಅದಕ್ಕೆ ಪರ್ಯಂತವಾಗಿ ಸೂರ್ಯಚಂದ್ರರನ್ನುಮೀರಿದ ಹೆಡೆಗಳ ಬೆಳಕಿನಿಂದ ಸಹಸ್ರ ಶಿರಸ್ಸನ್ನುಳ್ಳ ಆದಿಶೇಷನಿದ್ದಾನೆ. ಆದಿಶೇಷನು ಸರ್ಪಕುಲದ ಅಧಿದೇವರು. ಆತನು ಅಪರ ಪುರುಷೋತ್ತಮ ಅವತಾರನು. ಆಅನಂತನ ಅನಂತ ಮಹಿಮೆಯನ್ನು ವರ್ಣಿಸಲು ಸಾಧ್ಯವಾಗದು.ವರ್ಣನಾತೀತವಾದುದು, ಸರ್ಪಜರಠಸ್ವಾಮಿ ಭೋಗಮಂಡಲದ ಮೇಲೆ ಭೂಮಂಡಲವು ನಿಂತಿದೆ. ಆದಿಶೇಷನ ಅನಂತ ವೈಭವ ಐಶ್ವರ್ಯಗಳು ಅನಂತ ಮಹಿಮಾನ್ವಿತಗಳು ಆ ಸಹಸ್ರ ಶಿರಸ್ಸುಗಳನ್ನು ವಿಭೂಷಿಸಿದ ಕಿರೀಟಗಳಲ್ಲಿ ಒದಗಿಸಲ್ಪಟ್ಟ ಆತನ ಗರ್ಭೋದ್ದೂತ ಮಣಿರತ್ನಗಳ ದಿವ್ಯ ಕಾಂತಿಗಳು ದಿಶ ದಿಶೆಗಳಿಗೂ ಹಬ್ಬಿ ಲೋಕಗಳಿಗೆ ದೀಪ್ತಿಯನ್ನು ಪ್ರಸಾದಿಸುತ್ತಿವೆ. ಆತನು ಮಧುಪಾನ ಮಾಡಿ ಮಾಧುರ್ಯಪಾರವಶ್ಯದಿಂದ ಮತ್ತಿನಿಂದ ಕೆಂಪಗಾದ ಕಣ್ಣುಗಳೊಂದಿಗೆ ತೂಗುತ್ತಿದ್ದಾಗ ನಿಖಿಲ ಸಾಗರ ನದೀ ಪರ್ವತಾರಣ್ಯ ಸಂಕುಲವಾದ ಭೂಮಿಯು ಕಂಪಿಸಿ ಜಗತ್ತೆಲ್ಲಾ ಅಲ್ಲೋಲ ಕಲ್ಲೋಲವಾಗುತ್ತದೆ. ಭೋಗೀಶ್ವರನ ರೂಪರೇಖೆಗಳನ್ನು ಕೇವಲ ಮಾತುಗಳಿಂದ ಹೇಳುವುದಕ್ಕೆ ಸಾಧ್ಯವಲ್ಲ. ಆ ಸೌಂದರ್ಯ ರತ್ನಾಕರನ ವಿಶ್ವಾಸವು ಹರಿಚಂದನ ಪರಿಮಳದೊಂದಿಗೆ ಪಾತಾಳವನ್ನು ಸುರಭೀಗೊಳಿಸುತ್ತಿವೆ. ಆ ವಿರಾಟ್ಟು ಪುರುಷನನ್ನು ಕಣ್ಣಾರೆ ಕಂಡ ಅಪ್ಪರ, ಸಿದ್ದ, ಸಾಧ್ಯ, ಗಂಧರ್ವ, ಚಾರಣರಿಗೂ ಸಹ ಆತನ ಪ್ರಭಾವವನ್ನು ಸಮಗ್ರವಾಗಿ ವರ್ಣಿಸಬಲ್ಲ ವೈಖರೀಶಕ್ತಿಯು ಇಲ್ಲದೇಯಿರುವುದರಿಂದಲೇ ಆ ಅನಂತ ಮಹಿಮಾನ್ವಿತನಿಗೆ ಅನಂತನೆಂಬ ಹೆಸರು ಬಂದಿದೆ. ಆದಿಪಣೀಶ್ವರನ ಸನ್ನಿಧಾನದಲ್ಲಿನ ಕೈಲಾಸ ಶಿಖರಗಳಿಂದ ಇಳಿದು ಬಂದ ಆಕಾಶಗಂಗೆಯು ಸಣ್ಣದಾಗಿ ಸೀಳಿಕೊಂಡು ಆತನ ಪಾದ ದೇಶದಲ್ಲಿ ಮಂದಗಮನದಿಂದ

ಪ್ರವಹಿಸುತ್ತಿರುತ್ತದೆ. ಲಾಂಗಲ, ಮುಸಲಗಳು ಆತನ ದಿವ್ಯ ಲಾಂಛನಗಳಾಗಿವೆ. ಸಕಲ ಚರಾಚರ ಭೂತರಾಶಿಯೆಲ್ಲಾ ಅನಂತನ ಕೃಪಾದೀನವೇ ಆಗಿದೆ. ಆ ಮಹನೀಯನ ಆಗ್ರಹ ಅನುಗ್ರಹಗಳೇ ಸರ್ವಲೋಕಗಳಿಗೂ ನಿಲಯಸ್ಥಿತಿ ಕಾರಣಗಳು. ಆತನ ಕರುಣಾ ಕಟಾಕ್ಷವನ್ನು ಆಶ್ರಯಿಸಿದ ಸತ್ಪುರುಷರ ಪುಣ್ಯವೇ ಪುಣ್ಯ. ಈ ರೀತಿಯಾಗಿ ಐವತ್ತು ಕೋಟಿ ಯೋಜನಗಳ ಸುವಿಸ್ತಾರವಾದ ಭೂಮಂಡಲವನ್ನು ಆದಿಶೇಷನು ತಲೆಯ ಮೇಲಿನ ಹೂವಿನಂತೆ ಸುಲಭವಾಗಿ ಹೊತ್ತು ಭರಿಸುತ್ತಿದ್ದಾನೆ. ಆತನ ಮಹಿಮೆಗೂ ಕ್ಷಿತಿಸಂಭರಣ ಶಕ್ತಿಗೂ ಶ್ರೀಮನ್ನಾರಾಯಣನ ದಿವ್ಯ ಪ್ರಭಾವವೇ ಕಾರಣವಾದುದು.ಶೇಷ ಪೃದಾಕುವನ್ನು ಸದ್ಗುರುಗಳನ್ನಾಗಿ ಉಪಾಸನೆ ಮಾಡಿ ಪೂರ್ವ ಕಾಲದಲ್ಲಿ ಗರ್ಗ ಮಹರ್ಷಿ ಜ್ಯೋತಿಶಾಸ್ತ್ರವನ್ನು ಶಕುನ ಶುಭಾಶುಭಗಳನ್ನು ತಿಳಿದು ಅಪಾರ ಪಾಂಡಿತ್ಯವನ್ನು ಸಂಪಾದಿಸಿದನು. ಆ ವಿದ್ಯಾಪತಿಯನ್ನು ಅರ್ಚಿಸಿ ವೈಷ್ಣವ ಭಕ್ತರು ನರಕಗಳನ್ನು ಕಳೆದು ಪುಣ್ಯ ಲೋಕಗಳನ್ನು ಅಧಿಗಮಿಸುತ್ತಿದ್ದಾರೆ.