ಮೈಸೂರು: ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರ ಪ್ರಶಾಂತ್ ಮಾಡಾಳ್ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆಸಿರುವ ಪ್ರಕರಣದಿಂದಾಗಿ ಪಕ್ಷಕ್ಕೆ ಯಾವುದೇ ಮುಜುಗರವಾಗಿಲ್ಲ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ನಾವು ಲೋಕಾಯುಕ್ತವನ್ನು ಬಲಪಡಿಸಿದ ಕಾರಣದಿಂದಲೇ ಈ ದಾಳಿ ನಡೆದಿದೆ. ಯಾರು ತಪ್ಪು ಮಾಡಿದ್ದಾರೋ ಅವರು ಶಿಕ್ಷೆ ಅನುಭವಿಸುತ್ತಾರೆ ಎಂದರು.
ಕಾಂಗ್ರೆಸ್ ನಿಂದ ನನಗೆ ಆಫರ್ ಬಂದಿದೆ ಎಂಬ ಸಚಿವ ನಾರಾಯಣಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನನಗೆ ಯಾವುದೇ ಆಫರ್ ಬಂದಿಲ್ಲ. ಒಳ್ಳೆಯ ಕೆಲಸ ಮಾಡಿ ಎಂದು ಬಿಜೆಪಿಯವರು ಜವಾಬ್ದಾರಿ ಕೊಟ್ಟಿದ್ದಾರೆ, ಆ ಕೆಲಸವನ್ನು ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದರು.
ಮೈಸೂರಿಗೆ ಒಂದು ತಿಂಗಳಿನಿಂದ ಬರದಿರುವುದಕ್ಕೆ ಚುನಾವಣೆ ಕಾರಣವಲ್ಲ. ಇಲಾಖೆಯ ಬೇರೆ ಬೇರೆ ಕಾರ್ಯಕ್ರಮಗಳ ಕಾರಣ ಬೇರೆ ಜಿಲ್ಲೆಗಳಿಗೆ ಓಡಾಡುತ್ತಿದ್ದೇನೆ. ಹೀಗಾಗಿ ಬಂದಿಲ್ಲ ಅಷ್ಟೆ. ವಿಜಯ ಸಂಕಲ್ಪ ಯಾತ್ರೆಯಲ್ಲಿ ನನಗೆ ಬೆಂಗಳೂರು ಜವಾಬ್ದಾರಿ ಇದೆ. ಅಲ್ಲಿ ಆ ಕೆಲಸ ಮಾಡುತ್ತಿದ್ದೇನೆ ಎಂದು ಎಸ್ .ಟಿ ಸೋಮಶೇಖರ್ ತಿಳಿಸಿದರು.














