ಮನೆ ಕಾನೂನು ಕಾವೇರಿ ನೀರಾವರಿ ನಿಗಮದ ಎಂ ಡಿ ಸೇರಿದಂತೆ ನಾಲ್ವರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

ಕಾವೇರಿ ನೀರಾವರಿ ನಿಗಮದ ಎಂ ಡಿ ಸೇರಿದಂತೆ ನಾಲ್ವರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

0

ಬೆಂಗಳೂರು: ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ.) ಮಹೇಶ್.‌ ಬೆಂಗಳೂರಿನ ಅಬಕಾರಿ ಸೂಪರಿಂಟೆಂಡ್‌ ಮೋಹನ್‌ ಕೆ. ಸೇರಿದಂತೆ ನಾಲ್ವರು ಅಧಿಕಾರಿಗಳ ಮನೆಗಳು, ಅವರ ಆಪ್ತರ ಮನೆಗಳು ಸೇರಿದಂತೆ 25 ಸ್ಥಳಗಳ ಮೇಲೆ ಗುರುವಾರ ಬೆಳಿಗ್ಗೆ ದಾಳಿಮಾಡಿರುವ ಲೋಕಾಯುಕ್ತ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Join Our Whatsapp Group

ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ನಿರ್ದೇಶಕ ಎನ್.ಕೆ. ತಿಪ್ಪೇಸ್ವಾಮಿ ಮತ್ತು ಮಂಡ್ಯ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಕೃಷ್ಣವೇಣಿ ದಾಳಿಗೊಳಗಾದ ಇತರ ಅಧಿಕಾರಿಗಳು.

ನಾಲ್ವರು ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಲೋಕಾಯುಕ್ತ ಪೊಲೀಸ್‌ ವಿಭಾಗದ ಬೆಂಗಳೂರು ನಗರ-1, ಚಿಕ್ಕಬಳ್ಳಾಪುರ ಮತ್ತು ಮಂಡ್ಯ ಜಿಲ್ಲಾ ಘಟಕಗಳಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ನ್ಯಾಯಾಲಯದಿಂದ ಶೋಧನಾ ವಾರೆಂಟ್‌ ಪಡೆದು ಆರೋಪಿ ಅಧಿಕಾರಿಗಳಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳ ಮನೆ, ಅವರ ಜತೆ ನಂಟು ಹೊಂದಿರುವ ವ್ಯಕ್ತಿಗಳ ಮನೆಗಳು, ಕಚೇರಿಗಳು ಮತ್ತು ಬೇನಾಮಿಗಳು ಎಂದು ಶಂಕಿಸಲಾಗಿರುವ ವ್ಯಕ್ತಿಗಳಿಗೆ ಸೇರಿದ ಸ್ಥಳಗಳಲ್ಲಿ ಶೋಧ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.