ಮನೆ ಅಪರಾಧ ಬೆಂಗಳೂರು ಸೇರಿದಂತೆ ರಾಜ್ಯದ 63 ಕಡೆ ಲೋಕಾಯುಕ್ತ ದಾಳಿ

ಬೆಂಗಳೂರು ಸೇರಿದಂತೆ ರಾಜ್ಯದ 63 ಕಡೆ ಲೋಕಾಯುಕ್ತ ದಾಳಿ

0

ಬೆಂಗಳೂರು: ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವೆಡೆ ಇಂದು(ಮಂಗಳವಾರ) ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆಸಿದೆ.

ರಾಜ್ಯದ 63 ಕಡೆ 13 ಅಧಿಕಾರಿಗಳ ಮನೆಗಳ ಮೇಲೆ ಸುಮಾರು 200ಕ್ಕೂ ಹೆಚ್ಚು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.

ಬೆಸ್ಕಾಂ ಜಾಗೃತ ದಳ ಅಧಿಕಾರಿ T.N.ಸುಧಾಕರ್ ರೆಡ್ಡಿ ಮನೆ, ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಚ್​​​.ಎಸ್​​.ಕೃಷ್ಣಮೂರ್ತಿ ಮನೆ ಹಾಗೂ ಕುಂಬಳಗೂಡು-ಕಣಿಮಿಣಿಕೆ ಬಳಿಯ ಹಾಲು ಉತ್ಪಾದಕರ ಸಹಕಾರ ಸಂಘದ ಅಧಿಕಾರಿ ಮನೆ ಮೇಲೂ ದಾಳಿ ಮಾಡಿದ್ದು, ದಾಖಲೆಗಳನ್ನ ಪರಿಶೀಲನೆ ನಡೆಸಿದ್ದಾರೆ.

ರಾಮನಗರ ಜಿಲ್ಲೆಯ ಕೃಷಿ ಜಂಟಿ ನಿರ್ದೇಶಕರಾಗಿರುವ ಮುನೇಗೌಡ ಎಂಬುವವರ ಚಿಕ್ಕಬಳ್ಳಾಪುರ ನಂದಿ ಕ್ರಾಸ್ ಬಳಿಯಿರುವ ಮನೆ ಮೇಲೆ ಜಿಲ್ಲಾ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳ್ಳಂ ಬೆಳಗ್ಗೆ ದಾಳಿ ನಡೆಸಿ ಮನೆ ಪರಿಶೀಲನೆ ನಡೆಸಿದ್ದಾರೆ.

ನಂದಿಕ್ರಾಸ್ ನಲ್ಲಿ ಭವ್ಯ ಬಂಗಲೆ ನಿರ್ಮಿಸಿರುವ ಮುನೇಗೌಡ ಕೋಟ್ಯಾಂತರ ರೂ. ‌ಅಕ್ರಮ ಆಸ್ತಿ ಹೊಂದಿರುವ ಆರೋಪ ಕೇಳಿ ಬಂದಿದೆ.

ಮುನೇಗೌಡ ಕಾರ್ಯನಿರ್ವಹಿಸುವ ರಾಮನಗರದ ಕಚೇರಿ, ಚಿಕ್ಕಬಳ್ಳಾಪುರ ಸಮೀಪ ಇರುವ ಮನೆ, ಬೆಂಗಳೂರಿನ ಕೆ.ಆರ್.ಪುರಂನಲ್ಲಿರುವ ಮನೆ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಪರಿಶೀಲನೆ, ಆದಾಯ ಮೀರಿ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ.

ಕಂಪ್ಲಿ ಪುರಸಭೆಯಲ್ಲಿ ನೈರ್ಮಲ್ಯ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿರುವ ಶರಣಪ್ಪ ಭೋವಿ ಅವರ ಗಂಗಾವತಿಯಲ್ಲಿರುವ ನಿವಾಸದ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಿಗ್ಗೆ 6.30 ಕ್ಕೆ ದಾಳಿ ನಡೆಸಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ದೂರು ಬಂದ ಕಾರಣ ದಾಳಿ ನಡೆಸಲಾಗುತ್ತಿದ್ದು, ಅಕ್ರಮ ಆಸ್ತಿಯ ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ನೈರ್ಮಲ್ಯ ಅಭಿಯಂತರ ಶರಣಪ್ಪ ಭೋವಿ ಅವರು ಗಂಗಾವತಿ ಹಾಗೂ ರಾಯಚೂರಿನ ನಗರಸಭೆಯಲ್ಲಿ ನೈರ್ಮಲ್ಯ ಅಭಿಯಂತರಾಗಿ ಕಾರ್ಯ ನಿರ್ವಹಿಸಿದ್ದು, ಸದ್ಯ ಗಂಗಾವತಿಯ ಟೀಚರ್ಸ್ ಕಾಲೋನಿಯಲ್ಲಿ ಸ್ವಂತ ಮೂರಂತಸ್ತಿನ ಮನೆ ಹೊಂದಿದ್ದು ಇದರಂತೆ ಕಂಪ್ಲಿ, ಗಂಗಾವತಿ ಸೇರಿದಂತೆ ರಾಜ್ಯದ ವಿವಿಧಡೆ ಅಪಾರ ಪ್ರಮಾಣದಲ್ಲಿ ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆ ಎಂಬ ದೂರು ಬಂದ ಹಿನ್ನೆಲೆ ಈ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಮೈಸೂರಿನಲ್ಲೂ ಲೋಕಾಯುಕ್ತ ದಾಳಿ

ಮೈಸೂರಿನಲ್ಲೂ ಲೋಕಾಯುಕ್ತ ಕಾರ್ಯಾಚರಣೆ ನಡೆಸಿದ್ದು, ನಂಜನಗೂಡು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಮಹದೇವಸ್ವಾಮಿ ಮೇಲೆ ದಾಳಿ ಮಾಡಿದ್ದಾರೆ. ಮೈಸೂರಿನ ಗುರುಕುಲ ಬಡಾವಣೆ ನಿವಾಸ ಸೇರಿ 12 ಕಡೆ ಪರಿಶೀಲನೆ ನಡೆಸಿದ್ದಾರೆ. ಕುಟುಂಬದ ಹೆಸರಿನಲ್ಲಿ ಎಂ ಎಸ್ ಗ್ರೂಪ್ ಕಂಪನಿ, ಆದಾಯಕ್ಕೂ ಮೀರಿ ಅಸ್ತಿ ಗಳಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಡಿಜಿಪಿ ಪ್ರಶಾಂತ್ ಕುಮಾರ್ ಹಾಗೂ ಐ ಜಿ ಪಿ, ಸುಬ್ರಮಣ್ಣೀಶ್ವರ ರಾವ್ ಎಸ್. ಪಿ ಸುರೇಶ್ ಬಾಬು ಮಾರ್ಗದರ್ಶ‌ನದಲ್ಲಿ ಡಿಎಸ್‌ಪಿ, ಕೃಷ್ಣಯ್ಯ ನೇತೃತ್ವದಲ್ಲಿ 12 ತಂಡಗಳಿಂದ ವಿವಿಧ ಕಡೆಗಳಲ್ಲಿ ಪರಿಶೀಲನೆ ನಡೆದಿದೆ.

ವಿಜಯೇಂದ್ರ ಪತ್ನಿಯ ಸಹೋದರನ ಮನೆ‌ ಮೇಲೆ‌ ಲೋಕಾಯುಕ್ತ ದಾಳಿ

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪತ್ನಿಯ ಸಹೋದರನ ಮನೆ‌ ಮೇಲೆ‌ ಲೋಕಾಯುಕ್ತ ದಾಳಿಯಾಗಿದೆ. ಡಾ ಪ್ರಭಲಿಂಗ ಮಾನಕರ್ ಯಾದಗಿರಿ ಡಿಎಚ್ ಓ ಆಗಿರುವ ಡಾ ಪ್ರಭುಲಿಂಗ್ ಮಾನಕರ್‌ ಅವರ ಕಲಬುರಗಿ ನಗರದ ಕರುಣೇಶ್ವರ ಕಾಲೋನಿಯಲ್ಲಿರುವ ನಿವಾಸದಲ್ಲಿ ಶೋಧ ನಡೆಸಿದ್ದಾರೆ.

ಲೋಕಾಯುಕ್ತ ಡಿ ವೈ ಎಸ್ ಪಿ ಸಲಿಂ ಪಾಷ ನಿರೀಕ್ಷಕ ಗಿರೀಶ್ ರೋಡಕರ್ ಸೇರಿದಂತೆ ಪೊಲೀಸ್ ಲೋಕಾಯುಕ್ತ ಪೊಲೀಸರು ದಾಳಿಯಲ್ಲಿ ಪಾಲ್ಗೊಂಡಿದ್ದಾರೆ.