ಬೆಂಗಳೂರು: ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ದಾಳಿ ಮುಂದುವರಿದಿದೆ. ರಾಜ್ಯಾದ್ಯಂತ ಇಂದು ಬುಧವಾರ ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳ ಮನೆ ಹಾಗೂ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಅಕ್ರಮ ಆಸ್ತಿ ಗಳಿಕೆ ಹಾಗೂ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ದೂರಿನ ಆಧಾರದ ಮೇಲೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಬಾಗಲಕೋಟೆ, ಕಲಬುರಗಿ, ರಾಮನಗರ, ವಿಜಯಪುರ, ಚಿಕ್ಕಮಗಳೂರು, ತುಮಕೂರು ಸೇರಿ ಹಲವೆಡೆ ದಾಳಿ ನಡೆಸಿದ್ದು, ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಬೆಂಗಳೂರಿನ ಹಲವೆಡೆ ಲೋಕಾಯುಕ್ತ ದಾಳಿಯಾಗಿದೆ. ಕೆ.ಆರ್.ಪುರಂ ತಹಶೀಲ್ದಾರ್ ಅಜಿತ್ ರೈ ಮನೆ ಸೇರಿದಂತೆ 10 ಕಡೆ ಲೋಕಾಯುಕ್ತ ದಾಳಿ ಮಾಡಿದ್ದು, ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆಯುತ್ತಿದೆ. ದಾಳಿ ವೇಳೆ ಅಜಿತ್ ಮನೆಯಲ್ಲಿ ಲಕ್ಷಾಂತರ ರೂಪಾಯಿ ನಗದು ಪತ್ತೆಯಾಗಿದೆ. ಅಜಿತ್ ಕೆಲ ದಿನಗಳ ಹಿಂದೆ ಕೆ.ಆರ್.ಪುರಂನಿಂದ ವರ್ಗಾವಣೆಯಾಗಿದ್ದರು. ಇವರ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಇನ್ನು, ತುಮಕೂರಿನ ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆೆಎಚ್ ರವಿಗೆ ಸೇರಿದ ತುಮಕೂರಿನ ಮನೆ ಹಾಗೂ ರಾಮನಗರದ ಫಾರಂ ಹೌಸ್ ಸೇರಿ 6 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜೊತೆಗೆ ಶಿರಾ ಪಿಆರ್‌ಇಡಿ ಎಇ ಕೆಬಿ ಪುಟ್ಟರಾಜು ಅವರ ತುಮಕೂರಿನ ಅಶೋಕ್ ನಗರದಲ್ಲಿರುವ ಮನೆ , ಯಲ್ಲಾಪುರದ ಕಮರ್ಷಿಯಲ್ ಕಾಂಪ್ಲೆಕ್ಸ್, ಶಿರಾ ಕಚೇರಿ, ಹಾಗೂ ಭದ್ರಾವತಿಯ ತಂದೆ ನಿವಾಸದಲ್ಲಿ ಪರಿಶೀಲನೆ ನಡೆಸಿದೆ. ಲೋಕಾಯುಕ್ತ ಎಸ್‌ಪಿ ಭಾಷಾ ಅವರ ನೇತೃತ್ವದಲ್ಲಿ ಡಿವೈಎಸ್ಪಿಗಳಾದ ಮಂಜುನಾಥ್, ಹರೀಶ್ ಮತ್ತು ಸಿಬ್ಬಂದಿ ವರ್ಗ ದಾಳಿ ನಡೆಸಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.
ಮುದ್ದೇಬಿಹಾಳ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆಯ ಸಹಾಯಕ ಎಇಇ ಜೆಪಿ ಶೆಟ್ಟಿ ಅವರ ಗ್ರಾಮ ಸಾಸನೂರಲ್ಲಿರುವ ನಿವಾಸದ ಮೇಲೆ ವಿಜಯಪುರ ಲೋಕಾಯುಕ್ತ ಎಸ್‌ಪಿ ಅನಿತಾ ಹದ್ದನ್ನವರ ನೇತೃತ್ವದಲ್ಲಿ ದಾಳಿ ನಡೆಸಿ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ನಾಲ್ಕು ಕಡೆಗಳಲ್ಲಿ 3 ಡಿವೈಎಸ್‌ಪಿ, 7 ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಲೋಕಾಯುಕ್ತ ದಾಳಿ ನಡೆದಿದೆ. ಇನ್ನು, ರಾಯಚೂರು ನಗರ ಅಭಿವೃದ್ಧಿ ಕೋಶದ ನಿರ್ದೇಶಕ ಶರಣಪ್ಪ ಮಡಿವಾಳರ್ ಮಾಲೀಕತ್ವದ ಕಲಬುರಗಿಯ ಫಾರ್ಮ್ ಹೌಸ್ ಹಾಗೂ ನಿವಾಸಗಳಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ
ಚಿಕ್ಕಮಗಳೂರಿನ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗಂಗಾಧರ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಏಕಕಾಲದಲ್ಲಿ ಜಯನಗರ ಬಡಾವಣೆಯಲ್ಲಿರುವ ಮನೆ, ರಾಮನಹಳ್ಳಿಯಲ್ಲಿರುವ ಪೆಟ್ರೋಲ್ ಬಂಕ್ ಹಾಗೂ ನಿರ್ಮಾಣ ಹಂತದ ರೆಸಾರ್ಟ್ ಮೇಲೆ ದಾಳಿ ನಡೆಸಲಾಗಿದೆ. ಜೊತೆಗೆ ಗಂಗಾಧರ್ ಕೆಲಸ ನಿರ್ವಹಿಸುತ್ತಿರುವ ನಿರ್ಮಿತಿ ಕೇಂದ್ರದ ಕಚೇರಿ ಸೇರಿ ಏಕಕಾಲದಲ್ಲಿ ಡಿವೈಎಸ್‌ಪಿ ತಿರುಮಲೇಶ್ ನೇತೃತ್ವದಲ್ಲಿ 50ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ನಡೆದಿದೆ.
ಬಾಗಲಕೋಟೆ ಜಿಲ್ಲೆಯ ಇಬ್ಬರು ಕೃಷಿ ಅಧಿಕಾರಿಗಳ ನಿವಾಸಗಳ ಮೇಲೂ ಲೋಕಾಯುಕ್ತ ದಾಳಿ ನಡೆದಿದೆ. ಬಾಗಲಕೋಟೆ ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ ಹಾಗೂ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೃಷ್ಣ ಶಿರೂರ ಅವರ ವಿದ್ಯಾಗಿರಿಯಲ್ಲಿರುವ ನಿವಾಸಗಳ ಮೇಲೆ ದಾಳಿ ನಡೆದಿದೆ. ಡಿವೈಎಸ್‌ಪಿಗಳಾದ ಶಂಕರ ರಾಗಿ, ಪುಷ್ಪಲತಾ ನೇತೃತ್ವದ ತಂಡಗಳಿಂದ ದಾಳಿ ನಡೆದಿದೆ.
ವಿಜಯಪುರ ಜಿಲ್ಲೆಯಲ್ಲಿ ಇಬ್ಬರು ಅಧಿಕಾರಿಗಳಿಗೆ ಸಂಬಂಧಿಸಿದಂತೆ ನಾಲ್ಕು ಕಡೆ ಲೋಕಾಯುಕ್ತ ದಾಳಿ ನಡೆದಿದ್ದು, ದಾಖಲೆ ಪರಿಶೀಲನೆ ನಡೆಸುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯ ಜೆಇ ಭೀಮನಗೌಡ ಬಿರಾದಾರ ಮನೆ ಹಾಗೂ ಅವರ ಸಂಬಂಧಿ ಶ್ರೀಕಾಂತ್ ಅಂಗಡಿ ನಿವಾಸದ ಮೇಲೆ ದಾಳಿ ನಡೆಸಲಾಗಿದೆ. ಪಿಡಬ್ಲ್ಯೂಡಿ ಇಲಾಖೆ ಬಸವನಬಾಗೇವಾಡಿ ವಿಭಾಗದಲ್ಲಿ ಪ್ರಭಾರಿ ಎಇಇ ಆಗಿ ಭೀಮನಗೌಡ ಬಿರಾದಾರ ಕಾರ್ಯನಿರ್ವಹಿಸುತ್ತಿದ್ದಾರೆ.