ಮನೆ ರಾಜ್ಯ ಲೋಕಾಯುಕ್ತ ತನಿಖಾ ಸಂಸ್ಥೆ ಸಿಎಂ, ಕಾಂಗ್ರೆಸ್ ಸರ್ಕಾರಕ್ಕೆ ಸಂಪೂರ್ಣ ಶರಣಾಗಿದೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ...

ಲೋಕಾಯುಕ್ತ ತನಿಖಾ ಸಂಸ್ಥೆ ಸಿಎಂ, ಕಾಂಗ್ರೆಸ್ ಸರ್ಕಾರಕ್ಕೆ ಸಂಪೂರ್ಣ ಶರಣಾಗಿದೆ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪ

0

ಹುಬ್ಬಳ್ಳಿ: “ರಾಜ್ಯದಲ್ಲಿ ಲೋಕಾಯುಕ್ತ ತನಿಖಾ ಸಂಸ್ಥೆ ಸಿಎಂ ಮತ್ತು ಕಾಂಗ್ರೆಸ್ ಸರ್ಕಾರಕ್ಕೆ ಸಂಪೂರ್ಣ ಶರಣಾಗಿದೆ” ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

Join Our Whatsapp Group

ಹುಬ್ಬಳ್ಳಿಯಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಲೋಕಾಯುಕ್ತ ಹಿಂದಿನಂತೆ ಖಡಕ್ ತನಿಖಾ ಸಂಸ್ಥೆಯಾಗಿ ಉಳಿದಿಲ್ಲ. ಬದಲಿಗೆ ಕಾಂಗ್ರೆಸ್ ಆಯೋಗವಾಗಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಮತ್ತು ಅವರ ಕುಟುಂಬಕ್ಕೆ ಅನುಕೂಲಕರ ರೀತಿಯಲ್ಲಿ ತನಿಖೆ ನಡೆಯುತ್ತಿದೆ. 30 ಲಕ್ಷ ರೂಪಾಯಿ ಎಣಿಸುವ ವಿಡಿಯೋ ಸಮೇತ ಸುದ್ದಿ ಮಾಧ್ಯಮವೊಂದರಲ್ಲಿ ಬಿತ್ತರವಾಗಿದೆ. ಇಷ್ಟೊಂದು ದೊಡ್ಡ ಪ್ರಕರಣ ನಡೆದರೂ ಇದುವರೆಗೆ ಯಾರೊಬ್ಬರನ್ನೂ ಬಂಧಿಸಲಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ರಾಜ್ಯ ಕಾಂಗ್ರೆಸ್​ನಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲು ತೀರ್ಮಾನ ಮಾಡಿದಂತಿದೆ. ಆದರೆ, ಮುಂದಿನ ಸಿಎಂ ಡಿ.ಕೆ. ಶಿವಕುಮಾರ್ ಆಗುತ್ತಾರೋ ಅಥವಾ ಮತ್ಯಾರಾಗುತ್ತಾರೆ ಎಂಬುದನ್ನು ಈ ಉಪ ಚುನಾವಣೆ ನಿರ್ಧರಿಸಲ್ಲ ಎಂದು ಹೇಳಿದರು.

ವಿಧಾನಸಭೆ ಉಪ ಚುನಾವಣೆಯಲ್ಲಿ ಆಡಳಿತ ಪಕ್ಷ ಹಣದ ಹೊಳೆಯನ್ನೇ ಹರಿಸುತ್ತಿದೆ. ಮೂರೂ ಕ್ಷೇತ್ರಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಚಿವರುಗಳನ್ನು ಇರಿಸಿದೆ. ಹಣದ ಹೊಳೆ ಹರಿಸುತ್ತಿದೆ. ಆದಾಗ್ಯೂ ‌ಎನ್​ಡಿಎ ಮೂರೂ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್​ನವರು ಬಹಳ ಭ್ರಮನಿರಸನಗೊಂಡು ತನ್ನ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಸರ್ಕಾರಿ ಮಷಿನರಿ ಉಪಯೋಗಿಸಿಕೊಂಡು ದುಡ್ಡು ಹಂಚುತ್ತಿದ್ದಾರೆ. ಆದರೆ, ಇದನ್ನೆಲ್ಲ ಮೀರಿ ಎನ್​ಡಿಎ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ಎಲ್ಲೆಡೆಯೂ ಕಾಂಗ್ರೆಸ್ ಮಂತ್ರಿ ಮಂಡಲವೇ ಬೀಡು ಬಿಟ್ಟಿದೆ. ಇದರಿಂದಲೇ ಗೊತ್ತಾಗುತ್ತದೆ ಸೋಲುವ ಭಯದಲ್ಲಿ ಏನೇನು ತಂತ್ರ ಹೆಣೆದಿದ್ದಾರೆ. ಹಾಗೂ ಅದೆಷ್ಟು ಹಣ ಚೆಲ್ಲುತ್ತಿದ್ದಾರೆ ಎಂದು ಜೋಶಿ ಹೇಳಿದರು.