ಮೈಸೂರು: ಸಿಎಂ ಹಾಗೂ ಪತ್ನಿ ಸೇರಿದಂತೆ ಇತರರ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್ ದಾಖಲು ಮಾಡಿ ತನಿಖೆ ಮುಂದುವರೆದಿದೆ. ವಿಚಾರಣೆಗೆ ಬರುವಂತೆ ಮೈಸೂರು ಲೋಕಾಯುಕ್ತ ಕರೆದ ಹಿನ್ನೆಲೆ ಬೆಳ್ಳಂಬೆಳಗ್ಗೆ 7.30ಕ್ಕೆ ದೂರುದಾರ ಸ್ನೇಹಮಯಿ ಕೃಷ್ಣ ಮೈಸೂರಿನ ಲೋಕಾಯುಕ್ತ ಕಚೇರಿಗೆ ಆಗಮಿಸಿದ್ದಾರೆ.
ಈ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, “ದಾಖಲೆಗಳಿಗೆ ಸಂಬಂಧಿಸಿದ ಯಾವುದೇ ನೋಟಿಸ್ ಬಂದಿಲ್ಲ. ಆದರೆ, ವಿಚಾರಣೆಯಲ್ಲಿ ಯಾವುದೇ ದಾಖಲಾತಿ ಕೋರಿದ್ದರೆ ನಾನು ಕೊಡಲು ಸಿದ್ಧ. ಮೊದಲು ದೂರು ನೀಡಿದ ಸಂದರ್ಭ ನೀಡಿದ ದಾಖಲಾತಿಗಳನ್ನು ಈಗಾಗಲೇ ಕೊಟ್ಟಿದ್ದೇನೆ. ಈಗ ಮತ್ತೆ ವಿಚಾರಣೆ ಸಂದರ್ಭದಲ್ಲಿ ದಾಖಲಾತಿಗಳನ್ನು ಕೇಳಿದರೆ ಕೊಡಲು ಸಿದ್ಧ. ಇದರ ಜೊತೆಗೆ ಮುಡಾದಲ್ಲಿ ನಡೆದ ಎಲ್ಲ ಅಕ್ರಮಗಳ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂಬುದು ನನ್ನ ಒತ್ತಾಯ” ಎಂದರು.
ಸಿಎಂ ಪತ್ನಿ 14 ನಿವೇಶನಗಳನ್ನು ಹಿಂತಿರುಗಿಸುವುದಾಗಿ ಮುಡಾಗೆ ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯಿಸಿ ಸ್ನೇಹಮಯಿ ಕೃಷ್ಣ, “ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಸುಳ್ಳು ಆರೋಪ ಮಾಡುವುದಿಲ್ಲ. ಈವರೆಗಿನ ಎಲ್ಲಾ ಪ್ರಕರಣಗಳಲ್ಲೂ ಜಯಗಳಿಸಿದ್ದೇನೆ. ಅದೇ ರೀತಿ ಇಲ್ಲೂ ಜಯ ಗಳಿಸುವ ವಿಶ್ವಾಸವಿದೆ. ನನ್ನ ಹೋರಾಟಕ್ಕೆ ಮೊದಲ ಜಯ ಸಿಕ್ಕಿದೆ” ಎಂದು ಹೇಳಿದರು.














