ಬೆಂಗಳೂರು: ಸ್ವಜನಪಕ್ಷಪಾತ ಹಾಗೂ ಭ್ರಷ್ಟಾಚಾರಗಳ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ದೂರುಗಳು ಬಂದ ಕಾರಣ ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ನೇತೃತ್ವದ ತಂಡ ಸೋಮವಾರ ಕಾನೂನು ಹಾಗೂ ಮಾಪನ ಇಲಾಖೆಯ ಪ್ರಧಾನ ಕಚೇರಿ ಸೇರಿದಂತೆ ವಿವಿಧ ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲನೆ ನಡೆಸಿತು.
ಉಪ ಲೋಕಾಯುಕ್ತರಾದ ಕೆ.ಎನ್. ಫಣೀಂದ್ರ ಹಾಗೂ ಬಿ. ವೀರಪ್ಪ ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳ ಒಳಗೊಂಡ 40 ಜನರ ತಂಡವು, ಆಲಿ ಆಸ್ಕರ್ ರಸ್ತೆಯಲ್ಲಿರುವ ಮಾಪನ ಇಲಾಖೆಯ ಪ್ರಧಾನ ಕಚೇರಿ ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿಯಲ್ಲಿ ಕಚೇರಿಗಳ ಮೇಲೆ ದಿಢೀರ್ ದಾಳಿ ನಡೆಸಿ ಪರಿಶೀಲನೆ ನಡೆಸಿತು.
ಕಚೇರಿಯಲ್ಲಿರುವ ಹಾಜರಾತಿ ಪುಸ್ತಕ ಸೇರಿದಂತೆ ವಿವಿಧ ರಿಜಿಸ್ಟರ್‌ಗಳನ್ನು ಕಂಡು ಅಸಮಾಧಾನ ವ್ಯಕ್ತಪಡಿಸಿದರು. ಹಾಜರಾತಿ ಪುಸ್ತಕದಲ್ಲಿ ಮಂಗಳವಾರ ಮತ್ತು ಬುಧವಾರದ ಸಹಿಯನ್ನು ಮೊದಲೇ ಮಾಡಿರುವುದನ್ನು ಕಂಡು ಕಿಡಿಕಾರಿದರು.
ಜಪ್ತಿ ಮಾಡಿದ ವಸ್ತುಗಳನ್ನು ಇಟ್ಟಿರುವ ಕೊಠಡಿಗಳಿಗೆ ಯಾಕೆ ಬೀಗ ಹಾಕಿದ್ದೀರಾ? ಕಚೇರಿ ಕೆಲಸದ ಮೇಲೆ ಹೊರಗೆ ಹೋಗಿದ್ದರೆ ಕಡತದಲ್ಲಿ ನಮೂದು ಮಾಡಬೇಕಿತ್ತು. ಬೀಗ ಹಾಕಿ ಹೊರಗೆ ಹೋಗುವ ಅಧಿಕಾರಿಗಳಿಗೆ ಅನುಮತಿ ನೀಡಿದ್ದು ಯಾರು?’ ಎಂದು ಅಧಿಕಾರಿಗಳಿಗೆ ಉಪಲೋಕಾಯುಕ್ತರು ತರಾಟೆಗೆ ತೆಗೆದುಕೊಂಡರು.
ಕಚೇರಿ ಬಯೋಮೆಟ್ರಿಕ್ ಹಾಗೂ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ವೇಳೆ ಅಧಿಕಾರಿ ಹಾಗೂ ಸಿಬ್ಬಂದಿ ಸರಿಯಾಗಿ ಕಚೇರಿಗೆ ಬಾರದಿರುವುದು ಕಂಡು ಬಂತು.
ಲೋಕಾಯುಕ್ತ ಬಿ.ಎಸ್. ಪಾಟೀಲ್ ಮಾತನಾಡಿ, ‘ಭ್ರಷ್ಟಾಚಾರ ಹಾಗೂ ಸ್ವಜನಪಾಕ್ಷಪಾತ ಧೋರಣೆಗಳ ಬಗ್ಗೆ ಹೆಚ್ಚಿನ ಸಂಖ್ಯೆಯಲ್ಲಿ ಲೋಕಾಯುಕ್ತಕ್ಕೆ ದೂರುಗಳು ಬಂದಿದ್ದವು. ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಪ್ರಾಥಮಿಕ ಮಾಹಿತಿ ಸಂಗ್ರಹಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿದ್ದೇವೆ’ ಎಂದು ಹೇಳಿದರು.
ಕಚೇರಿಯ ಮೂರು ಮಹಡಿ ಬಾಗಿಲುಗಳಿಗೆ ಬೀಗ ಹಾಕಲಾಗಿತ್ತು. ಸ್ಥಳದಲ್ಲಿ ಒಬ್ಬ ಅಧಿಕಾರಿಯೂ ಇರಲಿಲ್ಲ. ಕಾರಣವಿಲ್ಲದೆ ಅಧಿಕಾರಿಗಳು ಕಚೇರಿಯಿಂದ ಹೊರಹೋಗಿದ್ದಾರೆ. ಹಣ ವರ್ಗಾವಣೆ ಹಾಗೂ ಕಚೇರಿಯಲ್ಲಿರುವ ಹಣದ ಬಗ್ಗೆ ಸೂಕ್ತ ಸಮಜಾಯಿಷಿ ನೀಡಿಲ್ಲ. ಕೆಲವರು ಮೊಬೈಲ್‌ನಲ್ಲಿ ₹1 ಲಕ್ಷದವರೆಗೂ ಹಣ ವರ್ಗಾವಣೆ ಮಾಡಿದ್ದು, ವಿವರ ನೀಡುವಂತೆ ಕೇಳಿದ್ದೇನೆ. ಹಾಜರಾತಿ ಪುಸ್ತಕದಲ್ಲಿ ಮಂಗಳವಾರ ಮತ್ತು ಬುಧವಾರ ಸಹಿಯನ್ನು ಮೊದಲೇ ಹಾಕಿದ್ದಾರೆ. ಸಂಗ್ರಹಿಸಬೇಕಿದ್ದ ಹಣವನ್ನು ಮುಂಗಡವಾಗಿ ರಿಜಿಸ್ಟರ್ನಲ್ಲಿ ಬರೆದಿರುವುದು ಕಂಡು ಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.