ಚಿತ್ರದುರ್ಗ: ಮೃತಪಟ್ಟ ಹಸುವಿನ ಮರಣೋತ್ತರ ಪರೀಕ್ಷೆಯ ವರದಿ ನೀಡಲು ಲಂಚ ಪಡೆಯುತ್ತಿದ್ದ ಹೊಳಲ್ಕೆರೆ ತಾಲ್ಲೂಕು ಪಶುವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಪಶುವೈದ್ಯಾಧಿಕಾರಿ ಬಂಧಿಸಿದ ಲೋಕಾಯುಕ್ತ ಪೊಲೀಸರು, ಲಂಚದ ರೂಪದಲ್ಲಿ ಪಡೆಯುತ್ತಿದ್ದ 6 ಸಾವಿರವನ್ನು ಜಪ್ತಿ ಮಾಡಿದ್ದಾರೆ.
ಕಾಗಳಗೇರಿ ಗ್ರಾಮದ ರೈತ ಎಸ್. ಸ್ವಾಮಿ ಅವರ ಎಚ್ ಎಫ್ ತಳಿಯ ಹಸುವೊಂದು ಮೇ 19 ರಂದು ಮೃತಪಟ್ಟಿತ್ತು. ಹಸುವಿಗೆ ನ್ಯೂ ಇಂಡಿಯಾ ವಿಮಾ ಕಂಪನಿಯ ವಿಮೆ ಮಾಡಿಸಲಾಗಿತ್ತು. ವಿಮೆ ಪರಿಹಾರ ಪಡೆಯಲು ಹಸುವಿನ ಮರಣೋತ್ತರ ಪರೀಕ್ಷೆ ವರದಿಯ ಅಗತ್ಯ ಇದ್ದರಿಂದ ಸ್ವಾಮಿ ಅವರು ಚಿಕ್ಕಜಾಜೂರು ಪಶುವೈದ್ಯಕೀಯ ಆಸ್ಪತ್ರೆ ಸಂಪರ್ಕಿಸಿದ್ದರು.
ಮರಣೋತ್ತರ ಪರೀಕ್ಷೆ ನಡೆಸಿದ ಪಶುವೈದ್ಯಾಧಿಕಾರಿ ಡಾ.ತಿಪ್ಪೇಸ್ವಾಮಿ, 7 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 1 ಸಾವಿರ ಪಡೆದಿದ್ದ ಅವರು, ಪರೀಕ್ಷಾ ವರದಿ ಹಸ್ತಾಂತರಿಸುವ ಸಂದರ್ಭದಲ್ಲಿ 6 ಸಾವಿರ ಪಾವತಿಸುವಂತೆ ತಾಕೀತು ಮಾಡಿದ್ದರು. ಲಂಚ ನೀಡಲು ಇಷ್ಟ ಇರದ ಸ್ವಾಮಿ ಅವರು ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದರು.
ಮಂಗಳವಾರ ಪಶುವೈದ್ಯ ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ಡಾ.ತಿಪ್ಪೇಸ್ವಾಮಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಕೆ.ಲತಾ ತನಿಖೆಯನ್ನು ಮುಂದುವರಿಸಿದ್ದಾರೆ ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎನ್.ವಾಸುದೇವರಾಮ ತಿಳಿಸಿದ್ದಾರೆ.