ಮೈಸೂರು:ಮೈಸೂರು ಜಿಲ್ಲೆಯ ತಿ ನರಸೀಪುರ ತಾಲ್ಲೂಕಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೈಗೊಂಡಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿ ನರೇಗಾ ಕಾಮಗಾರಿಗಳನ್ನು ತಾಯಿ ಹೃದಯದಂತೆ ಕಾಣಿ ಎಂದು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಮುಖ್ಯ ಇಂಜಿನಿಯರ್ ಸಿ.ಕೆ.ಮಲ್ಲಪ್ಪ ಅವರು ತಿಳಿಸಿದರು.
ತಾಲ್ಲೂಕಿಗೆ ಬುಧವಾರ ಭೇಟಿ ನೀಡಿದ ಅವರು ಅಮೃತ ಸರೋವರ ಕೆರೆ ಅಭಿವೃದ್ಧಿ ಹಾಗೂ ನರೇಗಾ ಯೋಜನೆಯಡಿ ಪ್ರಗತಿ ಹಂತದಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿ ಕೆಲವು ಸಲಹೆ ಸೂಚನೆಗಳನ್ನು ನೀಡಿದರು.
ಮೊದಲಿಗೆ ಮಾದಾಪುರ ಗ್ರಾಮ ಪಂಚಾಯಿತಿಯ ಸಿದ್ದಪ್ಪಾಜಿ ದೇವಸ್ಥಾನದ ಹತ್ತಿರದ ಕಲ್ಯಾಣಿ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿ, ಕಲ್ಯಾಣಿಯ ಸುತ್ತಲು ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ವತಿಯಿಂದ ಗಿಡಗಳನ್ನು ನೆಟ್ಟು ಪೋಷಿಸುವಂತೆ ಸೂಚಿಸಿ ಕಲ್ಯಾಣಿ ಕಾಮಗಾರಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.
ತಲಕಾಡು ಗ್ರಾಮ ಪಂಚಾಯಿತಿಯಲ್ಲಿ ಪ್ರಗತಿ ಹಂತದಲ್ಲಿರುವ ರಾಜೀವ್ ಗಾಂಧಿ ಸೇವಾ ಕೇಂದ್ರ ಕಟ್ಟಡ ಕಾಮಗಾರಿಯನ್ನು ಪರಿಶೀಲಿಸಿ ತಾಂತ್ರಿಕ ಸಹಾಯಕ ಅಭಿಯಂತರರಿಗೆ ಕೆಲವು ತಾಂತ್ರಿಕ ಸಲಹೆಗಳನ್ನು ನೀಡಿದರು.
ಹೊಳೆಸಾಲು ಗ್ರಾಮ ಪಂಚಾಯಿತಿಯ ಮೇದನಿ ಗ್ರಾಮದ ಜವನಕಟ್ಟೆ ಅಮೃತ ಸರೋವರ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಪರಿಶೀಲಿಸಿ ಏರಿ ನಿರ್ಮಾಣ, ಕೆರೆಯ ಸುತ್ತಳತೆ, ನೀರಿನ ಒಳ ಹರಿವು ಮತ್ತು ಹೊರ ಹರಿವಿನ ಕುರಿತು ಸಲಹೆಯನ್ನು ನೀಡಿ ಒಟ್ಟಾರೆ ನರೇಗಾ ಯೋಜನೆಯ ಸದ್ಬಳಕೆ ಮಾಡಿಕೊಂಡು ಉತ್ತಮವಾದ ಕಾಮಗಾರಿಗಳನ್ನು ನಿರ್ಮಿಸುವಂತೆ ಸೂಚಿಸಿದರು.
ಈ ವೇಳೆ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಸಿ. ಕೃಷ್ಣ, ಸಹಾಯಕ ನಿರ್ದೇಶಕರು (ಗ್ರಾ. ಉ) ಶಶಿಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರರು, ತಾಂತ್ರಿಕ ಸಹಾಯಕ ಅಭಿಯಂತರರು, ಐ ಇ ಸಿ ಸಂಯೋಜಕರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಬಿ ಎಫ್ ಟಿ, ಅಧ್ಯಕ್ಷರು ,ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.