ಯಲ್ಲಾಪುರ: ಯಲ್ಲಾಪುರ ಅರಬೈಲ್ ಘಟ್ಟದಲ್ಲಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಬಾಗಲಕೋಟೆಯಿಂದ ಕೇರಳಕ್ಕೆ ಸಕ್ಕರೆ ತುಂಬಿಕೊಂಡು ಹೋಗುತ್ತಿದ್ದ ಲಾರಿಯ ಬ್ರೇಕ್ ಲೈನರ್ ಹೀಟ್ ಆಗಿ, ಸಂಭವಿಸಿದ ಅಗ್ನಿ ಅವಘಡದಲ್ಲಿ ಲಾರಿಯೊಂದು ಧಗಧಗನೆ ಹೊತ್ತಿ ಉರಿದು ಹೋದ ಘಟನೆ ಮಂಗಳವಾರ(ಡಿ.24) ಬೆಳಗಿನ ಜಾವ ನಡೆದಿದೆ.
ಲಾರಿಗೆ ಬೆಂಕಿ ಹೊತ್ತಿಕೊಂಡಿರುವುದನ್ನು ಗಮನಿಸಿದ ಚಾಲಕ ವರ್ಗೀಸ್ ಜೊಸೆಪ್ ಲಾರಿಯನ್ನು ರಸ್ತೆ ಪಕ್ಕಕ್ಕೆ ನಿಲ್ಲಿಸಿ ಕೆಳಗೆ ಇಳಿದಿದ್ದಾನೆ. ಕ್ಲೀನರ್ ಕೂಡಾ ಲಾರಿಯಿಂದ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಲಾರಿಯ ಚಕ್ರಕ್ಕೆ ಬೆಂಕಿ ಹತ್ತಿಕೊಂಡು ಲಾರಿಯಲ್ಲಿದ್ದ ಟನ್ ಗಟ್ಟಲೆ ಸಕ್ಕರೆ ಸಂಪೂರ್ಣಸುಟ್ಟು ಹೋಗಿದೆ.
ಲಾರಿ ಹುಬ್ಬಳ್ಳಿಯ ಮೊಹಮ್ಮದ್ ರಫಿಕ್ ರವರಿಗೆ ಸೇರಿದ್ದೆಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸಿದ್ದು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.
Saval TV on YouTube