ಮನೆ ಅಪರಾಧ ಕಲಬುರಗಿಯಲ್ಲಿ ಲವ್‌ ಅಫೇರ್‌ ಕಥೆ, ಕೊಲೆಯಲ್ಲಿ ಅಂತ್ಯ: ನಾಲ್ಕು ತಿಂಗಳ ತನಿಖೆ ಬಳಿಕ ಕೊಲೆಕೃತ್ಯ ಭೇದಿಸಿದ...

ಕಲಬುರಗಿಯಲ್ಲಿ ಲವ್‌ ಅಫೇರ್‌ ಕಥೆ, ಕೊಲೆಯಲ್ಲಿ ಅಂತ್ಯ: ನಾಲ್ಕು ತಿಂಗಳ ತನಿಖೆ ಬಳಿಕ ಕೊಲೆಕೃತ್ಯ ಭೇದಿಸಿದ ಪೊಲೀಸರು

0

ಕಲಬುರಗಿ: ಒಬ್ಬ ಯುವಕನ ಪ್ರೇಮ ನಂಬಿಕೆಯನ್ನು ದುರ್ಬಳಕೆ ಮಾಡಿಕೊಂಡು, ಆತನನ್ನು ಸಜೀವವಾಗಿ ಬಲಿತೆಗೆದ ಪ್ರಕರಣವೊಂದು ಕಲಬುರಗಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಆಳಂದ ತಾಲೂಕಿನ ಆನೂರು ಗ್ರಾಮದಲ್ಲಿ ನಡೆದ ಈ ಘಟನೆ ಜವಾಬ್ದಾರಿ, ನಂಬಿಕೆ ಮತ್ತು ಭದ್ರತೆಯ ಕುರಿತು ಹಲವು ಪ್ರಶ್ನೆಗಳನ್ನು ಎಬ್ಬಿಸಿದೆ.

ಖಜೂರಿ ಗ್ರಾಮದ ಯುವಕ ರಾಹುಲ್, ಆನೂರು ಗ್ರಾಮದ ಭಾಗ್ಯವಂತಿ ಎಂಬ ಯುವತಿಯೊಂದಿಗೆ ಪ್ರೇಮ ಸಂಬಂಧದಲ್ಲಿ ಇತ್ತು. ಜನವರಿ 30ರಂದು ರಾತ್ರಿ ಭಾಗ್ಯವಂತಿ ರಾಹುಲ್‌ಗೆ ಕರೆ ಮಾಡಿ, “ಮನೆಯಲ್ಲಿ ಯಾರಿಲ್ಲ, ಬಾ” ಎಂದು ಕರೆದಿದ್ದಳು. ಲವ್‌ನ ಮೋಹಕ್ಕೆ ಒಳಗಾದ ರಾಹುಲ್ ಊಟವನ್ನೂ ಅರ್ಧಕ್ಕೆ ಬಿಟ್ಟು ತಕ್ಷಣ ಆನೂರು ಗ್ರಾಮಕ್ಕೆ ತೆರಳಿದ. ಆದರೆ ಈ ಭೇಟಿ ಅವನ ಜೀವದ ಕೊನೆಯದಾಗಿ ಪರಿಣಮಿಸಿತು.

ಭಾಗ್ಯವಂತಿಯ ಅಣ್ಣ ಪೃಥ್ವಿರಾಜ್ ಆ ಸಂದರ್ಭದಲ್ಲಿ ಅಚಾನಕ್ ಆಗಮಿಸಿ ಇಬ್ಬರ ಒಡನಾಟ ನೋಡಿ ಕೋಪಗೊಂಡು, ತಂಗಿಗೆ ತರಾಟೆಗೆ ತೆಗೆದುಕೊಂಡು ರಾಹುಲ್ ಮೇಲೆ ಹಲ್ಲೆ ನಡೆಸಿ ಕೊಲೆಗೈದ. ಕೊಲೆ ನಂತರ ಯಾರಿಗೂ ಸುಳಿವಾಗದಂತೆ, ಸ್ನೇಹಿತನ ಬೈಕ್‌ನಲ್ಲಿ ಶವವನ್ನು ಸಾಗಿಸಿ, ಮಹಾರಾಷ್ಟ್ರದ ಸಾಂಗ್ವಿ ಬಳಿಯ ಬೆಣ್ಣೆತೋರಾ ಹಿನ್ನಿರಿನಲ್ಲಿ ಕಲ್ಲು ಕಟ್ಟಿ ಎಸೆದ.

ಪಾಪ ಮುಚ್ಚಲು, ಪೃಥ್ವಿರಾಜ್ ತನ್ನ ತಾಯಿ ಸೀತಾಬಾಯಿ ಮತ್ತು ಸಹೋದರಿ ಭಾಗ್ಯವಂತಿಯ ಜತೆ ತೀರ್ಥಯಾತ್ರೆಗಾಗಿ ಪ್ರಯಾಗ್ ರಾಜ್, ಕಾಶಿ, ಅಯೋಧ್ಯೆ, ಪಂಢರಾಪುರ ಸೇರಿ ಹಲವು ಪುಣ್ಯಕ್ಷೇತ್ರಗಳಿಗೆ ತೆರಳಿ, ಮೊಬೈಲ್ ಬಳಕೆ ನಿಲ್ಲಿಸಿ ತಲೆಮರೆಸಿಕೊಂಡಿದ್ದ.

ಆಳಂದ ಪೊಲೀಸರಿಗೆ ನೀಡಿದ ನಾಪತ್ತೆ ದೂರಿನಂತೆ ಮೊಬೈಲ್ ಲೊಕೇಶನ್ ಆಧಾರದಲ್ಲಿ ತನಿಖೆ ಆರಂಭಿಸಿ, ಪೃಥ್ವಿರಾಜ್ ಮತ್ತು ಭಾಗ್ಯವಂತಿಯ ಪ್ರೇಮ ಸಂಬಂಧದ ಮಾಹಿತಿ ಲಭಿಸಿದೆ. ಶಂಕೆ ಆಧಾರದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಕೊನೆಗೂ ಪೃಥ್ವಿರಾಜ್ ಸೇರಿದಂತೆ 10 ಮಂದಿಯನ್ನು ಬಂಧನ ಮಾಡಲಾಗಿದೆ ಎಂದು ಕಲಬುರಗಿ ಎಸ್‌ಪಿ ಅಡ್ಡೂರು ಶ್ರೀನಿವಾಸುಲು ತಿಳಿಸಿದ್ದಾರೆ.

ಕೊಲೆ ಮಾಡಿ ಪಾಪ ತೊಳೆದುಕೊಳ್ಳಲು ಪುಣ್ಯಕ್ಷೇತ್ರಗಳಿಗೆ ಆರೋಪಿಗಳು ಹೋಗಿದ್ದರೂ ಸಹ ಮಾಡಿದ ಪಾಪ ಅವರ ಕೈಬಿಡಲೇ ಇಲ್ಲ. ಜಾಮೀನಿಗಾಗಿ ವಕೀಲರನ್ನು ಸಂಪರ್ಕಿಸಲು ಊರಿಗೆ ಬಂದ ಸಂದರ್ಭದಲ್ಲಿ ಪೊಲೀಸರು ಮೂವರನ್ನೂ ಬಂಧಿಸಿದರು. ಕೊನೆಗೂ ಪ್ರೀತಿಯ ಹೆಸರಿನಲ್ಲಿ ನಡೆದ ಕೊಲೆಕೃತ್ಯ ಭೇದಿಸಿದ್ದು, ಆರೋಪಿಗಳು ಕಾನೂನಿನ ಅಂಗಳದಲ್ಲಿದ್ದಾರೆ.