ಮಂಗಳೂರು : ಮತ್ತೊಂದು ಲವ್ ಜಿಹಾದ್ ಆರೋಪ ಪ್ರಕರಣ ಮಂಗಳೂರಿನಲ್ಲಿ ಸಂಚಲನ ಸೃಷ್ಟಿಸಿದೆ. ಕ್ರಿಮಿನಾಲಜಿ ವ್ಯಾಸಾಂಗ ಮಾಡುತ್ತಿದ್ದ ಕೇರಳ ಕಾಸರಗೋಮೂಲದ ಯುವತಿ, ಮಂಗಳೂರಿನ ಸುರತ್ಕಲ್‌ನ ಅನ್ಯಕೋಮಿನ ಯುವಕನೊಂದಿಗೆ ಪರಾರಿಯಾಗಿರುವ ಆರೋಪ ಕೇಳಿಬಂದಿದೆ. ಮಗಳನ್ನು ಮರಳಿ ಮನೆಗೆ ಕಳುಹಿಸುವಂತೆ ಹೆತ್ತವರು ಕಣ್ಣೀರು ಹಾಕುತ್ತಿದ್ದು, ಈ ಪ್ರಕರಣ ಕರಾವಳಿಯಲ್ಲಿ ಮತ್ತೆ ಸಂಚಲನ ಮೂಡಿಸಿದೆ.
ಮಂಗಳೂರಿನ ಮುಕ್ಕದಲ್ಲಿ ಕ್ರಿಮಿನಾಲಜಿ ಓದುತ್ತಿದ್ದ ಯುವತಿ, ಸುರತ್ಕಲ್‌ನ ಜುವೆಲರಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಮೊಹಮ್ಮದ್ ಮಿದ್ಲಾಜ್ ಜೊತೆ ಪರಾರಿಯಾಗಿದ್ದಾಳೆ ಎನ್ನಲಾಗಿದೆ. ಸದ್ಯ ಇಬ್ಬರೂ ಕೇರಳದ ವಯನಾಡಿನಲ್ಲಿ ಇರುವುದಾಗಿ ತಿಳಿದುಬಂದಿದೆ. ಕಳೆದ ಶನಿವಾರ ಮಗಳನ್ನು ನೋಡಿದ್ದ ಹೆತ್ತವರಿಗೆ ಬಳಿಕ ಮಗಳ ಎಲ್ಲಿದ್ದಾಳೆ ಎಂಬ ಸುಳಿವು ಇಲ್ಲ. ಇದೀಗ ಮಗಳಿಗಾಗಿ ಹೆತ್ತವರು ಸುರತ್ಕಲ್‌ನಲ್ಲಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಮಗಳನ್ನು ಹುಡುಕಿಕೊಂಡು ವೈನಾಡಿಗೆ ತೆರಳಿದ ಹೆತ್ತವರಾದ ವಿಶ್ವನಾಥ್ ಹಾಗೂ ಲತಾ, ಮಗಳನ್ನು ತಮ್ಮ ಜೊತೆ ಬರಲು ಮನವಿ ಮಾಡಿದ್ದಾರೆ. ಆದರೆ, ಯುವತಿ ಹೆತ್ತವರ ಜೊತೆ ಬರಲು ನಿರಾಕರಿಸಿದ್ದಾಳೆ ಎನ್ನಲಾಗಿದೆ. ವಯನಾಡಿನ ಪೊಲೀಸರು ಮಿದ್ಲಾಜ್‌ಗೆ ಬೆಂಬಲ ನೀಡಿದ್ದಾರೆ ಎಂದು ಹೆತ್ತವರು ಆರೋಪಿಸಿದ್ದು, ವಯನಾಡ್ ಪೊಲೀಸ್ ಠಾಣೆಯಲ್ಲಿ ಕೇವಲ ಐದು ನಿಮಿಷ ಮಾತನಾಡಲು ಬಿಟ್ಟಿದ್ದಾರೆ. ಇದರ ಹಿಂದೆ ಮುಸ್ಲಿಂ ಸಂಘಟನೆಗಳ ಷಡ್ಯಂತ್ರ ಇದೆ ಎಂದು ತಂದೆ ಆರೋಪಿಸಿದ್ದಾರೆ.
ಮಗಳನ್ನು ಚಿಕ್ಕಂದಿನಿಂದಲೇ ಪ್ರೀತಿಯಿಂದ ಸಾಕಿದ್ದ ಪೋಷಕರು, ಅವಳು ಮುಕ್ಕದಲ್ಲಿ ಓದಿ ಬೆಂಗಳೂರಿನ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಲವ್ ಇದ್ಯಾ ಅಂತ ಕೇಳಿದಾಗ ಇಲ್ಲ ಅಂದಿದ್ದಳು. ಈಗ ಫೋನ್ ಸ್ವಿಚ್ ಆಫ್ ಆಗಿದೆ. ನಮ್ಮ ಮಗಳು ಇಂತಹ ಕೆಲ್ಸ ಮಾಡುವವಳಲ್ಲ. ಆಕೆಯ ಮನ ಪರಿವರ್ತನೆ ಮಾಡಿದ್ದಾರೆ. ಮಗಳಿಗೆ ಇನ್ನೂ ಮದುವೆಯಾಗಿಲ್ಲ. ‘ದಯವಿಟ್ಟು ವಾಪಸ್ ಬಾ ಮಗಳೇ… ನಮ್ಮ ಮಗಳು ನಮಗೆ ಬೇಕು’ ಎಂದು ಹೆತ್ತವರು ಕಣ್ಣೀರು ಹಾಕಿದ್ದಾರೆ.














