ಹುಬ್ಬಳ್ಳಿ: ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ನಿರಾತಂಕವಾಗಿ ನಡೆಯುತ್ತಿವೆ. ಕೇರಳ ಮಾದರಿ ನಮ್ಮ ರಾಜ್ಯದಲ್ಲಿ ಲವ್ ಜಿಹಾದ್ ಶುರುವಾಗಿದೆ. ಹಿಂದೂ ಹೆಣ್ಣುಮಕ್ಕಳ ಕುಟುಂಬದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಆರೋಪಿ ಸದ್ದಾಂ ಹುಸೇನ್ ಕಬ್ಬಿಣದ ರಾಡ್ ತೆಗೆದುಕೊಂಡು ಪೊಲೀಸರ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದನು. ಇದು ರಾಜ್ಯ ಸರ್ಕಾರ ತಲೆ ತಗ್ಗಿಸುವ ಕೆಲಸ ಎಂದು ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ನವರಿಗೆ ಮೊದಲೇ ಪೆನ್ ಡ್ರೈವ್ ಸಿಕ್ಕಿದ್ದು, ಇದೀಗ ಪೆನ್ಡ್ರೈವ್ ಹಿಂದೆ ಬಿದ್ದಿದ್ದಾರೆ. ನಾವು ಯಾರೂ ಪ್ರಜ್ವಲ್ ರೇವಣ್ಣ ಪ್ರಕರಣ ಬೆಂಬಲಿಸಿಲ್ಲ. ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು. ಪೈನ್ ಡ್ರೈವ್ ಬಗ್ಗೆ ವಿಜಯೇಂದ್ರಗೆ ಮೊದಲೇ ಪತ್ರ ಬರೆದಿದ್ದರು ಅಂತಿದ್ದಾರೆ. ನನಗಂತೂ ಈ ಕ್ಷಣದವರೆಗೂ ನನಗೆ ಯಾವುದೇ ಪತ್ರ ಬಂದಿಲ್ಲ. ಬಹಳ ಜವಾಬ್ದಾರಿಯಿಂದ ಈ ಮಾತು ಹೇಳುತ್ತಿದ್ದೇನೆ. ರಾಜ್ಯ ಸರ್ಕಾರಕ್ಕೆ ಗ್ಯಾರಂಟಿ ಬಗ್ಗೆ ವಿಶ್ವಾಸ ಹೋಗಿದೆ. ಹೀಗಾಗಿ ಪೆನ್ಡ್ರೈವ್ ಹಿಂದೆ ಬಿದ್ದಿದೆ ಎಂದು ವಾಗ್ದಾಳಿ ಮಾಡಿದರು.
ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ನೀರೀಕ್ಷೆಗೂ ಮೀರಿ ನಮ್ಮ ಪಕ್ಷಕ್ಕೆ ಬೆಂಬಲ ವ್ಯಕ್ತವಾಗಿದೆ. ಮೋದಿ ಮತ್ತೆ ಪ್ರಧಾನಿಯಾಗಬೇಕೆಂದು ಜನರ ಬಯಕೆ ಇದೆ. ಬಿಜೆಪಿಯಿಂದಷ್ಟೇ ದೇಶಕ್ಕೆ ಒಳಿತು ಎಂಬ ಭಾವನೆ ಇದೆ. ಬಿಜೆಪಿ ಎಲ್ಲ ಕಾರ್ಯಕರ್ತರು ಬಹಳ ಶ್ರಮ ಹಾಕುತ್ತಿದ್ದಾರೆ. ಎರಡನೇ ಹಂತದ ಎಲ್ಲ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.