ಮನೆ ಕಾನೂನು ಪ್ರಕರಣಗಳ ಬಾಕಿ, ವಿಲೇವಾರಿ ಪ್ರಮಾಣ ಕಡಿಮೆ ಇದೆ ಎಂಬುದು ನ್ಯಾಯಾಧೀಶರನ್ನು ವಜಾಗೊಳಿಸಲು ಕಾರಣವಾಗದು: ಸುಪ್ರೀಂ ಕೋರ್ಟ್

ಪ್ರಕರಣಗಳ ಬಾಕಿ, ವಿಲೇವಾರಿ ಪ್ರಮಾಣ ಕಡಿಮೆ ಇದೆ ಎಂಬುದು ನ್ಯಾಯಾಧೀಶರನ್ನು ವಜಾಗೊಳಿಸಲು ಕಾರಣವಾಗದು: ಸುಪ್ರೀಂ ಕೋರ್ಟ್

0

ಕಾರ್ಯಕ್ಷಮತೆಯ ಕೊರತೆ ಕಾರಣಕ್ಕೆ ನ್ಯಾಯಾಧೀಶರನ್ನು ವಜಾಗೊಳಿಸಬೇಕು ಎಂದು ನಿರ್ಣಯಿಸುವ ಮುನ್ನ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾದ ಪರಿಣಾಮ, ಪ್ರಕರಣ ಹಂಚಿಕೆ ವೈಫಲ್ಯ ಮತ್ತು ಪೊಲೀಸ್ ಠಾಣೆ ಮೇಲಿನ ಅಧಿಕಾರ ವ್ಯಾಪ್ತಿಯ ಕೊರತೆಯಂತಹ ವ್ಯವಸ್ಥೆಯ ಸಮಸ್ಯೆಗಳನ್ನೂ ಗಣನೆಗೆ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ.

Join Our Whatsapp Group

ಹೀಗಾಗಿ ಹಲವು ಬಾಹ್ಯ ಅಂಶಗಳು ನ್ಯಾಯಾಂಗ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರುವಾಗ, ಪ್ರಕರಣಗಳ ಬಾಕಿ, ವಿಲೇವಾರಿ ಪ್ರಮಾಣ ಕಡಿಮೆ ಇದೆ ಎಂದ ಮಾತ್ರಕ್ಕೆ ನ್ಯಾಯಾಧೀಶರನ್ನು ವಜಾಗೊಳಿಸಲು ಕಾರಣವಾಗದು ಎಂದು ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಎನ್ ಕೋಟಿಶ್ವರ್ ಸಿಂಗ್ ಅವರಿದ್ದ ಪೀಠ ವಿವರಿಸಿದೆ.

ಮಧ್ಯಪ್ರದೇಶದ ಇಬ್ಬರು ಮಹಿಳಾ ನ್ಯಾಯಾಂಗ ಅಧಿಕಾರಿಗಳ ವಜಾಗೊಳಿಸಿದ ಆದೇಶ ರದ್ದುಗೊಳಿಸುವಾಗ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ನ್ಯಾಯಾಧೀಶೆಯರಿಗೆ ಪ್ರತಿಕ್ರಿಯೆ ಸಲ್ಲಿಸಲು ಅವಕಾಶ ನೀಡದೆ ಅವರನ್ನು ವಜಾಗೊಳಿಸಲಾಗಿದೆ ಎಂಬುದನ್ನು ಗಮನಿಸಿದ ಸುಪ್ರೀಂ ಕೋರ್ಟ್‌ ನ್ಯಾಯಾಲಯಗಳಲ್ಲಿ ಹುದ್ದೆಗಳು ಖಾಲಿ ಇರುವುದು, ಅತಿಯಾಗಿ ಪ್ರಕರಣದಲ್ಲಿ ಮಧ್ಯಪ್ರವೇಶ ಕೋರಿ ಸಲ್ಲಿಸಲಾಗುವ ಅರ್ಜಿಗಳು, ಸಾಕ್ಷಿಗಳ ಗೈರು ಹಾಗೂ ಆಡಳಿತಾತ್ಮಕ ಅಸಮರ್ಥತೆಯಂತಹ ವ್ಯವಸ್ಥೆಯ ಪ್ರಮುಖ ಸಮಸ್ಯೆಗಳನ್ನು ವಜಾ ಆದೇಶ ನಿರ್ಲಕ್ಷಿಸಿದೆ ಎಂದು ನುಡಿಯಿತು. ಇಂತಹ ಬಾಹ್ಯ ಅಂಶಗಳು ನಿಗದಿತ ಗುರಿ ತಲುಪುವ ನ್ಯಾಯಾಧೀಶೆಯರ ಸಾಮರ್ಥ್ಯಕ್ಕೆ ಗಮನಾರ್ಹ ಅಡ್ಡಿಯಾಗಿವೆ ಎಂದು ಅದು ಹೇಳಿತು.

ವಿಶಾಲ ಸಂದರ್ಭಗಳನ್ನು ಪರಿಗಣಿಸುವಲ್ಲಿನ ವೈಫಲ್ಯ ಅನ್ಯಾಯದ ಮೌಲ್ಯಮಾಪನ ಪ್ರಕ್ರಿಯೆಗೆ ಸಮನಾಗಿರುತ್ತದೆ ಎಂದು ಅದು ತಿಳಿಸಿತು.

ಮಹಿಳಾ ನ್ಯಾಯಾಧೀಶರು ಎದುರಿಸುತ್ತಿರುವ ಸವಾಲುಗಳನ್ನು, ವಿಶೇಷವಾಗಿ ಗರ್ಭಧಾರಣೆ, ಆರೋಗ್ಯ ಪರಿಸ್ಥಿತಿಗಳು ಮತ್ತು ವ್ಯವಸ್ಥಿತ ಪೂರ್ವಾಗ್ರಹಗಳನ್ನು ನ್ಯಾಯಾಂಗ ಸಂಸ್ಥೆಗಳು ಗಣನೆಗೆ ತೆಗೆದುಕೊಳ್ಳುವ ಅಗತ್ಯವನ್ನು ತೀರ್ಪು ಒತ್ತಿ ಹೇಳಿದೆ.

ಮಹಿಳಾ ನ್ಯಾಯಾಂಗ ಅಧಿಕಾರಿಗಳ ಸಂಖ್ಯೆ  ಹೆಚ್ಚಿಸಿರುವುದು ಲಿಂಗ ಏಕರೂಪತೆಯನ್ನು ತೊಡೆದುಹಾಕಲು ಮತ್ತು ಹೆಚ್ಚು ಒಳಗೊಳ್ಳುವಿಕೆಯ ಕಾನೂನು ವ್ಯವಸ್ಥೆ ಬೆಳೆಸಲು ಕೊಡುಗೆ ನೀಡುತ್ತದೆ ಎಂದು ಕೂಡ ನ್ಯಾಯಾಲಯ ನುಡಿಯಿತು.

ಅಂತೆಯೇ ವಜಾ ಆದೇಶ ರದ್ದುಗೊಳಿಸಿದ ಸುಪ್ರೀಂ ಕೋರ್ಟ್, 15 ದಿನಗಳಲ್ಲಿ ಇಬ್ಬರೂ ಅಧಿಕಾರಿಗಳನ್ನು ತಕ್ಷಣವೇ ಮರುನೇಮಕ ಮಾಡಿಕೊಳ್ಳುವಂತೆಯೂ, ಪಿಂಚಣಿ ಮತ್ತಿತರ ಸೌಲಭ್ಯಗಳು ಮೊಟಕಾಗದಂತೆ ನೋಡಿಕೊಳ್ಳುವಂತೆಯೂ ಆದೇಶಿಸಿತು. 

ಅಧಿಕಾರಿಗಳ ವಜಾಗೊಳಿಸುವಿಕೆಯಿಂದ ತಡೆ ಹಿಡಿಯಲಾಗಿದ್ದ ಅವರ ವಿರುದ್ಧದ ಯಾವುದೇ ಬಾಕಿ ಇರುವ ದೂರುಗಳನ್ನು ಈಗ ಕಾನೂನಿನ ಪ್ರಕಾರ ವಿಚಾರಣೆ ನಡೆಸಬೇಕೆಂದು ನ್ಯಾಯಾಲಯ ಇದೇ ವೇಳೆ ನಿರ್ದೇಶಿಸಿದೆ.