ಮನೆ ರಾಜ್ಯ ಎಲ್​ಪಿಜಿ ಪೂರೈಕೆ ವ್ಯತ್ಯಯ – ಮೈಸೂರಲ್ಲೂ ಹೋಟೆಲ್ ಬಂದ್ ಆತಂಕ..!

ಎಲ್​ಪಿಜಿ ಪೂರೈಕೆ ವ್ಯತ್ಯಯ – ಮೈಸೂರಲ್ಲೂ ಹೋಟೆಲ್ ಬಂದ್ ಆತಂಕ..!

0

ಮೈಸೂರು : ಇರಾನ್-ಇಸ್ರೇಲ್ ಯುದ್ಧ ಜಾಗತಿಕವಾಗಿ ಸಮಸ್ಯೆಯನ್ನು ತಂದೊಡ್ಡಿದ್ದು, ಅದರ ಬಿಸಿ ಕರ್ನಾಟಕದ ಹೋಟೆಲ್ ಉದ್ಯಮಕ್ಕೂ ತಟ್ಟಿದೆ. ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನ ಹೋಟೆಲ್ ಮಾಲೀಕರು ವಾಣಿಜ್ಯ ಗ್ಯಾಸ್ ಸಿಲಿಂಡರ್‌ಗಳ ಕೊರತೆ ಮತ್ತು ಬೆಲೆ ಏರಿಕೆಯಿಂದ ಕಂಗಾಲಾಗಿದ್ದಾರೆ. ಕಳೆದ ಒಂದು ವಾರದಿಂದ ಗ್ಯಾಸ್ ಸಿಲಿಂಡರ್‌ಗಳ ಪೂರೈಕೆಯಲ್ಲಿ ತೀವ್ರ ವ್ಯತ್ಯಯ ಉಂಟಾಗಿದೆ.

ಹಿಂದೆ ಸುಲಭವಾಗಿ ಸಿಗುತ್ತಿದ್ದ ಸಿಲಿಂಡರ್‌ಗಳು ಈಗ ಆರ್ಡರ್ ಮಾಡಿ ಮೂರು ದಿನಗಳ ನಂತರವೂ ಸಿಗುತ್ತಿಲ್ಲ. ಇದರ ಜೊತೆಗೆ, ಮೂರು ಬಾರಿ ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಇದು ಹೋಟೆಲ್ ಮಾಲೀಕರಿಗೆ ಗಂಭೀರ ಸಮಸ್ಯೆಯನ್ನು ಸೃಷ್ಟಿಸಿದೆ. ಬೆಲೆ ಏರಿಕೆಯನ್ನು ಗ್ರಾಹಕರಿಗೆ ವರ್ಗಾಯಿಸಿದರೆ, ಅವರು ಹೋಟೆಲ್‌ಗಳಿಂದ ವಿಮುಖರಾಗಬಹುದು ಎಂಬ ಆತಂಕ ಎದುರಾಗಿದೆ.

ಪೂರೈಕೆಯಲ್ಲಿ ಶೇಕಡಾ 50ರಷ್ಟು ಕಡಿತವಾಗಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನೆರಡು ಮೂರು ದಿನಗಳಲ್ಲಿ ಹೋಟೆಲ್ ಉದ್ಯಮ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆಯಿದೆ. ಹೋಟೆಲ್ ಉದ್ಯಮವು ಸೇವಾ ವಲಯವಾಗಿದ್ದು, ಲಕ್ಷಾಂತರ ಗ್ರಾಹಕರು ಇದನ್ನು ಅವಲಂಬಿಸಿದ್ದಾರೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಇಲ್ಲವಾದರೆ, ಉದ್ಯಮವನ್ನು ಬಂದ್ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಮೈಸೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ. ನಾರಾಯಣ ಗೌಡ ಹೇಳಿದ್ದಾರೆ.