ಬೆಂಗಳೂರು (Bengaluru): ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ಸಿನಿಮಾಗಳಲ್ಲಿ ಲಕ್ಕಿ ಮ್ಯಾನ್ ಸಿನಿಮಾ ಕೂಡ ಒಂದು. ಕಾರಣ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಶೇಷ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಸಾಂಗ್ ಗಳು ಗಮನ ಸೆಳೆದಿದೆ.
ಮುಂದಿನ ತಿಂಗಳು ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದ್ದು, ಸದ್ಯ ಲಕ್ಕಿಮ್ಯಾನ್ ನಿಂದ ದಾಖಲೆಗಳ ಪರ್ವ ಶುರುವಾಗಿದೆ. ಸೆಪ್ಟೆಂಬರ್ನಲ್ಲಿ ‘ಲಕ್ಕಿಮ್ಯಾನ್’ ಸಿನಿಮಾ ರಿಲೀಸ್ ಗೆ ಪ್ಲ್ಯಾನ್ ನಡೀತಿದ್ದು, ಇದೀಗ ಸಿನಿಮಾ ವಿತರಣೆ ಹಕ್ಕು ಮಾರಾಟವಾಗಿರುವುದಾಗಿ ವರದಿಯಾಗಿದೆ. ಇಡೀ ಕರ್ನಾಟಕದ ವಿತರಣಾ ಹಕ್ಕುಗಳು ಒಂದೇ ದಿನದಲ್ಲಿ ಮಾರಾಟವಾಗಿರುವುದು ವಿಶೇಷ. ಪುನೀತ್ ರಾಜ್ಕುಮಾರ್ ಕ್ರೇಜ್ ಕಾರಣ ಪ್ರದರ್ಶನಕರು ಸಿನಿಮಾ ಹಕ್ಕುಗಳಿಗಾಗಿ ಮುಗಿಬಿದ್ದಿದ್ದಾರೆ. ಪರಿಣಾಮ ಒಂದೇ ದಿನಕ್ಕೆ ಹಕ್ಕುಗಳು ಮಾರಾಟವಾಗಿದೆ.
ಇತ್ತೀಚೆಗೆ ‘ವಿಕ್ರಾಂತ್ ರೋಣ’ ಸಿನಿಮಾ ನಿರ್ಮಿಸಿ ಗೆದ್ದ ನಿರ್ಮಾಪಕ ಜಾಕ್ ಮಂಜು ‘ಲಕ್ಕಿಮ್ಯಾನ್’ ಚಿತ್ರದ ವಿತರಣೆ ಹಕ್ಕು ಖರೀದಿಸಿದ್ದಾರೆ. ಭಾರೀ ಮೊತ್ತಕ್ಕೆ ಅಪ್ಪು ಕೊನೆಯ ಸಿನಿಮಾ ಹಕ್ಕುಗಳನ್ನು ಮಂಜು ಸ್ವಂತ ಮಾಡಿಕೊಂಡಿದ್ದು, ಬಹಳ ದೊಡ್ಡಮಟ್ಟದಲ್ಲಿ ರಿಲೀಸ್ ಮಾಡುವ ಲೆಕ್ಕಾಚಾರ ನಡೀತಿದೆ. ಇನ್ನು ಡಿಜಿಟಲ್ ರೈಟ್ಸ್, ಸ್ಯಾಟಲೈಟ್, ಓವರ್ಸೀಸ್ ಥ್ರಿಯೇಟ್ರಿಕಲ್ ರೈಟ್ಸ್ಗೂ ಭಾರೀ ಡಿಮ್ಯಾಂಡ್ ಶುರುವಾಗಿದೆ.
ತಮಿಳಿನ ‘ಓ ಮೈ ಕಡವುಲೇ’ ಸಿನಿಮಾ ರಿಮೇಕ್ ಇದಾಗಿದ್ದು, ಮೂಲ ಚಿತ್ರದಲ್ಲಿ ವಿಜಯ್ ಸೇತುಪತಿ ಮಾಡಿದ್ದ ಪಾತ್ರವನ್ನು ಕನ್ನಡದಲ್ಲಿ ಅಪ್ಪು ಮಾಡಿದ್ದಾರೆ. ಅಪ್ಪು ಸಿನಿಮಾದಲ್ಲಿ ದೇವರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ ಪ್ರಭುದೇವಾ ಹಾಗೂ ಪವರ್ ಸ್ಟಾರ್ ಹಾಡೊಂಡಕ್ಕೆ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಅದರ ಮೇಕಿಂಗ್ನ ಸಣ್ಣ ಝಲಕ್ ಕೂಡ ರಿಲೀಸ್ ಆಗಿದೆ.
ಪ್ರಭುದೇವಾ ಸಹೋದರ ನಾಗೇಂದ್ರ ಪ್ರಸಾದ್ ನಿರ್ದೇಶನದ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಸಂಗೀತಾ ಶೃಂಗೇರಿ ಲೀಡ್ ರೋಲ್ಗಳಲ್ಲಿ ಮಿಂಚಿದ್ದಾರೆ. ಪಿ. ಆರ್ ಮೀನಾಕ್ಷಿ ಸುಂದರಂ ಹಾಗೂ ಆರ್. ಸುಂದರ ಕಾಮರಾಜ್ ‘ಲಕ್ಕಿಮ್ಯಾನ್’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಸುಂದರ್ ರಾಜ್, ರಂಗಾಯಣ ರಘು, ನಾಗಭೂಷಣ್, ಸುಧಾ ಬೆಳವಾಡಿ, ಸಾಧುಕೋಕಿಲ, ರೋಶನಿ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ. ವಿ2 ವಿಜಯ್ ವಿಕ್ಕಿ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.