ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯ ಪ್ರಚಾರದ ವೇಳೆ “ಬಿಜೆಪಿಗೆ ಮತ ನೀಡಿ ಮತ್ತು ಪ್ರಧಾನಿ ಮೋದಿಯವರ ಆಶೀರ್ವಾದದಿಂದ ಕರ್ನಾಟಕ ವಂಚಿತವಾಗ ದಂತೆ ನೋಡಿಕೊಳ್ಳಿ’ ಎಂಬುದಾಗಿ ಪ್ರಚಾರ ನಡೆಸುವ ಮೂಲಕ ಮತದಾರರ ಮೇಲೆ ಪ್ರಭಾವ ಬೀರಿದ ಆರೋಪದಲ್ಲಿ ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಸಚಿವ ಜೆ.ಪಿ. ನಡ್ಡಾ ವಿರುದ್ಧದ ದಾಖಲಾಗಿದ್ದ ಎಫ್ಐಆರ್‌ನ್ನು ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ.
ತಮ್ಮ ವಿರುದ್ಧದ ಎಫ್ಐಆರ್ ಮತ್ತು ಹಾವೇರಿ ಪ್ರಧಾನ ಸಿವಿಲ್ ನ್ಯಾಯಾಲಯದ ಮುಂದಿರುವ ವಿಚಾರಣೆ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಜೆ.ಪಿ. ನಡ್ಡಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ನಡ್ಡಾ ಪರ ವಕೀಲರು ಚುನಾವಣ ಸಮಾವೇಶದಲ್ಲಿ ಭಾಷಣವನ್ನು ಪರಿಶೀಲಿಸಿದರೆ ಅದರಲ್ಲಿ ಐಪಿಸಿ ಸೆಕ್ಷನ್‌ಗಳಾದ 171ಸಿ (ಚುನಾವಣೆಯ ಮೇಲೆ ಪ್ರಭಾವ ಬೀರುವುದು) ಮತ್ತು 171ಎಫ್ (ಚುನಾವಣೆಯ ಮೇಲೆ ಪ್ರಭಾವ ಬೀರಿದ್ದಕ್ಕೆ ಶಿಕ್ಷೆ) ಅಡಿ ಯಾವುದೇ ಅಪರಾಧ ಕಾಣಸಿಗುವುದಿಲ್ಲ. ಇದರಲ್ಲಿ ಪ್ರಭಾವ ಬೀರುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ತಮ್ಮ ವಿರುದ್ಧದ ದೂರಿನಲ್ಲಿ ಯಾವುದೇ ತಿರುಳಿಲ್ಲ ಎಂದು ವಾದಿಸಿದರು. ಇದನ್ನು ಪರಿಗಣಿಸಿದ ನ್ಯಾಯಪೀಠವು ಭಾಷಣ ಮತ್ತು ಪ್ರಕರಣದಲ್ಲಿ ಏನೂ ಇಲ್ಲ ಎಂದು ಮೌಖೀಕವಾಗಿ ಅಭಿಪ್ರಾಯಪಟ್ಟು ಎಫ್ಐಆರ್ ಅನ್ನು ವಜಾ ಮಾಡಿ ಆದೇಶಿಸಿತು.