ಮನೆ ದೇವಸ್ಥಾನ ಮಾಡಾಯಿ ಕಾವಿಲಮ್ಮ: ನಿತ್ಯ ಪೂಜೆಗಳ ವಿವರ

ಮಾಡಾಯಿ ಕಾವಿಲಮ್ಮ: ನಿತ್ಯ ಪೂಜೆಗಳ ವಿವರ

0

ಮುಂಜಾನೆ 4:30ಕ್ಕೆ ದೇಗುಲ ಪ್ರವೇಶ ಬಾಗಿಲು ತೆರಿಯಲ್ಪಡುತ್ತದೆ. 5:00 ಗಂಟೆಗೆ ಎಲ್ಲಾ ಗುಡಿಗಳಲ್ಲೂ ದೀಪ ಪ್ರಜ್ವಲನೆ, ಅಭಿಷೇಕವಾಗಿ, ದೇವಿಗುಡಿಯಿಂದ ಭಗವತಿಯ ತಿರುವಾಯುಧವನ್ನು ತಂದು ಭಗವತಿ ಮಂಟಪದ ದಾರುಪೀಠದಲ್ಲಿ ಇರಿಸುವುದಾಗಿದೆ. ಆನಂತರ ಭಗವತಿ ಪೂಜೆ, ಹೊದಳು, ನೈವೇದ್ಯ ಸಮರ್ಪಣೆಯಾಗುತ್ತದೆ.

ಮಧ್ಯಾಹ್ನ 11:30 ಕ್ಕೆ ಕ್ಷೇತ್ರದ ಒಳಗಡೆ ದರ್ಶನಕ್ಕೆ ಬಂದಿರುವ ಭಕ್ತರನ್ನೆಲ್ಲಾ ಹೊರಕಳುಹಿಸಿ ಪ್ರವೇಶನ ಬಾಗಿಲನ್ನು ಮುಚ್ಚಲಾಗುತ್ತದೆ. 12:00 ಕ್ಕೆ ಪೂಜೆ ಪ್ರಾರಂಭ. ಪೂಜಾ ವೇಳೆಯಲ್ಲಿ ಭಕ್ತರಿಗೆ ಯಾರಿಗೂ ದರ್ಶನಕ್ಕೆ ಅವಕಾಶವಿರುವುದಿಲ್ಲ. ಪೂಜಾರಿಗಳು ಮಾತ್ರ ಒಳಗಿರುತ್ತಾರೆ, ಶಾಕ್ತೇಯ ಕ್ರಮದ ಪೂಜೆಯನ್ನು ನಿಗೂಢವಾಗಿ ಮಾಡುವುದ್ದಾಗಿದೆ. ಪೂಜೆ ನಂತರ ಭಕ್ತರಿಗೆ ಪುನಃ ದರ್ಶನಕ್ಕೆ ಅವಕಾಶವಿದ್ದು, 1:00 ಗಂಟೆಗೆ ಗುಡಿಯ ಬಾಗಿಲನ್ನೂ, ದೇಗುಲ ಪ್ರವೇಶ ದ್ವಾರವನ್ನೂ ಮುಚ್ಚಲಾಗುತ್ತದೆ. ಪೂಜಾ ನಂತರ ಅವರು ಮಾಡಿಸಿದ ಸೇವೆಗಳ ಪ್ರಸಾದವನ್ನು ವಿತರಿಸುವುದಾಗಿದೆ.

ಸಾಯಂಕಾಲ ಗಂಟೆ 4:30ಕ್ಕೆ ಪ್ರವೇಶ ಬಾಗಿಲನ್ನು ತೆರೆಯಲಾಗುತ್ತದೆ. ಭಕ್ತರಿಗೆ ದೇವರುಗಳ ದರ್ಶನ ಮಾಡಬಹುದಾಗಿದೆ. 6:00 ಗಂಟೆಗೆ ಭಕ್ತರನ್ನೆಲ್ಲಾ ಹೊರ ಕಳುಹಿಸಿ ಪ್ರವೇಶ ಬಾಗಿಲನ್ನು ಮುಚ್ಚಲಾಗುತ್ತದೆ. 7:00 ಗಂಟೆಯಿಂದ ವಲಿಯ ಇರಡ್ಡಿ (ದೊಡ್ಡ ಪೂಜೆ) ನಡೆಯುತ್ತಿದೆ. ಈ ಅತ್ತಾಳ ಪೂಜೆಗೆ ಉಚ್ಛಪೂಜೆಯೆಂದು ಹೆಸರಿಸುವುದಾಗಿದೆ. 8:00 ಗಂಟೆಗೆ ಭಕ್ತರೆಲ್ಲಾ ಹೊರ ತೆರಳಿದ ಮೇಲೆ ದೇಗುಲದ ಪ್ರವೇಶ ದ್ವಾರವನ್ನು ಮುಚ್ಚಲಾಗುತ್ತದೆ.

ಶಾಕ್ತೇಯ ಪೂಜೆಗಳು

ರಕ್ತ ಪುಷ್ಪಾಂಜಲಿ ಪೂಜೆ, ಅಘಪೂಜೆ, ಕುರುದಿ ಪೂಜೆ, ಕರಿಕಲಶ, ಶತ್ರು ಸಂಹಾರ ಪೂಜೆ, ದೊಡ್ಡ ಇರಟ್ಟಿ ಪೂಜೆ, ಕಲಶ (ಕೋಳಿ ಸಮರ್ಪಣೆ), ಮರಿನೀಕ್ಕಲ್, ಮೊದಲಾದವುಗಳು ಭಗವತಿಗೆ ಸಲ್ಲಿಸುವ ಶಾಕ್ತೇಯ ಪೂಜೆಗಳಾಗಿವೆ.

ಶತ್ರುಸಂಹಾರ ಪೂಜೆ

ಶಕ್ತ್ಯಾರಾಧನೆಯಲ್ಲಿ ಪ್ರಧಾನವಾದದ್ದು ಶಾಕ್ತೇಯ ಪೂಜೆಯಾಗಿದೆ. ಇದರಿಂದ ʼಶಕ್ತಿ ಪೂಜೆʼ ಎಂದು ಹೆಸರಿಸಿದೆ. ಶತ್ರು ಸಂಹಾರಕ್ಕಾಗಿ ಮತ್ತು ಶತ್ರುಪೀಡಾ ದೋಷ ಪರಿಹಾರಗಳಿಗಾಗಿ ಈ ಸೇವೆಯನ್ನು ನಿರ್ವಹಿಸಲಾಗುತ್ತದೆ. ಮಾಡಾಯಿಕಾವ್ ಕ್ಷೇತ್ರದ ಅತಿ ಪ್ರಧಾನವಾದ ಸೇವೆಯು ಇದಾಗಿದೆ. ಕ್ಷಿಪ್ರ ಫಲಪ್ರದವಾಗಿರುವ ಈ ಸೇವೆಗೆ “ಶತ್ರು ಸಂಹಾರ ಪೂಜೆ”ಯೆಂದೇ ಹೇಳಲಾಗುತ್ತದೆ. ಶಾಕ್ತೇಯವಾಗಿ ಭಗವತಿಯ ಇಷ್ಟ ಸೇವೆ ಇದಾಗಿದೆ. ಶ್ರೀ ಭಗವತಿಗೆ ನಿತ್ಯವೂ ಮಧ್ಯಾಹ್ನ ಮತ್ತು ಸಂಜೆಗೆ ಇದನ್ನು ನಿಗೂಢವಾಗಿ ಸಲ್ಲಿಸುವುದಾಗಿದೆ.  ಬೇಯಿಸಿದ ಪಚ್ಚೆಹೆಸರನ್ನು ಮತ್ತು ಕೋಳಿ ಮಾಂಸ, ತೆಂಗಿನ ಹೋಳು, ಕಾಳುಮೆಣಸು ಮತ್ತು ಉಪ್ಪನ್ನು ಮಿಶ್ರಮಾಡಿರುವ ಪಾಕವನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಇದನ್ನು ಸೇವೆ ಮಾಡಿಸಿದವರಿಗೆ ಪ್ರಸಾದವಾಗಿ ಕೊಡಲಾಗುತ್ತದೆ.

ಮರಣ ದೋಷ ತಟ್ಟಿದ ಮನೆಯ ನಾಲ್ಕು ಮೂಲೆಯ ಮಣ್ಣನ್ನು ತಂದು ಕ್ಷೇತ್ರದ ಅಂಗಣಪ್ರವೇಶ ದ್ವಾರದಲ್ಲಿ ಇಡುವುದು ಮತ್ತು ಒತ್ತೆ (ಒಂದು) ಅಥವಾ ಜೋಡು ತೆಂಗಿನಕಾಯಿಗಳನ್ನು ಮನೆಗೆ ಮೂರು ಸುತ್ತು ಹಾಕಿ ತಂದು ಕ್ಷೇತ್ರಕ್ಕೆ ತಂದೊಪ್ಪಿಸುವುದರಿಂದ ಆ ಮನೆಯ ಮರಣದೋಷ ಪರಿಹಾರವಾಗಿ ಅದು ಮರಣ ದೋಷವನ್ನು ಮಾಡಿದ ಕರ್ಮಿಗೆ ಮತ್ತು ಮಾಡಿಸಿದವನಿಗೆ ಹಿಂದೇಟಾಗಿ ಭಾಗಿಸುವುದು ಈ ಪೂಜೆಯ ವಿಶೇಷತೆಯಾಗಿದೆ. ಇದೇ ರೀತಿ ದೇಹಕ್ಕೆ ನೀಚಶಕ್ತಿಗಳ ಭಾದೆ ಇದ್ದರೆ ಅವರು ತೆಂಗಿನಕಾಯಿಯನ್ನು ತಲೆಗೆ ನಿವಾಳಿಸಿ ಕ್ಷೇತ್ರಕ್ಕೆ ಒಪ್ಪಿಸಿದರೆ ಬಾಧಾದೋಷ ಪರಿಹಾರದೊಡನೆ ಅದನ್ನು ಮಾಡಿದವನಿಗೆ ಮತ್ತು ಮಾಡಿಸಿದವನಿಗೆ ತಕ್ಕ ಶಿಕ್ಷಾಫಲ ದೊರೆಯುವುದಾಗಿದೆ.

ಆದರೆ ಮಿಕ್ಕಳಿದ ಎಲ್ಲಾ ಕ್ಷೇತ್ರಗಳಂತೆ ಇಲ್ಲಿ ಅರ್ಚಕರು ಸೇವೆ ಮಾಡಿಸಿದವರ ಹರಕೆಯನ್ನು ದೇವಿಯಲ್ಲಿ ಪ್ರಾರ್ಥಿಸುವ ಕ್ರಮವಿಲ್ಲ. ಸೇವೆ ಮಾಡಿಸುವ ಭಕ್ತರೇ ಅವರು ಸಂಕಟವನ್ನು ಅಥವಾ ಇಷ್ಟಾರ್ಥವನ್ನು ಅವರವರೇ ಮೌಖಿಕವಾಗಿ ಪ್ರಾರ್ಥಿಸಿಕೊಳ್ಳುವುದಾಗಿದೆ. ಇಂತಹ ಪ್ರಾರ್ಥನೆಯನ್ನು ಭಗವತಿ ಆಲಿಸಿ ಶೀಘ್ರ ಫಲವನ್ನು ಕರುಣಿಸುತ್ತಾಳೆ ಎಂಬುದು ಶ್ರೀ ಕ್ಷೇತ್ರದ ಕಾರಣೀಕರ ಮಹಿಮೆಯಾಗಿದೆ.