ಮಲೆಯಾಳದಲ್ಲಿ ಪಾರ ಅಂದರೆ ಕಲ್ಲು. ಪೌರಾಣಿಕವಾಗಿ ಭದ್ರಕಾಳಿಗೆ ನೆಲೆಸಲು ಸಮುದ್ರವು ನೀಗಿ ಮೇಲೆದ್ದಾಗ ಈ ಭೂ ಪ್ರದೇಶಕ್ಕೆ ʼಮಾಡಾಯಿಪ್ಪಾರʼ ಎಂದು ಹೆಸರಾಯಿತು. ಸುಮಾರು 600 ಎಕ್ರೆಗಳಷ್ಟು ವಿಸ್ತಾರವಾಗಿರುವ ಈ ಬಂಡೆಕಲ್ಲಿರುವ ಭೂಮಿಯು ಪೌರಾಣಿಕವಾಗಿ ಮತ್ತು ಚಾರಿತ್ರಿಕವಾಗಿ ಹಲವು ವಿಶೇಷತೆಗಳನ್ನು ಹೊಂದಿದೆ. ಕೇಂದ್ರ ಸರ್ಕಾರವು ನೌಕದಳ ತರಬೇತಿ ನೀಡುತ್ತಿರುವ ಏಲಿಮಲೆಗೆ ಮಾಡಾಯಿಪ್ಪಾರದಿಂದ 4ಕಿ.ಮೀ. ದೂರವಿದೆ. ಇದೀಗ 600 ಎಕ್ರೆಗಳಷ್ಟು ಸ್ಥಳವು ಅನ್ಯಾಧೀನವಾಗಿದೆ. ಶಾಲಾ-ಕಾಲೇಜುಗಳು, ಪೊಲೀಸ್ ಸ್ಟೇಷನ್, ಸರಕಾರಿ ಅತಿಥಿಗೃಹ ಇತ್ಯಾದಿ ಸರಕಾರದ ಕಛೇರಿಗಳು ಇಲ್ಲಿ ನಿರ್ಮಾಣವಾಗಿದೆ. ಮಾಡಾಯಿಪ್ಪಾರೆಯ ಪೂರ್ವಗಡಿಯಾರದ ಎರಿಪ್ಪುರಂ ಪೇಟೆಯಿಂದ ಈ ಪಾರೆಯ ಮಧ್ಯಭಾಗದಲ್ಲಾಗಿ ರಾಜರಸ್ತೆಯು ನಿರ್ಮಾಣವಾಗಿ ಮುಟ್ಟಂ ಪೇಟೆ ತನಕ ಬಸ್ಸು ಸಂಚಾರವಿದೆ.
ಬೇಸಿಗೆ ಕಾಲದಲ್ಲಿ ಮಾಡಾಯಿಪ್ಪಾರೆಯು ಹುಲ್ಲುಗಳೆಲ್ಲಾ ಒಣಗುತ್ತವೆ. ಕೆಲವೊಮ್ಮೆ ಅಗ್ನಿ ಅನಾಹುತವಾಗುವುದೂ ಇದೆ. ಆದರೆ ಮಳೆಗಾಲದಲ್ಲಿ ಹುಲ್ಲು ಗಿಡಗಳೆಲ್ಲಾ ಚಿಗುರಿ ಹಸಿರುಮಯವಾಗಿ ಕಂಗೊಳಿಸುತ್ತದೆ. ಈ ಪ್ರದೇಶದಲ್ಲಿ ಸುಮಾರು 300 ಜಾತಿಯ ಹೂ ಗಿಡಗಳು, 500 ಜಾತಿಯ ಔಷಧಿ ಗಿಡ ಮೂಲಿಕೆಗಳನ್ನು ಕಾಣಬಹುದಾಗಿದೆ. 30ಕ್ಕಿಂತಲೂ ಅಧಿಕ ವಿವಿಧ ಜಾತಿಯ ಹುಲ್ಲುಗಳು ಇಲ್ಲಿವೆ. ಸುಮಾರು 100 ಕ್ಕಿಂತಲೂ ಅಧಿಕ ಜಾತಿಯ ಚಿಟ್ಟೆಗಳನ್ನು ಇಲ್ಲಿ ಕಾಣಬಹುದು. ಸುಮಾರು 150 ಜಾತಿಯ ಪಕ್ಷಿಗಳು ಇಲ್ಲಿಗೆ ಮಳೆಗಾಲದಲ್ಲಿ ವಲಸೆ ಬರುತ್ತದೆ. ವಿಶ್ವದಲ್ಲಿ ಅತಿ ದೊಡ್ಡದಾದ ಅಟ್ಲಾಸ್ಟ್ ಚಿಟ್ಟೆಯು ಇಲ್ಲಿಗೆ ವಲಸೆ ಬರುತ್ತದೆ. ಮಳೆಗಾಲದಲ್ಲಿ ಈ ಸೊಬಗನ್ನು ಕಾಣಲಿಕ್ಕಾಗಿಯೋ ದೇಶ ವಿದೇಶಗಳಿಂದ ಪ್ರವಾಸಿಗಳು ಇಲ್ಲಿಗಾಗಮಿಸುತ್ತಾರೆ.
ತೆಕ್ಕಿನಾಕ್ಕಿಲ್ ಕೋಟೆ :
ಮಾಡಾಯಿಪ್ಪಾರೆಯ ತೆಂಕು ಭಾಗದ ಕೊನೆಯಲ್ಲಿ ಒಂದಕ್ಕೊಂದು ತಾಗಿಕೊಂಡು ಇರುವಂತಹ ಎರಡು ಕೋಟೆಗಳ ಅವಶೇಷಗಳನ್ನು ಕಾಣಬಹುದು. ಪ್ರವೇಶಿಸುವಾಗ ಪ್ರಥಮವಾಗಿ ಸಿಗುವಂತಹ ಕೋಟೆಯನ್ನು ʼತೆಕ್ಕಿನಾಕ್ಕಿಲ್ ಕೋಟೆʼ ಎಂದು ಹೇಳುತ್ತಾರೆ. ಇಲ್ಲಿಯೇ ಪುರಾಣ ಪ್ರಸಿದ್ಧವಾದ ದಾರುಕ-ಭಗವತಿಯರ ಘೋರ ಕಾಳಗ ನಡೆಯಿತೆಂದು ನಂಬಿಕೆಯಿದೆ. ಈ ಕೋಟೆಯು ಸುಮಾರು 6 ಎಕರೆಗಳಷ್ಟು ವಿಸ್ತಾರವಾಗಿರುವುದಾಗಿದೆ. ಕೋಟೆಯ ಪ್ರವೇಶ ದರದಲ್ಲಿಯೇ ಇದೀಗ ಸಹಕಾರಿ ಕಾಲೇಜಿನ ಸ್ಥಾಪನೆಯಾಗಿದೆ. ಕೋಟೆಯೊಳಗೆ ಪ್ರಾಚೀನವಾದ ಆಳವಾಗಿರುವ ಎರಡು ಬಾವಿಗಳನ್ನು ಕಾಣಬಹುದು. ಮಾಡಾಯಿಕಾವ್ ಕ್ಷೇತ್ರದಿಂದ ಭಗವತಿಯು ಪುರೋತ್ಸವ ಕಾಲದಲ್ಲಿ ಶೋಭಾಯಾತ್ರೆಯಾಗಿ ಪ್ರಥಮವಾಗಿ ಈ ಕೋಟೆ ಆಗಮಿಸಿ ಇಲ್ಲಿರುವ ಎರಡು ಕಟ್ಟೆಗಳಲ್ಲಿ ಪೂಜೆಗೊಳ್ಳುತ್ತಾಳೆ. ಈ ಸಮಯದಲ್ಲಿ ಇಲ್ಲಿ ಪೂರಕ್ಕಳಿ ಪ್ರದರ್ಶನವೂ ಇರುವುದಾಗಿದೆ. ಚಾರಿತ್ರಿಕವಾಗಿ ಮೈಸೂರಿನಿಂದ ದಂಡೆತ್ತಿ ಬಂದಂತಹ ಟಿಪ್ಪು ಸುಲ್ತಾನನಿಗೂ ಕೋಲತ್ತಿರಿ ರಾಜನಿಗೂ ಯುದ್ದವಾದದ್ದು ಇದೇ ಕೋಟೆಯಲ್ಲಾಗಿದೆ ಎಂದು ಹೇಳಿಕೆಯಿದೆ.
ದಾರುಕನ್ ಕೋಟೆ :
ತೆಕ್ಕಿನಾಕಿಲ್ ಕೋಟೆಗೆ ತಾಗಿಸಿಕೊಂಡು ತೆಂಕು ಭಾಗಕ್ಕೆ ಸುಮಾರು 4 ಎಕ್ರೆಯಷ್ಟು ಸ್ಥಳದಲ್ಲಿರುವ ಈ ಕೋಟೆಗೆ ʼದಾರುಕನ್ ಕೋಟೆʼ ಎಂದು ಕರೆಯುತ್ತಾರೆ. ಪೌರಾಣಿಕವಾಗಿ ದೇವೀ ಭಗವತಿಯು ದಾರುಕಸುರನನ್ನು ಸಂಹರಿಸಿದ್ದು ಈ ಕೋಡೆಯೊಳಗೆ ಎಂದು ನಂಬಲಾಗುತ್ತದೆ. ಕೋಟೆಯ ನಾಲ್ಕುಬದಿಗಳಲ್ಲೂ ಶತ್ರುಗಳ ಅಗಮನವನ್ನು ವೀಕ್ಷಿಸಲು ನಿರ್ಮಿಸಲಾದ ಕೋಟೆಕಿಂಡಿಗಲ ಅಚಶೇಷಗಳನ್ನು ಕಾಣಬಹುದು. ಕೋಡೆಯ ನಾಲ್ಕು ಬದಿಯ ಕೆಂಗಲ್ಲು ನಿರ್ಮಿತ ಗೋಡೆಗಳು ಜರಿದು ಬಿದ್ದಿವೆ.
ಸಮುದ್ರ ಮಟ್ಟದಿಂದ ಸುಮಾರು 160 ಅಡಿ ಎತ್ತರದಲ್ಲಿರುವ ಈ ಕೋಟೆಯ ತೆಂಕು-ಪೂರ್ವ ಭಾಗದಲ್ಲಿ ನಿಂತಾಗ ಸುಮಾರು 20 km ದೂರವರೆಗಿನ ದೃಶ್ಯಗಳನ್ನು ವೀಕ್ಷಿಸಬಹುದು. ಇಲ್ಲಿಂದ ಏಕಕಾಲದಲ್ಲಿ ಪಾಯಂಗಡಿ ಕುಪ್ಪಂ ಹೊಳೆಯನ್ನು, ಪಾಯಂಗಡಿ ಪೇಟೆಯನ್ನು, ಪಯಂಗಡಿ ರೈಲ್ವೆ ಸ್ಟೇಷನ್ ಮತ್ತು ರೈಲುಗಳನ್ನು ಸಂಚಾರವನ್ನು, ಎಳಿಮಲೆ ಬೆಟ್ಟದ ದೀಪ ಸ್ತಂಭವನ್ನು, ಅಲ್ಲದೆ ಸೂರ್ಯಸ್ತಮಾನದ ಮನೋಹರ ದೃಶ್ಯವನ್ನೂ ಕಾಣಬಹುದಾಗಿದೆ. ಈ ವೀಕ್ಷಣೆಗಾಗಿಯೇ ನಿತ್ಯವೂ ಸಾವಿರಾರು ಮಂದಿ ಪ್ರವಾಸಿಗರು ಆಗಮಿಸುತ್ತಾರೆ.
ಈ ಕೋಟೆಯೊಳಗೆ ಒಂದು ಪೂಜಾ ಕಟ್ಟೆ ಮತ್ತು ಒಂದು ಆಳವಾದ ಬಾವಿ ಇದೆ. ದೇವಿಕಟ್ಟೆಯಲ್ಲಿ ಪುರೋತ್ಸವದ ಕಾಲದಲ್ಲಿ ಶೋಭಾ ಯಾತ್ರೆಗಾಗಿ ಬರುವ ಭಗವತಿಯ ಮೂರ್ತಿಯನ್ನು ಇರಿಸಿ ಪೂಜಿಸಲಾಗುತ್ತದೆ ಮತ್ತು ಧಾರುಕ – ಭಗವತಿಯರ ಕಾಳಗದ ಹಿನ್ನೆಲೆಯಲ್ಲಿ ಪ್ರತೀಕವಾಗಿ ಎಳೆಯ ಪಿಡಾರ ಪೂಜಾರಿಯು ʼಸ್ವರ್ಣ ನಾಂಧಕಂʼ ತಿರುವಾಯುಧದಲ್ಲಿ ಕೆಲವು ಯುದ್ಧವಿಧಿಗಳನ್ನು ಪ್ರದರ್ಶಿಸುವುದಾಗಿದೆ.
ದಾರುಕನ್ ಕೋಟೆಯ ಪೂರ್ವಭಾಗದಲ್ಲಿ ಇದಕ್ಕೆ ತಾಗಿಕೊಂಡು ಆಳಬಾಗದಲ್ಲಿ ಪಾಯಂಗಡಿ ಪೇಟೆಗೆ ಹೊಂದಿಕೊಂಡು ಪುರಾತನವಾದ ಮುಸ್ಲಿಂ ಮಸೀದಿಯೊಂದಿಗೆ. ಇದು ಹಂಚಿನ ಮಾಡಿನದಾಗಿದ್ದು ಹಿಂದೂರಾಜರುಗಳ ʼನಾಲ್ ಪ್ಪಾಡ್ʼ ಅರಮನೆಯಂತಿದೆ. ಈ ಮಸೀದಿಯೊಳಗೆ ಸದಾ ನಂದಾದೀಪವು ಉರಿಯುತ್ತಿದೆಯೆಂದು ಹೇಳಿಕೆಯಿದೆ.
ಜೂತ (ಯೆಹೂದಿ) ಕೊಳ :-
ಭಾರತಕ್ಕೆ ಮೊಟ್ಟಮೊದಲು ಪ್ರವೇಶ ಮಾಡಿದಂತಹ ಪೋರ್ಚುಗೀಸರ ವಸಾಹಾತು ಕೇಂದ್ರವು ಏಳಿಮಲೆಯಾಗಿತ್ತು. ಅವರ ಸೈನಿಕರ ಕವಾಯತು ಕೇಂದ್ರವು ಮಾಡಾಯಿಪ್ಪಾರೆಯ ಮಧ್ಯಭಾಗದಲ್ಲಿತ್ತು. ಅದರ ಅನೇಕ ಕುರುಹುಗಳನ್ನೂ ಈಗಲೂ ಕಾಣಬಹುದು. ಅವುಗಳಲ್ಲಿ ಪ್ರಮುಖವಾಗಿರುವ ಜೂತ ಕೊಳವಾಗಿದೆ. ಸುಮಾರು ¼ ಎಕ್ರೆಯಷ್ಟು ವಿಸ್ತಾರದ ಆಳವಾದ ಕೆರೆಗೆ ಇಳಿಯಲು ನಾಲ್ಕು ಬದಿಗಳಿಂದಲೂ ಕಲ್ಲುಗಳನ್ನು ಹಿಡಿದು ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಮಾತ್ರವಲ್ಲ ಪಶ್ಚಿಮ ಭಾಗದಿಂದ ಕೆರೆ ಗಿಳಿಯಲು ಸಮತಟ್ಟಗಿಸಲಾಗಿದೆ. ಸೌಟುಕದ ಅಥವಾ ಕೈಗನ್ನಡಿಯ ಆಕಾರದಲ್ಲಿರುವ ಈ ಕೆರೆಯಲ್ಲಿ ಕಡು ಬೇಸಿಗೆಯಲ್ಲಿ ನೀರು ಬತ್ತುವುದಿಲ್ಲ. ಆದರೆ ಈ ಕೊಳಕ್ಕೆ ಆವರಣ ಗೋಡೆಯನ್ನು ನಿರ್ಮಿಸದ ಕಾರಣ ಮಳೆಗಾಲದಲ್ಲಿ ಕೆರೆಯ ಇರುವನ್ನು ತಿಳಿಯದೆ ಪ್ರಾಣಪಾಯದ ಘಟನೆಗಳು ಸಂಭವಿಸುತ್ತಿರುತ್ತದೆ.
ವಡಕುಂದ ತಾಟಕ :
ಮಾಡಾಯಿಪ್ಪಾರೆಯ ಬಡಗು-ಪಡು ದಿಕ್ಕಿನ ಅಂಚಿನಲ್ಲಿ ಆಳವಿರುವಂತಹ ಸುಮಾರು 2 ಎಕರೆಯಷ್ಟು ವಿಸ್ತಾರ ಕೆರೆಯಿದೆ. ಪೌರಾಣಿಕವಾಗಿ ದಾರುಕಾಸುರನೊಡನೆ ಕಾಳಗ ಮಾಡಿ ಆತನನ್ನು ವಧಿಸಿದಂತಹ ಭಗವತಿಗೆ ಮಿಂದು ಶುಚಿರ್ಭೂತೆಯಾಗಲು ಶಿವ ಮಹಾದೇವನು ತನ್ನ ತ್ರಿಶೂಲವನ್ನು ನೆಲಕ್ಕೆ ಒತ್ತಿದಾಗ ನಿರ್ಮಿತವಾದ ತಟಾಕವು ಇದೆಂದು ಹೇಳಲಾಗಿದೆ. ಇದನ್ನ ʼವಡಕುಂದ ತಾಟಕʼ ಎಂದು ಕರೆಯಲಾಗುತ್ತದೆ. ಆಳವಾಗಿರುವ ಈ ಸರೋವರದ ತಳದಲ್ಲಿ ತ್ರಿಶೂಲದ ಮೂರು ತುದಿಗಳನ್ನು ಉರಿದಾಗ ಆದದ್ದೆಂದು ಹೇಳಲಾಗುವ ಮೂರು ಕಿರುಕೊಳಗಳಿವೆಗಳಿವೆಯೆಂದೂ ತಿಳಿಯಲಾಗುತ್ತದೆ.
ಸಮತಟ್ಟಾಗಿದ್ದು ವಿಸ್ತಾರವಾಗಿರುವ ಈ ತಾಟಕಕ್ಕೆ ಆವರಣ ಗೋಡೆಯಿಲ್ಲದ ಕಾರಣ ಮಳೆಗಾಲದಲ್ಲಿ ನಾಲ್ಕು ಬದಿಗಳಿಂದಲೂ ನೀರು ಹರಿದು ಬಂದು ವಿಶಾಲ ಸಮುದ್ರದಂತೆ ಕಾಣುತ್ತದೆ. ಕೊಳದ ಆಳದಲ್ಲಿ ಸೀಳುಗಳಿಲ್ಲದ ಕಲ್ಲೇ ಇರುವುದರಿಂದ ಇದರ ನೀರು ಇಂಗುವುದಿಲ್ಲ. ಆದುದರಿಂದ ವರ್ಷವಿಡೀ ಈ ತಾಟಕದಲ್ಲಿ ತುಂಬು ನೀರು ಇರುತ್ತದೆ. ಸದಾ ಗಾಳಿ ಬಿಸಿ ಬಿಸಿಲು ಬೀಳುವುದರಿಂದ ಇದರ ನೀರು ತಿಳಿಯಾಗಿ, ಶುಭ್ರವಾಗಿರುತ್ತದೆ. ಹತ್ತಿರದ ವಡಕುಂದ ಶಿವಕ್ಷೇತ್ರಕ್ಕೆ ಬರುವಂತಹ ಭಕ್ತರು ಈ ತಾಟಕದಲ್ಲಿ ಶುಚಿರ್ಭೂತರಾಗುತ್ತಾರೆ. ಮಾಡಾಯಿಕಾವಿಲಮ್ಮನವರ ಪುರೋತ್ಸವದ ಆರಾಟು ಉತ್ಸವವು ಈ ತಾಟಕದಲ್ಲಿ ಆಗುವುದಾಗಿದೆ. ಈ ವೇಳೆಯಲ್ಲಿ ಉತ್ಸವ ಮೂರ್ತಿಯನ್ನಿಟ್ಟು ಪೂಜಿಸಲು ಮಣಿತರ ಕಟ್ಟೆಯೊಂದು ತಾಡಕತ ದಡದಲ್ಲಿದೆ. ಮಳೆಗಾಲದಲ್ಲಿ ಈ ಕಟ್ಟೆ ಅರ್ಧ ಭಾಗವು ನೀರಲ್ಲಿ ಮುಳುಗಿರುತ್ತದೆ. ಈ ತಾಟಕದಲ್ಲಿ ಮೊಸಳೆಗಳಿವೆಯೆಂದು ಹೇಳಲಾಗುತ್ತಿದೆ. ಇದರಲ್ಲಿ ಮಿಂದರೆ ಸರ್ವ ಚರ್ಮರೋಗಗಳು ವಾಸಿಯಾಗುವುದಲ್ಲದೆ, ಶರೀರದಲ್ಲಿರುವ ನೀಚ ಭಾದಮೂರ್ತಿಗಳು ತೊಲಗಿ ಹೋಗುತ್ತದೆ ಎಂಬ ನಂಬಿಕೆ ಇದೆ.
ಈ ತಾಟಕದ ಪಶ್ಚಿಮ ಭಾಗದಲ್ಲಿ ಪಿಂಗಾಣಿ ಪಾತ್ತೆಯನ್ನು ನಿರ್ಮಿಸಿರುವ ಅಪರೂಪದ ಮಣ್ಣು ಇರುವುದಾಗಿದೆ. ಸುಮಾರು 35 ಎಕರೆಗಳಷ್ಟು ವಿಸ್ತಾರದಲ್ಲಿ ಸಮತಟ್ಟು ಮಾಡಿ ಪಿಂಗಾಣಿ ನಿರ್ಮಿಸಿರುವ ಕಾರ್ಖಾನೆಯೂ ಆರಂಭಗೊಂಡು ಕಾರ್ಯವೆಸಗುತಿತ್ತು. ಆದರೆ ಹೀಗೆ ಮಣ್ಣು ತೆಗೆದರೆ ತಟಾಕಕ್ಕೆ ಹಾನಿ ಸಂಭವಿಸಿತೆಂದು ಪ್ರತಿಭಟನೆ ಬಂದಾಗ ಇದೀಗ ಮಣ್ಣು ತೆಗೆಯುವುದನ್ನು ನಿಲ್ಲಿಸಲಾಗಿದೆ.