ಮಂಡ್ಯ:ನಿವೇಶನದ ಖಾತೆ ಮಾಡಿಕೊಡಲು ಲಂಚ ಕೇಳಿದ ದೂರಿನ ಅನ್ವಯ ಮದ್ದೂರು ತಾಲೂಕು ಹೊಸಕೆರೆ ಗ್ರಾಮ ಪಂಚಾಯಿತಿ ಪಿಡಿಒ ಮಂಜಮ್ಮ ಹಾಗೂ ಈಕೆಯ ಖಾಸಗಿ ಕಾರು ಚಾಲಕ ಅಭಿಷೇಕ್ಗೌಡ ಎಂಬಾತ ಶನಿವಾರ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದಿದ್ದಾರೆ.
ಕೃಷ್ಣಗೌಡ ಎಂಬುವರು ಹೊಸಕೆರೆ ಗ್ರಾಪಂ ವ್ಯಾಪ್ತಿಯಲ್ಲಿ ನಿವೇಶನ ಗಳನ್ನು ಮಾಡಿದ್ದಾರೆ. ಇದನ್ನು ಖಾತೆ ಮಾಡಿಕೊಡುವಂತೆ ಗ್ರಾಪಂಗೆ ಅರ್ಜಿ ಸಲ್ಲಿಸಿದ್ದಾರೆ. ಆದರೆ ಪ್ರತಿ ನಿವೇಶನಕ್ಕೆ 2 ಸಾವಿರ ರೂನಂತೆ 1,20 ಲಕ್ಷ ರೂ ಲಂಚ ಕೊಡಬೇಕೆಂದು ಪಿಡಿಒ ಡಿಮಾಂಡ್ ಇಟ್ಟಿದ್ದಾರೆ.ಈ ಹಿನ್ನೆಲೆಯಲ್ಲಿ ಕೃಷ್ಣೇಗೌಡ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದಾರೆ.ಅಂತೆಯೇ ಶನಿವಾರ ಕಾರು ಚಾಲಕ ಹಣ ಸ್ವೀಕರಿಸುವ ವೇಳೆ ಬಲೆಗೆ ಬಿದ್ದಿದ್ದಾರೆ.
ದೂರಿನ ಆಧಾರದಲ್ಲಿ ಲೋಕಾಯುಕ್ತ ಎಸ್ಪಿ ಸುರೇಶ್ಕುಮಾರ್ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಸುನೀಲ್ಕುಮಾರ್, ಇನ್ಸ್ಪೆಕ್ಟರ್ ಪ್ರಕಾಶ್, ಸಿಬ್ಬಂದಿ ಮಹದೇವಸ್ವಾಮಿ, ಶರತ್, ಶಂಕರ್, ಮಾನಸಾ ದಾಳಿ ನಡೆಸಿದ್ದಾರೆ. ಇಬ್ಬರನ್ನು ವಶಕ್ಕೆ ಪಡೆದು ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ.















