ಮೈಸೂರು: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ರಸ್ತೆಯ ಮದ್ದೂರು ಬೈಪಾಸ್ ನವೆಂಬರ್ ಅಂತ್ಯಕ್ಕೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮದ್ದೂರು ಬೈಪಾಸ್ ಕೆಲಸ ಬಹುತೇಕ ಕಂಪ್ಲೀಟ್ ಆಗಿದೆ. ಎಕ್ಸ್’ಪೆನ್ಷನ್ ಜಾಯಿಂಟ್ಸ್ ಕೆಲಸ ಮಾತ್ರ ಬಾಕಿ ಇದೆ. 10-15 ದಿನಗಳಲ್ಲಿ ಆ ಕೆಲಸವು ಮುಗಿಯುವ ಭರವಸೆ ಇದೆ. ಮಂಡ್ಯ ಶ್ರೀರಂಗಪಟ್ಟಣ ಬೈಪಾಸ್ ಕೂಡ ಡಿಸೆಂಬರ್ ವೇಳೆಗೆ ಕಂಪ್ಲೀಟ್ ಆಗಲಿದೆ. ಹೊಸ ವರ್ಷದಿಂದ ಸರಾಗವಾಗಿ ಬೆಂಗಳೂರು- ಮೈಸೂರಿಗೆ ಸಂಚಾರ ಮಾಡಬಹುದು ಎಂದಿದ್ದಾರೆ.
ಈ ಕಾಮಗಾರಿ ಮುಕ್ತಾಯಗೊಂಡರೆ 75 ರಿಂದ 80 ನಿಮಿಷಗಳಲ್ಲಿ ಬೆಂಗಳೂರು-ಮೈಸೂರು ತಲುಪಬಹುದು. ಕೆಲವೆಡೆ ಕೆನಾಲ್, ಅಂಡರ್ ಪಾಸ್’ನ ಸಣ್ಣಪುಟ್ಟ ಕೆಲಸವಿದೆ. ಆ ಕೆಲಸದ ಬಳಿ ಟ್ರಾಫಿಕ್ ಡೈವರ್ಟ್ ಮಾಡಿ, ಮುಕ್ತ ಸಂಚಾರಕ್ಕೆ ಅವಕಾಶ ನೀಡುತ್ತೇವೆ ಎಂದು ಸಂಸದ ಪ್ರತಾಪ್ ಸಿಂಹ ಮದ್ದೂರು ಬೈಪಾಸ್ ಮೇಲೆ ನಿಂತು ಫೇಸ್’ಬುಕ್ ಲೈವ್ ನಲ್ಲಿ ಮಾಹಿತಿ ನೀಡಿದ್ದಾರೆ.