ಮದ್ದೂರು: ರೈಲ್ವೆ ಪೊಲೀಸ್ ಪೇದೆಗೆ ದುಷ್ಕರ್ಮಿಗಳು ಚಾಕು ಇರಿದಿರುವ ಘಟನೆ ಮದ್ದೂರು ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.
ರೈಲ್ವೆ ಪೊಲೀಸ್ ಪೇದೆ ಸತೀಶ್ ಚಂದ್ರ ಚಾಕು ಇರಿತಕ್ಕೆ ಒಳಗಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಂಡ್ಯ ರೈಲ್ವೆ ಔಟ್ ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸತೀಶ್ ಚಂದ್ರ, ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಗೋಲ್ ಗುಂಬಜ್ ಎಕ್ಸ್‌ಪ್ರೆಸ್‌ರೈಲಿನಲ್ಲಿ ಗಾಂಜಾ ಮಿಶ್ರಿತ ಸಿಗರೇಟ್ ಸೇವನೆ ಮಾಡುತ್ತಿದ್ದ ಯುವಕರನ್ನು ಪ್ರಶ್ನಿಸಿದ್ದಾರೆ. ಈ ವೇಳೆ 6 ಜನ ಯುವಕರ ಗುಂಪು ಹಾಗೂ ಪೇದೆಯ ನಡುವೆ ಮಾತಿನ ಚಕಮಕಿ ನಡೆದಿದೆ.
ಪರಿಣಾಮ ರೈಲಿನಲ್ಲಿ ಸಿಗರೇಟ್ ಸೇದದಂತೆ ಪೊಲೀಸ್ ಪೇದೆ ತಾಕೀತು ಮಾಡಿದ್ದಾರೆ. ಬಳಿಕ ಮದ್ದೂರು ರೈಲ್ವೆ ನಿಲ್ದಾಣದಲ್ಲಿ ರೈಲು ಇಳಿಯುತ್ತಿದ್ದಂತೆ ಪೇದೆಗೆ ಚಾಕು ಇರಿದು ಯುವಕರು ಪರಾರಿಯಾಗಿದ್ದಾರೆ.
ಗಾಯಗೊಂಡ ರೈಲ್ವೆ ಪೊಲೀಸ್ ಪೇದೆಯನ್ನು ಸ್ಥಳೀಯರು ಮದ್ದೂರು ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ಸಂಬಂದ ಇಬ್ಬರು ಯುವಕರನ್ನು ವಶಕ್ಕೆ ಪಡೆದ್ದಾರೆ. ಉಳಿದ ನಾಲ್ವರು ಆರೋಪಿಗಳ ಪತ್ತೆಗೆ ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ.
ಮೈಸೂರು ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿ ಕಾರ್ಯಾಚರಣೆ ಮುಂದುವರಿಸಿದ್ದಾರೆ.