ಚಲನಚಿತ್ರ ತೆರೆಕಂಡ 3 ದಿನಗಳವರೆಗೆ ಆನ್‌ಲೈನ್ ವಿಮರ್ಶೆಗೆ ನಿಷೇಧ ವಿಧಿಸುವಂತೆ ಕೋರಿ ತಮಿಳು ಚಲನಚಿತ್ರ ಕಾರ್ಯನಿರತ ನಿರ್ಮಾಪಕರ ಸಂಘ (ಟಿಎಫ್‌ಎಪಿಎ) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಮದ್ರಾಸ್ ಹೈಕೋರ್ಟ್ ಮಂಗಳವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ತಮಿಳುನಾಡು ಸರ್ಕಾರ ಹಾಗೂ ಯೂಟ್ಯೂಬ್‌ಗೆ ನೋಟಿಸ್ ಜಾರಿ ಮಾಡಿದೆ.
ನ್ಯಾಯಮೂರ್ತಿ ಎಸ್ ಸೌಂದರ್ ಅವರು ಮನವಿಗೆ ಸಂಬಂಧಿಸಿದಂತೆ ನೋಟಿಸ್ ನೀಡಿದರೂ ಚಲನಚಿತ್ರ ವಿಮರ್ಶೆಗಳು “ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಭಾಗವಾಗಿದ್ದು” ಅದನ್ನು ಮೊಟಕುಗೊಳಿಸಲಾಗದು ಎಂದು ಮೌಖಿಕವಾಗಿ ತಿಳಿಸಿದರು.
ತಮ್ಮ ಯೂಟ್ಯೂಬ್ ವಾಹಿನಿಯಲ್ಲಿ ಇಲ್ಲವೇ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಚಲಚಿತ್ರ ವಿಮರ್ಶಿಸುವವರು ಪಾಲಿಸಬೇಕಾದ ಮಾರ್ಗಸೂಚಿಗಳನ್ನು ರೂಪಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು ಎಂದು (ಟಿಎಫ್‌ಎಪಿಎ) ಕೋರಿದೆ.
ವಿಮರ್ಶಕರಿಗೆ ಚಿತ್ರಗಳನ್ನು ವಿಮರ್ಶೆ ಮಾಡುವ ಎಲ್ಲಾ ಹಕ್ಕು ಇದ್ದರೂ ವೈಯಕ್ತಿಕ ದುರುದ್ದೇಶದಿಂದ ಮಾಧ್ಯಮಗಳಲ್ಲಿ ಚಿತ್ರದ ಬಗ್ಗೆ ದ್ವೇಷಭಾವನೆ ಬಿತ್ತಬಾರದು ಎಂಬುದನ್ನು ಅವರು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಸಂಘ ನ್ಯಾಯಾಲಯಕ್ಕೆ ತಿಳಿಸಿದೆ.
ಹಿಂದಿನ ದ್ವೇಷ ಅಥವಾ ವ್ಯಾವಹಾರಿಕ ಪೈಪೋಟಿಯ ಕಾರಣಕ್ಕೆ ಚಿತ್ರವೊಂದನ್ನು ನಕಾರಾತ್ಮಕವಾಗಿ ವಿಮರ್ಶಿಸುವುದಕ್ಕಾಗಿ ಜನರನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗೆ ಮುಂಚಿತವಾಗಿ ವಿಮರ್ಶೆ ಮಾಡುವುದರಿಂದ ಸಾರ್ವಜನಿಕರು ಅದನ್ನು ವೀಕ್ಷಿಸುವ ಅವಕಾಶ ಪಡೆಯುವ ಮೊದಲೇ ಪಕ್ಷಪಾತದ ಅಭಿಪ್ರಾಯಗಳು ಚಿಗುರುತ್ತವೆ ಎಂದು ಅರ್ಜಿ ವಾದಿಸಿದೆ.
ಇಂತಹ ಋಣಾತ್ಮಕ ವಿಮರ್ಶೆಗಳಿಂದಾಗಿ ವಿಮರ್ಶಾ ಪ್ರಕ್ರಿಯೆಯ ಒಟ್ಟಂದವೇ ಅಪಾಯದಲ್ಲಿದ್ದು ಚಿತ್ರ ನಿರ್ಮಾಪಕರು ಭಾರಿ ನಷ್ಟ ಎದುರಿಸುತ್ತಿದ್ದಾರೆ ಎಂದು ಅರ್ಜಿದಾರರು ಹೇಳಿದ್ದಾರೆ.