ಬೆಂಗಳೂರು: ಮಾಗಡಿ ಶಾಸಕ ಹೆಚ್ಸಿ ಬಾಲಕೃಷ್ಣ ವಿರುದ್ಧ 1600 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಾಗ ಕಬಳಿಕೆ ಆರೋಪ ಕೇಳಿಬಂದಿದೆ. ಈ ಸಂಬಂಧ ಎನ್ಆರ್ ರಮೇಶ್ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳೂ ಇದರ ಜೊತೆಗೆ ಶಾಮೀಲಾಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಕೆಂಗೇರಿಯ ಸರ್ವೇ ನಂಬರ್ 69 ರಲ್ಲಿ ಇರುವ 183 ಎಕರೆ ಜಾಗದ ಕುರಿತು ವಿವಾದಗಳು ಎದ್ದಿದ್ದು, 1973 ರಲ್ಲಿ 25 ಜನ ಜಮೀನುರಹಿತರಿಗೆ ಈ ಜಾಗ ಹಂಚಿಕೆಯಾಗಿತ್ತು. ಇದರಲ್ಲಿ SC/ST ಸಮುದಾಯದವರಿಗೆ ಪ್ರತಿ ವ್ಯಕ್ತಿಗೂ 1.20 ಎಕರೆ ಹಂಚಿಕೆಯಾಗಿತ್ತು. ಉತ್ತರಹಳ್ಳಿ-ಕೆಂಗೇರಿ ನಡು ಭಾಗದಲ್ಲಿ ಇರುವ ಈ ಜಾಗದಲ್ಲಿ ಹಲವು ಫಲಾನುಭವಿಗಳು ನಿಧನರಾದರು.
ಇತ್ತ, ಸರ್ಕಾರದ ಅನುಮತಿಯಿಲ್ಲದೆ ಈ ಜಾಗವನ್ನು ಮಾರಾಟ ಮಾಡಿರುವ ಬಗ್ಗೆ ಹಲವು ಆರೋಪಗಳು ಕೇಳಿ ಬಂದಿವೆ. ಸುರೇಂದ್ರ ಎಂಬ ವ್ಯಕ್ತಿ ಮಾರಾಟಕ್ಕೆ ಸಂಚು ಹೂಡಿದ್ದರು ಎಂದು ಆರೋಪಿಸಲಾಗಿದೆ. ಸುರೇಂದ್ರ ಕೆಎಸ್ಎಸ್ ರೆಸಿಡೆನ್ಸಿ ಕಂಪನಿಯ ಮಾಲೀಕರಾಗಿದ್ದು, ಹೆಚ್ಸಿ ಬಾಲಕೃಷ್ಣ ಮತ್ತು ಕೆಲ ಪ್ರಭಾವಿಗಳ ಸಹಕಾರದಿಂದ ಮಾರಾಟಕ್ಕೆ ಮಾಡಿದ್ದಾರೆ ಎಂಬ ಆರೋಪಗಳಿವೆ.
ಲೋಕಾಯುಕ್ತಕ್ಕೆ ನೀಡಿದ ದೂರಿನಲ್ಲೇನಿದೆ?
ಕೆಂಗೇರಿ ಗ್ರಾಮದ ಸರ್ವೇ ನಂ: 69 ರ 183 ಎಕರೆ ಸರ್ಕಾರೀ ಸ್ವತ್ತು ಸಂಪೂರ್ಣವಾಗಿ ‘‘ಸರ್ಕಾರಿ ಬಂಡೆ’’ ಪ್ರದೇಶವಾಗಿದ್ದು, ಇದನ್ನು ಖಾಸಗಿ ವ್ಯಕ್ತಿಗಳಿಗೆ ಮಾರಾಟ ಮಾಡಲು ಕಾನೂನು ರೀತ್ಯಾ ಅವಕಾಶವೇ ಇರುವುದಿಲ್ಲ. ಹೀಗಿದ್ದಾಗ್ಯೂ, ಕೆಎನ್ ಸುರೇಂದ್ರ ಅವರ ಬೆನ್ನಿಗಿದ್ದ ಪ್ರಭಾವಿಗಳ ಒತ್ತಡಗಳಿಗೆ ಒಳಗಾಗಿದ್ದ ಕಂದಾಯ ಇಲಾಖೆಯ ಬೆಂಗಳೂರು ದಕ್ಷಿಣ ತಾಲ್ಲೂಕಿನ ಎಲ್ಲಾ ಅಧಿಕಾರಿಗಳು ಒಬ್ಬರ ಹಿಂದೆ ಮತ್ತೊಬ್ಬರಂತೆ, ಒಂದರ ಹಿಂದೆ ಮತ್ತೊಂದು ಕಾನೂನು ಬಾಹಿರ ಕಾರ್ಯಗಳನ್ನು ಮಾಡುತ್ತಾ ನಕಲಿ ದಾಖಲೆಗಳ ತಯಾರಿಕೆಗೆ ಅವಕಾಶ ಮಾಡಿಕೊಡುತ್ತಾ, 1,600 ಕೋಟಿ ರೂ. ಮೌಲ್ಯದ ಸರ್ಕಾರಿ ಭೂ ಕಬಳಿಕೆಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಮೊದಲಿಗೆ ರವಿಶಂಕರ್ ಎಂಬ ಸರ್ವೇಯರ್ ಇದಕ್ಕೆ ಸಂಬಂಧಿಸಿದಂತೆ ಸ್ಕೆಚ್ ತಯಾರು ಮಾಡಿದ್ದರೆ, ಲಕ್ಷ್ಮೀದೇವಿ ಎಂಬ ಮತ್ತೊಬ್ಬ ಸರ್ವೇಯರ್ ಇದಕ್ಕೆ ಕಂಪೇರ್ ಸರ್ವೇ ಮಾಡಿ ಕೊಟ್ಟಿರುತ್ತಾರೆ. ಎಡಿಎಲ್ಆರ್ ಸಚಿನ್ ಮತ್ತು ಡಿಎಇಎಲ್ಆರ್ ಮಂಜುನಾಥ್ ಥವನೆ ಅವರು ರಾತ್ರೋರಾತ್ರಿ ಸದರಿ ಸ್ವತ್ತಿಗೆ “ಪೋಡಿ” ಮಾಡಿದ್ದಾರೆ. ಇತ್ತೀಚೆಗೆ ಡಿಸಿಎಲ್ಆರ್ ಹುದ್ದೆಗೆ ಬಂದಿರುವ ಕುಸುಮ ಲತಾ ಅವರು ಇದಕ್ಕೆ “ಪಹಣಿ” ನೀಡಲು ಅನುಮೋದನೆ ನೀಡಲು ಕಡತವನ್ನು ಮುಂದಕ್ಕೆ ಕಳುಹಿಸುತ್ತಾರೆ ಎಂದು ದೂರುದಾರರು ಆರೋಪಿಸಿದ್ದಾರೆ.
ಪ್ರಭಾವಿಗಳಲ್ಲದ ಸಾಮಾನ್ಯ ಜನರು ಅವರ ಸ್ವತ್ತುಗಳಿಗೆ ಪೋಡಿ ಮಾಡಲು ಅರ್ಜಿಗಳನ್ನು ನೀಡಿ ವರ್ಷಾನುಗಟ್ಟಲೇ ಇವರ ಕಚೇರಿಗಳಿಗೆ ಅಲೆದಾಡಿದರೂ ಸಹ ಪೋಡಿ ಮಾಡಿಕೊಡದ ಈ ಅಧಿಕಾರಿಗಳು ಈ ಪ್ರಕರಣದಲ್ಲಿ ಕೇವಲ 15 ದಿನಗಳಲ್ಲಿ ಕಾನೂನು ಬಾಹಿರವಾಗಿ ಪೋಡಿ ಮಾಡಿಕೊಟ್ಟಿರುತ್ತಾರೆ ಎಂದೂ ಉಲ್ಲೇಖಿಸಲಾಗಿದೆ.
ಈ ಕಾನೂನು ಬಾಹಿರ ಕಾರ್ಯಕ್ಕೆ ಸಹಕರಿಸಿದ ಬೆಂಗಳೂರು ನಗರ ಜಿಲ್ಲೆಯ ಎಸಿ ರಜನೀಕಾಂತ್, ಡಿಡಿಎಲ್ ಆರ್ ಮಂಜುನಾಥ್ ಥವನೆ, ಮತ್ತು ಕುಸುಮ ಲತಾ, ಎಡಿಎಲ್ ಆರ್ ಸಚಿನ್, ಮೇಲ್ವಿಚಾರಕ ಶಶಿಕುಮಾರ್, ಸರ್ವೈಯರ್ ಗಳಾದ ರವಿಶಂಕರ್ ಮತ್ತು ಲಕ್ಷ್ಮೀದೇವಿ, ವಿಶೇಷ ತಹಸೀಲ್ದಾರ್ ಗುರುರಾಜ್ ಹಾಗೂ ತಹಸೀಲ್ದಾರ್ ಗಳಾದ ದಿನೇಶ್, ರಾಮ್ ಲಕ್ಷ್ಮಣ್ ಸೇರಿದಂತೆ ಕೆಎನ್ ಎಸ್ ರೆಸಿಡೆನ್ಸಿ ಸಂಸ್ಥೆಯ ಮಾಲೀಕ ಕೆ ಎನ್ ಸುರೇಂದ್ರ ಅವರ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಹಾಗೂ ಹಗರಣವನ್ನು ಉನ್ನತ ಮಟ್ಟದ ನ್ಯಾಯಾಂಗ ತನಿಖೆಗೆ ಅಥವಾ ಸಿಐಡಿ ತನಿಖೆಗೆ ವಹಿಸುವಂತೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮತ್ತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯ ಅವರನ್ನು ಆಗ್ರಹಿಸಲಾಗಿದೆ.
ಈ “ಬೃಹತ್ ಸರ್ಕಾರಿ ಭೂ ಕಬಳಿಕೆ ಹಗರಣ”ದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ಸರ್ಕಾರಕ್ಕೆ ಪತ್ರ ಬರೆಯುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ “ಸರ್ವೆ ಇಲಾಖೆ”ಯ ಆಯುಕ್ತರಾಗಿರುವ ಮಂಜುನಾಥ್ ಅವರನ್ನು ಆಗ್ರಹಿಸಲಾಗಿದೆ.
ಸದರಿ ಸ್ವತ್ತಿಗೆ ರಕ್ಷಣಾ ಬೇಲಿ ನಿರ್ಮಿಸುವ ಸಂಬಂಧ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಲಾಗಿದೆ.
“ಸರ್ಕಾರಿ ಭೂ ಕಬಳಿಕೆ ಹಗರಣ”ಕ್ಕೆ ಸಂಬಂಧಿಸಿದಂತೆ ಎಲ್ಲಾ ಭ್ರಷ್ಟರು / ವಂಚಕರ ವಿರುದ್ಧ “ಲೋಕಾಯುಕ್ತ”ದಲ್ಲಿ “ಭಾರತೀಯ ನ್ಯಾಯ ಸಂಹಿತೆ (- 2023” ರ ಅನ್ವಯ ಭ್ರಷ್ಟಾಚಾರ, ನಕಲಿ ದಾಖಲೆ ತಯಾರಿಕೆ, ಸರ್ಕಾರಿ ಸ್ವತ್ತು ಕಬಳಿಕೆಗೆ ಸಂಚು, ವಂಚನೆ ಮತ್ತು ಅಧಿಕಾರ ದುರುಪಯೋಗ ಪ್ರಕರಣಗಳನ್ನು ದಾಖಲಿಸಲಾಗಿದೆ.
ಈ ಸಂಬಂಧ ಲೋಕಾಯುಕ್ತ ಎಡಿಜಿಪಿ, ಐಜಿಪಿ ಮತ್ತು ಲೋಕಾಯುಕ್ತ ಎಸ್ ಪಿ – 02 ರವರಿಗೂ ಸಹ ದೂರು ಸಲ್ಲಿಸಲಾಗಿದೆ.