ಮಂಡ್ಯ : ನಾಳೆ (ಭಾನುವಾರ) ಮಾಘ ಹುಣ್ಣಿಮೆ ಇರುವ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ನಿಮಿಷಾಂಬ ದೇಗುಲದಲ್ಲಿ ನಡೆಯಲಿರುವ ಮಾಘ ಶುದ್ಧ ಹುಣ್ಣಿಮೆ ಮಹೋತ್ಸವ ಕಾರ್ಯಕ್ರಮಗಳಿಗೆ ಸಕಲ ಸಿದ್ಧತೆಗಳು ನಡೆಯುತ್ತಿದ್ದು, ರಾಜ್ಯದ ವಿವಿಧೆಡೆಗಳಿಂದ ಸುಮಾರು 1 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದೆ.
ದೇವಾಲಯದ ಬಳಿ ಮಾಘ ಶುದ್ಧ ಹುಣ್ಣಿಮೆಯ ಪೂರ್ವ ಸಿದ್ಧತೆಗಳ ಕುರಿತು ಮಾತನಾಡಿ, ಮಾಘ ಶುದ್ಧ ಹುಣ್ಣಿಮೆಯಂದು ಇಲ್ಲಿನ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಶ್ರೀ ನಿಮಿಷಾಂಬ ದೇವಿಯ ದರ್ಶನ ಪಡೆದರೆ ಇಷ್ಠಾರ್ಥ ಸಿದ್ದಿಸುವ ನಂಬಿಕೆಯಿದ್ದು, ಬರುವ ಭಕ್ತರಿಗೆ ಸೂಕ್ತ ಮೂಲಭೂತ ಸೌಲಭ್ಯಗಳನ್ನ ಕಲ್ಪಿಸಲಾಗುತ್ತಿದೆ. ಇಂದು ಮಧ್ಯರಾತ್ರಿ 2 ಗಂಟೆಯಿಂದಲೇ ದೇವಿಯ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದ್ದು, ವಿಶೇಷ ಪೂಜೆಗಳೊಂದಿಗೆ ಹೋಮ-ಹವನ ಹಮ್ಮಿಕೊಳ್ಳಲಾಗಿದೆ.
ಪ್ರತೀ ವರ್ಷದಂತೆ ಈ ವರ್ಷವೂ ಫೆ.1 ರ ಮದ್ಯ ರಾತ್ರಿ 1 ಗಂಟೆಯಿಂದಲೇ ಇಲ್ಲಿನ ಕಾವೇರಿ ನದಿಯಲ್ಲಿ ಭಕ್ತರಿಗೆ ಮಾಘಶುದ್ಧ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ಫೆ.2ರ ರಾತ್ರಿ 10 ಗಂಟೆಯವರೆವಿಗೂ ಮಾಘ ಶುದ್ಧ ಸ್ನಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಕಾವೇರಿ ನದಿಯಲ್ಲಿ ಮಧ್ಯರಾತ್ರಿಯಿಂದಲೇ ಸ್ನಾನ ಮಾಡಲು ಹಾಗೂ ಬಟ್ಟೆ ಬದಲಿಸಿಕೊಳ್ಳಲು ನದಿ ತೀರದಲ್ಲಿ ಬ್ಯಾರಿಕೇಡ್‌ಗಳ ನಿರ್ಮಿಸಿ ಸಿದ್ದತೆಗಳ ಅಗತ್ಯ ಕ್ರಮಕೈಗೊಳ್ಳಲಾಗಿದೆ.

ನದಿ ಪಾತ್ರದಲ್ಲಿ ಮುಂಜಾಗ್ರತ ಕ್ರಮವಾಗಿ ಅಗ್ನಿ ಶಾಮಕ ದಳ ನಿಯೋಜನೆ, ವಿದ್ಯುತ್ ದೀಪಗಳ ವ್ಯವಸ್ಥೆ ಹಾಗೂ ವಾಹನಗಳ ನಿಲುಗಡೆಗಾಗಿ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ, ಕಾನೂನು ಬಾಹಿರ ಚಟುವಟಿಕೆಗೆ ಅವಕಾಶ ನೀಡದಂತೆ ಸೂಕ್ಷ್ಮ ಸ್ಥಳಗಳಲ್ಲಿ ಸಿಸಿ ಕ್ಯಾಮೆರಗಳನ್ನು ಅಳವಡಿಸಿಲಾಗುತ್ತಿದೆ. ಅನಗತ್ಯ ನೂಕು ನುಗ್ಗಲು ತಡೆಯಲು ಬ್ಯಾರಿಕೇಡ್ ವ್ಯವಸ್ಥೆ, ಸೂಕ್ತ ಸ್ಥಳಗಳಲ್ಲಿ ಆರಕ್ಷಕ ಸಿಬ್ಬಂದಿಗಳನ್ನು ನೇಮಿಸಿ ಬಿಗಿ ಪೊಲೀಸ್ ಬಂದೋಬಸ್ತ್, ಜೊತೆಗೆ ಭಕ್ತರಿಗೆ ಪ್ರಸಾದ, ಕುಡಿಯುವ ನೀರು, ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಭಕ್ತರಿಗೆ ವಿತರಿಸಲು 1 ಲಕ್ಷ ಲಡ್ಡು ತಯಾರಿಸಲಾಗಿದ್ದು, ಅಂದು ಪ್ರತಿ ವರ್ಷದಂತೆ ಬೆಂಗಳೂರಿನ ದಾನಿಯೊಬ್ಬರು ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ ಹಾಗೂ ಸಂಜೆ ತಿಂಡಿ ವ್ಯವಸ್ಥೆಯನ್ನೂ ಕೈಗೊಂಡಿದ್ದಾರೆ. ಅಲ್ಲದೇ ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ದೇವಾಲಯದವರೆಗೆ ಸರ್ಕಾರಿ ಬಸ್ ಸೌಲಭ್ಯಗಳನ್ನು ಒದಗಿಸಲಾಗಿದೆ.















