ಭೂಮಿ ಮೇಲಿನ ಬೃಹತ್ ಆಧ್ಯಾತ್ಮಿಕ ಸಂಗಮ, ಪ್ರಯಾಗ್ ರಾಜ್ ನ ಮಹಾ ಕುಂಭವು ತನ್ನದೇ ವಿಶಿಷ್ಟ ಕಾರಣಕ್ಕೆ ಗಮನ ಸೆಳೆಯುತ್ತಿದೆ. ಮಹಾಕುಂಭದಲ್ಲಿ 45 ಕೋಟಿ ಜನರು ಭಾಗವಹಿಸುವ ನಿರೀಕ್ಷೆ ಇದೆ. ಒಟ್ಟಾರೆಯಾಗಿ 45 ದಿನದಲ್ಲಿ ಉತ್ತರ ಪ್ರದೇಶ ಸರಕಾರ, ಕೇಂದ್ರದ ವಿವಿಧ ಇಲಾಖೆಗಳು, ವಾಣಿ ಜ್ಯೋದ್ಯಮಿಗಳು ಸೇರಿ 2 ಲಕ್ಷ ಕೋಟಿ ರೂ.ನಷ್ಟು ಆರ್ಥಿಕ ಚಟುವಟಿಕೆ ನಡೆ ಸುವ ಸಾಧ್ಯತೆ ಇದೆ.
ಜಗತ್ತಿನ ಅತೀದೊಡ್ಡ ಧಾರ್ಮಿಕ ಸಮ್ಮೇಳನವಾದ ಮಹಾ ಕುಂಭ ಆರಂಭಕ್ಕೆ ಇಡೀ ದೇಶವೇ ಕಾತರದಿಂದ ಎದುರು ನೋಡುತ್ತಿದೆ. 144 ವರ್ಷ ಗಳಿಗೊಮ್ಮೆ ಘಟಿಸುವ ಈ ಮಹಾ ಕುಂಭವು ಭಾರತದ ಸಂಸ್ಕೃತಿಯ ಪ್ರತೀ ಕವಾಗಿದ್ದು, ಉತ್ತರ ಪ್ರದೇಶ ಸರಕಾರವು 2022ರಿಂದಲೇ ಸಿದ್ಧತೆಯನ್ನು ಮಾಡಿಕೊಂಡಿದೆ.
ಮಹಾಕುಂಭ ಮೇಳವನ್ನು ಅಂತಾ ರಾಷ್ಟ್ರೀಯ ಮಟ್ಟ ದಲ್ಲಿ ಮೆರೆಸಲು ಮುಂದಾಗಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಸಜ್ಜಾಗಿದ್ದಾರೆ. ಸ್ವತ್ಛ, ಸುರಕ್ಷತೆ ಜತೆಗೆ ಈ ಬಾರಿಯದು ಡಿಜಿಟಲ್ ಕುಂಭ ಎನ್ನಬಹುದು. ಎಷ್ಟು ಸಾಧ್ಯವೋ ಅಷ್ಟರಮಟ್ಟಿಗೆ ಕುಂಭವನ್ನು ಡಿಜಿಟಲೈಸ್ ಮಾಡುವ ಜತೆಗೆ ಆನ್‌ಲೈನ್ ವಂಚನೆ ಹಾಗೂ ಸೈಬರ್ ದಾಳಿ ತಡೆಯವುದಕ್ಕೆ ವಿಶೇಷ ಒತ್ತು ನೀಡಲಾಗಿದೆ. 150 ಜನ ತಜ್ಞರನ್ನು ಒಳಗೊಂಡ ಸೈಬರ್ ಪೆಟ್ರೋಲಿಂಗ್ ವ್ಯವಸ್ಥೆ ಇದೆ. ಅನುಮಾನಾಸ್ಪದ ವೆಬ್‌ಸೈಟ್, ಒಟಿಪಿ ಆಧರಿತ ವಂಚನೆ ತಡೆಗೆ ಐಐಟಿ ಕಾನ್ಪುರದ ತಜ್ಞರನ್ನೂ ಬಳಸಿಕೊಳ್ಳಲಾಗುತ್ತಿದೆ.
13,000 ಟ್ರಿಪ್ ರೈಲು ವ್ಯವಸ್ಥೆ
ಪ್ರಯಾಗ್‌ರಾಜ್‌ನ 9 ರೈಲ್ವೇ ನಿಲ್ದಾಣಗಳು ಕುಂಭ ಮೇಳಕ್ಕೆ ಪ್ರವಾಸಿಗರನ್ನು ಸಂಪರ್ಕಿಸುವ ನರಮಂಡಲ ಎಂದರೆ ತಪ್ಪಲ್ಲ. 1000 ರೆಗ್ಯುಲರ್ ಟ್ರಿಪ್ ಜತೆಗೆ ಮುಂದಿನ 45 ದಿನಗಳ ಕಾಲ ದೇಶದ ನಾನಾ ಭಾಗಗಳಿಂದ 13,000 ಟ್ರಿಪ್ ರೈಲು ವ್ಯವಸ್ಥೆ ಮಾಡಲಾಗಿದೆ. ಕರ್ನಾಟಕದ ಮೈಸೂರಿನಿಂದ ಒಟ್ಟು 6 ವಿಶೇಷ ರೈಲನ್ನು ಪ್ರಯಾಗ್‌ರಾಜ್‌ಗೆ ಬಿಡಲಾಗುತ್ತದೆ. ಕನ್ನಡವೂ ಸೇರಿ ಒಟ್ಟು 12 ಭಾಷೆಗಳಲ್ಲಿ ಹೆಲ್ಪ್ ಲೈನ್, ಪ್ರವಾಸಿ ಮಾಹಿತಿ, ಉದ್ಘೋಷಣ ವ್ಯವಸ್ಥೆಯಿದೆ. ಕಳೆದು ಹೋದವರ ಪತ್ತೆ ಇತ್ಯಾದಿ ಸೌಲಭ್ಯಕ್ಕಾಗಿ 116 ಫೇಸ್ ರೆಕಗ್ನಿಶನ್ ಎಐ ಕೆಮರಾದ ಜತೆಗೆ 9 ನಿಲ್ದಾಣದಲ್ಲಿ 11,086 ಕೆಮರಾ ಅಳವಡಿಸಲಾಗಿದೆ.
ಭದ್ರತೆಗೆ 50 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. 50 ಅಗ್ನಿಶಾಮಕ ದಳ, 40 ಅಗ್ನಿಶಾಮಕ ವಾಚ್‌ಟವರ್, 140 ಪೊಲೀಸ್ ವಾಚ್‌ಟವರ್, 10 ಪಿಂಕ್‌ಬೂತ್, 10 ಪ್ರವಾಹ ನಿರ್ವಹಣೆ ತಂಡ, 27 ಅರೆಸೇನಾಪಡೆ, 4 ಡ್ರೋನ್ ನಿಗ್ರಹ ಪಡೆ, 2,751 ಸಿಸಿಟಿವಿ, 328 ಎಐ ಕೆಮರಾ ಅಳವಡಿಸಲಾಗಿದೆ. ಎಲ್ಲವನ್ನೂ ಏಕೀಕೃತ ಕೇಂದ್ರದಿಂದ ನಿರ್ವಹಿಸಲಾಗುತ್ತದೆ.
ಮಹಾಕುಂಭಕ್ಕಾಗಿ ಉತ್ತರ ಪ್ರದೇಶ ಸರಕಾರವು ಸುಮಾರು 7,000 ಕೋಟಿ ರೂ. ಅನ್ನು ನಾನಾ ರೀತಿಯ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಹೂಡಿಕೆ ಮಾಡುತ್ತಿದೆ. ಇದರ ಜತೆಗೆ ಕೇಂದ್ರ ಸರಕಾರದ ನೆರವು ಬೇರೆ. 2022ರಿಂದಲೇ ಈ ಬಗ್ಗೆ ಸಿದ್ಧತೆ ಪ್ರಾರಂಭವಾಗಿದ್ದು “ಪ್ರಯಾಗ್‌ರಾಜ್ ಮೇಳ ಪ್ರಾಧಿಕಾರ’ ಎಂಬ ಹೆಸರಿನಲ್ಲಿ ಮಾಸ್ಟರ್ ಪ್ಲ್ರಾನ್ ರೂಪಿಸ ಲಾಗಿತ್ತು.
ಇದು ಒಂದರ್ಥದಲ್ಲಿ “ನಭೂತೋ’ ಎಂಬ ಸಿದ್ಧತೆ. ಚಿಕ್ಕಪುಟ್ಟದ್ದೂ ಸೇರಿ ಸುಮಾರು 549 ಮೂಲ ಸೌಕರ್ಯ ಪ್ರಾಜೆಕ್ಟ್ಗಾಗಿ ಈ ಹಣ ವಿನಿಯೋಗಿಸಲಾ ಗುತ್ತಿದೆ. 10 ಸಾವಿರ ಹೆಕ್ಟೇರ್ ಪ್ರದೇಶವನ್ನು ಗುರುತಿಸಿ ಅದನ್ನು 25 ಸೆಕ್ಟರ್‌ಗಳಲ್ಲಿ ವಿಭಜಿಸಿ ಯೋಜನೆ ರೂಪಿಸಲಾಗಿದೆ. ಕುಂಭದ ಸೆಂಟರ್ ಆಫ್ ಅಟ್ರಾಕ್ಷನ್ ಎಂದು ಪರಿಗಣಿಸಲ್ಪಟ್ಟ ಸಂಗಮ ಪ್ರದೇಶದಲ್ಲಿ 1,850 ಹೆಕ್ಟೇರ್ ಪ್ರದೇಶದಲ್ಲಿ ಪಾರ್ಕಿಂಗ್ ಏರಿಯಾ ಸ್ಥಾಪಿಸಲಾಗಿದೆ.
ಇಲ್ಲಿ ಸ್ಥಳೀಯ ವಾಹನಗಳನ್ನು ಹೊರತುಪಡಿಸಿ 5 ಲಕ್ಷ ಕಾರುಗಳನ್ನು ನಿಲ್ಲಿಸಬಹುದಂತೆ. ಇದುವರೆಗೆ 14 ಫ್ಲೈಓವರ್,14 ಅಂಡರ್‌ಪಾಸ್, 9 ಕಾಂಕ್ರಿಟ್ ಘಾಟ್, ನದಿ ಪ್ರದೇಶದಲ್ಲಿ 7 ಸುಸಜ್ಜಿತ ರಸ್ತೆ, 12 ಕಿಮೀ ಉದ್ದದ ತಾತ್ಕಾಲಿಕ ಘಾಟ್, 1.5 ಲಕ್ಷ ಶೌಚಾಲಯ, 10 ಸಾವಿರ ನೈರ್ಮಲ್ಯ ಕಾರ್ಯಕರ್ತರು, 1.6 ಲಕ್ಷ ಟೆಂಟ್ (ಟೆಂಟ್ ಸಿಟಿ ) , 67 ಸಾವಿರ ಬೀದಿ ದೀಪ, 2000 ಸೋಲಾರ್ ಹೈಬ್ರಿಡ್ ಬೀದಿ ದೀಪ, 2 ವಿದ್ಯುತ್ ಸಬ್ ಸ್ಟೇಷನ್, 66 ಹೊಸ ಟ್ರಾನ್ಸ್‌ಫಾರ್ಮರ್, 10 ಸಾವಿರ ವಿದ್ಯುತ್ ಕಂಬ, 1249 ಕಿಮೀ ಉದ್ದದ ಕುಡಿಯುವ ನೀರಿನ ಪೈಪ್‌ಲೈನ್, 200 ವಾಟರ್ ಎಟಿಎಂ, 300 ಫಂಟೂನ್ ಬ್ರಿಡ್ಜ್, ಪ್ರಯಾಣಿಕರನ್ನು ಸಂಗಮಕ್ಕೆ ಕರೆದೊಯ್ಯಲು 5000 ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಹೋಗೋದು ಹೇಗೆ?
ಬೆಂಗಳೂರಿನಿಂದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ಗೆ ವಿಮಾನ, ರೈಲು ಮತ್ತು ರಸ್ತೆ ಮಾರ್ಗವಾಗಿ ಹೋಗಬ ಹುದು. ಸಂಗಮಿತ್ರ ಎಕ್ಸ್‌ಪ್ರೆಸ್ ಮತ್ತು ಪಾಟಲಿಪುತ್ರ ಎಕ್ಸ್ ಪ್ರಸ್ ರೈಲುಗಳ ಮೂಲಕ ಪ್ರಯಾಗ್‌ರಾಜ್‌ಗೆ ತಲುಪಬ ಹುದು. ಜತೆಗೆ ಮೈಸೂರಿನಿಂದ ವಿಶೇಷ ರೈಲುಗಳ ಸೌಲಭ್ಯವಿದೆ. ಹೆಚ್ಚು ಕಡಿಮೆ 40 ಗಂಟೆ ಸಮಯ ಬೇಕು. ಮೈಸೂರು ವಾರಾಣಸಿ ಎಕ್ಸ್ ಪ್ರಸ್ ರೈಲು ಮೂಲಕವೂ ತಲುಪಬಹುದು.
ಇನ್ನು ನೇರವಾಗಿ ಬೆಂಗಳೂರು- ಪ್ರಯಾ ಗ್ ರಾಜ್‌ಗೆ ದೇಶಿಯ ವಿಮಾನ ಸೇವೆ ಲಭ್ಯವಿದೆ. ಇಲ್ಲವೇ ಬೆಂಗಳೂರಿಂದ ವಾರಾಣಸಿಗೆ ವಿಮಾನ ಮೂಲಕ ಹೋಗಿ ಅಲ್ಲಿಂದ ಪ್ರಯಾಗ್‌ರಾಜ್‌ಗೆ ಹೋಗಬಹುದು ಮತ್ತು 3 ಗಂಟೆ ಸಮಯ ಬೇಕಾಗುತ್ತದೆ. ಬೆಂಗಳೂರಿಂದ ಹೈದರಾಬಾದ್, ಜಬಲ್ಪುರ ಮೂಲಕ ಪ್ರಯಾಗ್‌ರಾಜ್‌ಗೆ ರಸ್ತೆ ಮೂಲಕ ತಲುಪಬಹುದು.
ವಸತಿಗೆ kumbh.gov.in ವೆಬ್‌ಸೈಟ್‌ಗೆ ಭೇಟಿ ನೀಡಿ
ಪ್ರಯಾಗ್‌ರಾಜ್‌ನ ಮಹಾ ಕುಂಭ ಮೇಳದಲ್ಲಿ ನಿರ್ಮಿಸಲಾಗಿರುವ ಟೆಂಟ್‌ಗಳಲ್ಲಿ ವಸತಿ ಸೌಲಭ್ಯವಿದೆ. kumbh.gov.in ವೆಬ್‌ಸೈಟ್ ಮೂಲಕ ಮುಂಗಡವಾಗಿ ಬುಕ್ ಮಾಡಿಕೊಳ್ಳಬಹುದು. ದಿನಕ್ಕೆ 1,500 ರೂ.ನಿಂದ 35,000 ರೂ.ವರೆಗೆ ಶುಲ್ಕವಿದೆ. ಪ್ರಯಾಗ್ ರಾಜ್ ಸಿಟಿಯಲ್ಲೂ ಸಾಕಷ್ಟು ಹೊಟೇಲ್‌ಗಳು, ಲಾಡ್ಜ್ಗಳಿವೆ ಬುಕ್ಕಿಂಗ್ ಮಾಡಿಕೊಳ್ಳಬಹುದು.