ಮನೆ ಕ್ರೀಡೆ ಮಹಾರಾಜ ಟ್ರೋಫಿ: ಮಂಗಳೂರು ಯುನೈಟೆಡ್‌ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್‌ ಗೆ 66 ರನ್‌ ಗಳ ಜಯ

ಮಹಾರಾಜ ಟ್ರೋಫಿ: ಮಂಗಳೂರು ಯುನೈಟೆಡ್‌ ವಿರುದ್ಧ ಬೆಂಗಳೂರು ಬ್ಲಾಸ್ಟರ್ಸ್‌ ಗೆ 66 ರನ್‌ ಗಳ ಜಯ

0

ಮೈಸೂರು (Mysuru): ಮಹಾರಾಜ ಟ್ರೋಫಿ 2022 ಟೂರ್ನಿಯ 17ನೇ ಲೀಗ್‌ ಪಂದ್ಯದಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡ ಮಂಗಳೂರು ಯುನೈಟೆಡ್ ವಿರುದ್ಧ 66 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

ಗೆಲ್ಲಲು 192 ರನ್ ಗಳ ಬೃಹತ್ ಮೊತ್ತವನ್ನು ಬೆನ್ನತ್ತಿದ ಮಂಗಳೂರು ಯುನೈಟೆಡ್ 16 ಓವರ್‌ಗಳಲ್ಲೇ 125 ರನ್‌ಗಳಿಗೆ ಆಲ್‌ಔಟ್‌ ಆಯಿತು. ಮಂಗಳೂರು ತಂಡದ ಪರ ಕ್ಯಾಪ್ಟರ್‌ ರವಿಕುಮಾರ್‌ ಸಮರ್ಥ್ (32), ಅಭಿನವ್ ಮನೋಹರ್ (23) ಮತ್ತು ಶರತ್ (22*) ಹೊರತುಪಡಿಸಿದರೆ ಉಳಿದ ಬ್ಯಾಟರ್‌ಗಳು ಬೆಂಗಳೂರು ಬ್ಲಾಸ್ಟರ್ಸ್‌ ತಂಡದ ಬೌಲಿಂಗ್ ದಾಳಿಯನ್ನು ಎದುರಿಸುವಲ್ಲಿ ಸಂಪೂರ್ಣ ವಿಫಲರಾದರು. ಬ್ಲಾಸ್ಟರ್ಸ್‌ ಪರ ವೇಗಿ ಪ್ರದೀಪ್ ಹಾಗೂ ರಿಶಿ ಬೋಪಣ್ಣ ತಲಾ 3 ವಿಕೆಟ್ ಪಡೆಯುವ ಮೂಲಕ ತಂಡದ ಭರ್ಜರಿ ಗೆಲುವಿಗೆ ಕಾರಣರಾದರು.

ಇದಕ್ಕೂ ಮುನ್ನ ಅನಿರುದ್ಧ ಜೋಶಿ ಅವರ ಮಿಂಚಿನ ಅರ್ಧ ಶತಕದ ನೆರವಿನಿಂದ ಬೆಂಗಳೂರು ಬ್ಲಾಸ್ಟರ್ಸ್‌ ತಂಡ ಮಂಗಳೂರು ಯುನೈಟೆಡ್‌ ಎದುರು ತನ್ನ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 191 ರನ್‌ಗಳ ಬೃಹತ್‌ ಮೊತ್ತ ದಾಖಲಿಸಿತು. ಕೇವಲ 24 ಎಸೆತಗಳನ್ನು ಎದುರಿಸಿದ ಜೋಶಿ, 7 ಬೌಂಡರಿ ಹಾಗೂ 3 ಸಿಕ್ಸರ್‌ ಒಳಗೊಂಡ ಅಜೇಯ 57 ರನ್‌ ಸಿಡಿಸಿ ತಂಡದ ಬೃಹತ್‌ ಮೊತ್ತಕ್ಕೆ ಕಲೆಹಾಕಲು ನೆರವಾದರು.

ಯುವ ಬೌಲರ್‌ ಅನೀಶ್ವರ್‌ ಗೌತಮ್‌ ಆರಂಭಿಕ ಜೊತೆಯಾಟವನ್ನು ಬೇಗನೆ ಮುರಿದರು. ಆದರೆ ಬ್ಲಾಸ್ಟರ್ಸ್‌ ನಾಯಕ ಮಯಾಂಕ್‌ ಅಗರ್ವಾಲ್‌ (47) ಹಾಗೂ ಕೆ.ವಿ ಅನೀಶ್‌ (40) 3ನೇ ವಿಕೆಟ್‌ಗೆ 74 ರನ್‌ಗಳ ಜೊತೆಯಾಟವಾಡಿ ತಂಡದ ಬೃಹತ್‌ ಮೊತ್ತಕ್ಕೆ ಬೇಕಿದ್ದ ಭದ್ರ ಅಡಿಪಾಯ ಹಾಕಿದರು.

ಆದರೆ ಶಶಿಕುಮಾರ್‌ ಬೌಲಿಂಗ್‌ನಲ್ಲಿ ವಿಕೆಟ್‌ ಕೈಚೆಲ್ಲಿದ ಮಯಾಂಕ್ 3 ರನ್‌ ಅಂತರದಲ್ಲಿ ಅರ್ಧಶತಕ ವಂಚಿತರಾದರು. ಮಯಾಂಕ್‌ ವಿಕೆಟ್‌ ಪತನವಾದರೂ ಬೆಂಗಳೂರು ತಂಡದ ರನ್‌ ಗಳಿಕೆಯ ವೇಗಕ್ಕೆ ಬ್ರೇಕ್ ಬೀಳಲಿಲ್ಲ. ಅನೀಶ್‌ 32 ಎಸೆತಗಳಲ್ಲಿ 1 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 40 ರನ್‌ ಸಿಡಿಸಿ ಉತ್ತಮ ಸಾಥ್‌ ನೀಡಿದರು. ಬಳಿಕ ಶಿವಕುಮಾರ್‌ ರಕ್ಷಿತ್‌, ಎದುರಿಸಿದ 24 ಎಸೆತಗಳಲ್ಲಿ 3 ಬೌಂಡರಿ ಮತ್ತು 1 ಸಿಕ್ಸರ್‌ ಮೂಲಕ 34 ರನ್‌ಗಳಿಸಿ ಅನಿರುದ್ಧ ಜೋಶಿಗೆ ಉತ್ತಮ ಬೆಂಬಲ ನೀಡಿದರು.

ಸಂಕ್ಷಿಪ್ತ ಸ್ಕೋರ್‌

ಬೆಂಗಳೂರು ಬ್ಲಾಸ್ಟರ್ಸ್‌: 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 191 ರನ್‌ (ಮಯಾಂಕ್‌ ಅಗರ್ವಾಲ್‌ 47, ಅನೀಶ್‌ 40, ಶಿವಕುಮಾರ್‌ ರಕ್ಷಿತ್‌ 34, ಅನಿರುಧ ಜೋಶಿ 57*; ಅನೀಶ್ವರ್‌ ಗೌತಮ್‌ 25ಕ್ಕೆ 1, ಶರತ್‌ 49ಕ್ಕೆ 1, ಶಶಿಕುಮಾರ್‌ 21ಕ್ಕೆ 1, ಆದಿತ್ಯ ಸೋಮಣ್ಣ 19ಕ್ಕೆ 1).

ಮಂಗಳೂರು ಯುನೈಟೆಡ್‌: 16 ಓವರ್‌ಗಳಲ್ಲಿ 125 ರನ್‌ಗಳಿಗೆ ಆಲ್‌ಔಟ್‌ (ರವಿಕುಮಾರ್‌ ಸಮರ್ಥ 32, ಅಭಿನವ್ ಮನೋಹರ್ 23, ಶರತ್ 22*; ರವಿ ಬೋಪಣ್ಣ 26ಕ್ಕೆ 3, ಪ್ರದೀಪ್ 20ಕ್ಕೆ3).