ಮುಂಬೈ: ಬಸ್ ಕಣಿವೆಗೆ ಉರುಳಿ 8 ಮಂದಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಪುಣೆ- ಮುಂಬೈ ಹೆದ್ದಾರಿಯಲ್ಲಿ ಶನಿವಾರ ಬೆಳಗಿನ ಜಾವ ನಡೆದಿದೆ.
ಅಪಘಾತದಲ್ಲಿ 25 ಮಂದಿ ಗಾಯಗೊಂಡಿದ್ದಾರೆ.
40 ಜನರಿದ್ದ ಖಾಸಗಿ ಬಸ್ ಪುಣೆಯಿಂದ ಮುಂಬೈ ಕಡೆಗೆ ಹೋಗುತ್ತಿತ್ತು. ಬೆಳಗಿನ ಜಾವ 4 ಗಂಟೆ ಸುಮಾರಿಗೆ ಪ್ರಯಾಣಿಕರು ನಿದ್ರೆಯಲ್ಲಿದ್ದಾಗ ಪುಣೆ ಮುಂಬೈ ಹೆದ್ದಾರಿಯ ಖೋಪೋಲಿಯಲ್ಲಿ ವೇಗವಾಗಿ ಸಾಗುತ್ತಿದ್ದಾಗ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ. ಇದರಿಂದ ಬಸ್ ನುಜ್ಜುಗುಜ್ಜಾಗಿದ್ದು, ಸ್ಥಳದಲ್ಲಿ 8 ಮಂದಿ ಅಸುನೀಗಿದ್ದಾರೆ.
25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದಾರೆ. ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಮಾಹಿತಿ ತಿಳಿದ ತಕ್ಷಣ ಘಟನಾ ಸ್ಥಳಕ್ಕೆ ಬಂದ ರಕ್ಷಣಾ ಪಡೆ ಸಿಬ್ಬಂದಿ ಬಸ್ ನಲ್ಲಿದ್ದ ಜನರನ್ನು ರಕ್ಷಣೆ ಮಾಡಿದರು.
ಬಸ್ ಬಿದ್ದ ರಭಸದ ಆಧಾರದ ಮೇಲೆ ಅತಿಯಾದ ವೇಗವೇ ಇದಕ್ಕೆ ಕಾರಣ ಎಂದು ಪೊಲೀಸರು ಶಂಕಿಸಿದ್ದಾರೆ.
ಬಸ್ 40 ರಿಂದ 50 ಅಡಿ ಆಳ ಕಂದಕದಲ್ಲಿ ಉರುಳಿ ಬಿದ್ದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಹಗ್ಗಗಳ ಸಹಾಯದಿಂದ ಸ್ಥಳೀಯರು, ರಕ್ಷಣಾ ಪಡೆಯ ಸಿಬ್ಬಂದಿ ಜನರ ರಕ್ಷಣೆಗೆ ಧಾವಿಸಿದರು. ಆಳದಿಂದ ಗಾಯಾಳುಗಳನ್ನು ಮೇಲೆತ್ತುವುದೇ ಸವಾಲಾಯಿತು ಎಂದು ಪೊಲೀಸರು ತಿಳಿಸಿದರು.
ಭೀಕರ ಅಪಘಾತದ ಸ್ಥಳಕ್ಕೆ ಖಾಸಗಿ ಆಸ್ಪತ್ರೆಗಳ ವೈದ್ಯರನ್ನೂ ಚಿಕಿತ್ಸೆಗೆ ಕರೆಸಲಾಗಿದೆ. ಖಾಸಗಿ ಬಸ್ ನಲ್ಲಿ ಗೋರೆಗಾಂವ್ (ಮುಂಬೈ) ವ್ಯಕ್ತಿಗಳಿದ್ದಾರೆ.