ಬೆಂಗಳೂರು: ಲೋಕಸಭೆ ಚುನಾವಣೆ ನಂತರ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ ಎಂದು ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಸುಳಿವು ನೀಡಿದ್ದಾರೆ.
ತೆರೆಯ ಮರೆಯಲ್ಲಿ ಕರ್ನಾಟಕದ ಬಿಜೆಪಿ ನಾಯಕರಿಂದಲೇ ತಮಗೆ ಆಪರೇಷನ್ ಮಾಡಲು ಆಹ್ವಾನವಿದೆ ಎಂದಿರುವ ಅವರು, ‘ನಾಥ್’ ಮಾದರಿ ಆಪರೇಷನ್ ಮಹಾರಾಷ್ಟ್ರದಲ್ಲಿ ಖ್ಯಾತಿ ಗಳಿಸಿದೆ. ಅದೇ ಮಾದರಿಯ ಆಪರೇಷನ್ ಗೆ ಕರ್ನಾಟಕದಿಂದಲೂ ಆಹ್ವಾನವಿದೆ ಎಂದಿದ್ದಾರೆ.
ಮಹಾರಾಷ್ಟ್ರದ ಸತರಾ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಮೇ 9 ರಂದು ಏಕನಾಥ್ ಶಿಂಧೆ ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಆಗ ಮಾತನಾಡಿದ್ದ ಶಿಂಧೆ, ಲೋಕಸಭೆಯ ನಂತರ ಕರ್ನಾಟಕ ಸರ್ಕಾರ ಪತನವಾಗಲಿದೆ ಎಂದು ಹೇಳಿದ್ದರು.
ಚುನಾವಣಾ ಪ್ರಚಾರದ ನಿಮಿತ್ತ ಬೆಳಗಾವಿಗೆ ಹೋಗಿದ್ದಾಗ ಅಲ್ಲಿನ ಬಿಜೆಪಿ ಪದಾಧಿಕಾರಿಗಳು ಮಹಾರಾಷ್ಟ್ರದ ಮುಖ್ಯಮಂತ್ರಿಯಾದ ನನ್ನನ್ನು ಭೇಟಿಯಾಗಲು ಉತ್ಸುಕತೆಯಿಂದ ಬಂದಿದ್ದರು. ಈ ‘ನಾಥ’ ಯಾರೆಂದು ನೋಡಲು ಬಯಸಿದ್ದರು. ಆಗ, ಲೋಕಸಭೆ ಚುನಾವಣೆ ನಂತರ ಮಹಾರಾಷ್ಟ್ರದಂತೆ ಕರ್ನಾಟಕದಲ್ಲೂ ‘ನಾಥ್’ ಮಾದರಿ ಆಪರೇಷನ್ಗೆ ಮನವಿ ಮಾಡಿದ್ದರು ಎಂದು ಶಿಂಧೆ ಹೇಳಿದ್ದಾರೆ.
ಆದರೆ, ಕರ್ನಾಟಕ ಸರ್ಕಾರ ಚುನಾವಣೆ ನಂತರ ಪತನವಾಗಲಿದೆಯೇ ಎಂಬ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಲು ಶಿಂಧೆ ನಿರಾಕರಿಸಿದ್ದಾರೆ.